ಭಾಸ್ಕರ್ ಶೆಟ್ಟಿ ಕೊಲೆ: ನಿರಂಜನ್ ಭಟ್ ಜಾಮೀನು ಅರ್ಜಿ ತಿರಸ್ಕೃತ
ಉಡುಪಿ, ಮೇ 10: ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಜ್ಯೋತಿಷಿ ನಂದಳಿಕೆಯ ನಿರಂಜನ್ ಭಟ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ.
ನಿರಂಜನ್ ಭಟ್ ಜಾಮೀನು ಕೋರಿ ಸಲ್ಲಿಸಿದ ಮೇಲ್ಮನವಿಯನ್ನು ವಜಾ ಗೊಳಿಸಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಸ್. ಎಸ್.ಎ.ಬೊಬಡೆ ಹಾಗೂ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅವರನ್ನೊಳಗೊಂಡ ಪೀಠ, ಕೆಲವು ವಸ್ತುಗಳ ಸಾಕ್ಷ ಪರಿಶೀಲನೆ ಇನ್ನೂ ಬಾಕಿ ಇರುವುದರಿಂದ ಅರ್ಜಿಯನ್ನು ತಿರಸ್ಕರಿಸುತ್ತಿರುವುದಾಗಿ ಹೇಳಿದೆ.
ಈ ಸಾಕ್ಷಗಳ ಪರಿಶೀಲನೆಯನ್ನು ಆರು ತಿಂಗಳೊಳಗೆ ಪೂರ್ಣ ಗೊಳಿಸುವಂತೆಯೂ ಕೋರ್ಟ್ ಆದೇಶಿಸಿದೆ. ಆರು ತಿಂಗಳ ಬಳಿಕ ಮತ್ತೊಮ್ಮೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಿದ್ದಾರೆ ಎಂದು ಪೀಠ ತಿಳಿಸಿದೆ.
ಹೈಕೋರ್ಟ್‌ನಲ್ಲಿ ಜಾಮೀನು ನಿರಾಕರಣೆಯಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವರಾಗಿರುವ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿಗೆ ನ್ಯಾಯಾಲಯ ಈಗಾಗಲೇ ಜಾಮೀನು ನೀಡಿದೆ. ಉಳಿದಿಬ್ಬರು ಆರೋಪಿಗಳಾದ ನಿರಂಜನ್ ಭಟ್ ಮತ್ತು ನವನೀತ ಶೆಟ್ಟಿ ಬೆಂಗಳೂರಿನ ಜೈಲಿನಲ್ಲಿದ್ದಾರೆ. ಸಾಕ್ಷನಾಶ ಆರೋಪ ಎದುರಿಸುತ್ತಿರುವ ಶ್ರೀನಿವಾಸ ಭಟ್ ಮತ್ತು ಚಾಲಕ ರಾಘವೇಂದ್ರ ಅವರಿಗೆ ತನಿಖಾ ಹಂತದಲ್ಲಿ ಜಾಮೀನು ಮಂಜೂರಾಗಿತ್ತು.
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು 184 ಸಾಕ್ಷಿಗಳ ಪೈಕಿ ಇನ್ನು ಕೆಲವೇ ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಈ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾಗಿ ಉಡುಪಿಯ ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿ ವಾದಿಸುತಿದ್ದಾರೆ. ಮುಂದಿನ ವಿಚಾರಣೆ ಜೂ.26, 27 ಮತ್ತು 28ಕ್ಕೆ ನಿಗದಿಯಾಗಿದೆ.