ಪಲಿಮಾರು ಮಠ: ಶೈಲೇಶ್ ಉಪಾಧ್ಯಾಯಗೆ ಸನ್ಯಾಸ ದೀಕ್ಷೆ

Update: 2019-05-10 16:35 GMT

ಉಡುಪಿ, ಮೇ 10: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟ ಕಂಬ್ಲಕಟ್ಟ ಶೈಲೇಶ್ ಉಪಾಧ್ಯಾಯಗೆ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾದೀಶ ತೀರ್ಥರು ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ಇಂದು ಮುಂಜಾನೆ ಬ್ರಾಹ್ಮಿಮುಹೂರ್ತದಲ್ಲಿ ಬೆಳಗ್ಗೆ 3:57ಕ್ಕೆ ಪ್ರಣವೋಪದೇಶಪುರಸ್ಸರ ಸನ್ಯಾಸ ದೀಕ್ಷೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದರು.

ಇದಕ್ಕೆ ಪೂರ್ವಭಾವಿಯಾಗಿ ವಿವಿಧ ವಿಧಿವಿಧಾನಗಳೊಂದಿಗೆ ಶಾಕಲ ಹೋಮ, ಜಾಗರಣೆಯ ಸಮಯದಲ್ಲಿ ಭಾಗವತ ಶ್ರವಣ,ವಿರಜಾ ಮಂತ್ರ ಹೋಮ ಮೊದಲಾದ ಧಾರ್ಮಿಕ ವಿಧಿಗಳನ್ನು ವಿದ್ವಾಂಸರಾದ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಹಾಗೂ ವೈಧಿಕ ವೃಂದದವರು ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೀಶ ಆಚಾರ್ಯ, ರಾಜ ಗೋಪಾಲ ಆಚಾರ್ಯ, ವಾಸುದೇವ ಉಪಾಧ್ಯಾಯ, ಗಿರೀಶ ಉಪಾಧ್ಯಾಯ ಹಾಗೂ ಶೈಲೇಶ್‌ರ ಮಾತಾಪಿತೃಗಳು ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.

ಪಲಿಮಾರು ಮಠದ ತಮ್ಮ ಉತ್ತರಾಧಿಕಾರಿಯಾಗಿ ಪಲಿಮಾರಿನಲ್ಲಿ ತಮ್ಮದೇ ಶ್ರೀಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ನಡೆಸುತ್ತಿರುವ ಶೈಲೇಶ್ ಉಪಾಧ್ಯಾಯರನ್ನು ಆಯ್ಕೆ ಮಾಡಿರುವ ಶ್ರೀವಿದ್ಯಾಧೀಶ ತೀರ್ಥರು ಮೇ 12ರ ರವಿವಾರ ಆತನನ್ನು ಶಿಷ್ಯ ಸ್ವೀಕಾರ ಮಾಡಲಿದ್ದಾರೆ.

ಪಲಿಮಾರು ಮಠದ ಉತ್ತರಾಧಿಕಾರಿಯ ಸನ್ಯಾಸ ಧೀಕ್ಷೆಯ ಸಂದರ್ಭದಲ್ಲಿ ತಿರುಪತಿ ಶ್ರೀನಿವಾಸ ದೇವರ ಪ್ರಸಾದವನ್ನು ಅಲ್ಲಿನ ಅರ್ಚಕ ವೃಂದದವರು ವೇದಘೋಷ ಸಹಿತ ಪರ್ಯಾಯ ಶ್ರೀವಿದ್ಯಾಧೀಶತೀರ್ಥ ಶ್ರೀ ಹಾಗೂ ಶ್ರೀರಘುವರೇಂದ್ರ ತೀರ್ಥರು ಮತ್ತು ಪರ್ಯಾಯ ಶ್ರೀ ನೂತನ ಶಿಷ್ಯರಿಗೆ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News