ಸರ ಕಳವು: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಮೇ 10: ಸಮೀಪದ ನಾಗುರಿಯಲ್ಲಿ ಮಹಿಳೆಯೊಬ್ಬರ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಡೀಲ್ ಜಂಕ್ಷನ್‌ನಲ್ಲಿ ಕಂಕನಾಡಿ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕುಲಶೇಖರ ನಿವಾಸಿಗಳಾದ ಹರ್ಷಿತ್ ಶೆಟ್ಟಿ ಯಾನೆ ಹರ್ಷಿತ್ (25), ಹವಿತ್ ಪೂಜಾರಿ (24) ಬಂಧಿತ ಆರೋಪಿಗಳು.
ಘಟನೆ ವಿವರ: ಆರೋಪಿಗಳು ಎಪ್ರಿಲ್ 22ರಂದು ಮಧ್ಯಾಹ್ನ ನಾಗುರಿಯ ಚರ್ಚ್‌ವೊಂದರ ಸಮೀಪದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ದಾರಿ ಕೇಳುವ ನೆಪದಲ್ಲಿ, ಕುತ್ತಿಗೆಯಿಂದ ಚಿನ್ನದ ಕರಿಮಣಿಸರ ದರೋಡೆಗೈದಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ದರೋಡೆಗೈದ 50 ಸಾವಿರ ರೂ. ಮೌಲ್ಯದ ಚಿನ್ನದ ಕರಿಮಣಿಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 60 ಸಾವಿರ ರೂ. ಮೌಲ್ಯದ ಬೈಕ್‌ನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.ಸ್ವಾಧೀನಪಡಿಸಿಕೊಂಡ ಸೊತ್ತುಗಳ ಮೌಲ್ಯ 1,10,000 ರೂ. ಎಂದು ಅಂದಾಜಿಸಲಾಗಿದೆ.ಆರೋಪಿಗಳಾದ ಹರ್ಷಿತ್ ಶೆಟ್ಟಿ ಮತ್ತು ಹವಿತ್ ಪೂಜಾರಿ ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಲವು ಪ್ರಕರಣ: ಆರೋಪಿಗಳ ಪೈಕಿ ಹರ್ಷಿತ್ ಶೆಟ್ಟಿ ಎಂಬಾತನ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಹಾಗೂ ದರೋಡೆಗೆ ಯತ್ನ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಪ್ರಕರಣ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಇನ್ನೊರ್ವ ಆರೋಪಿ ಹವಿತ್ ಪೂಜಾರಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣಗಳು ದಾಖಲಾಗಿವೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ರಾಮರಾವ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಗದೀಶ್ ಆರ್., ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ.ಆರ್., ಪ್ರೊಬೇಶನರಿ ಪಿಎಸ್ಸೈ ಸುದೀಪ್ ಹಾಗೂ ಸಿಬ್ಬಂದಿ ಸಂತೋಷ್, ಮದನ್, ವಿನೋದ್, ರಾಜೇಶ್, ಸತೀಶ್, ನೂತನ್, ಸಂದೀಪ್, ಭರಣಿ ದೀಕ್ಷಿತ್, ಕಾರ್ತಿಕ್, ಜೀವನ್ ಮತ್ತು ಮೇಘರಾಜ್ ಭಾಗವಹಿಸಿದ್ದರು.