ಚಾರಣಕ್ಕೆಂದು ಬಂದಿದ್ದ ಹಾಸನ ಯುವಕ ಅವಘಾತಕ್ಕೆ ಬಲಿ

Update: 2019-05-10 17:10 GMT

ಮಂಗಳೂರು, ಮೇ 10: ಚಾರಣಕ್ಕೆಂದು ಹಾಸನದಿಂದ ಆಗಮಿಸಿ ಉಡುಪಿಯತ್ತ ತೆರಳುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಹಾಸನದ ಶರತ್ ಗೌಡ(25) ಮೃತಪಟ್ಟವರು. ಇವರು ಹಾಸನದಲ್ಲಿ ವ್ಯಾಪಾರ ನಡೆಸುತ್ತಿದ್ದರು.

ಮೇ 9ರಂದು ನಿಖಿಲ್ ಜಿ.ಪಿ., ಶರತ್ ಗೌಡ, ಅವಿನಾಶ್ ಪ್ರತ್ಯೇಕ ಮೂರು ಬೈಕ್‌ಗಳಲ್ಲಿ ಚಾರಣಕ್ಕೆಂದು ಹಾಸನದಿಂದ ಆಗಮಿಸಿದ್ದರು. ಶುಕ್ರವಾರ ನಸುಕಿನ ಜಾವ 4:25ರ ಸುಮಾರು ನಿಖಿಲ್, ಅವಿನಾಶ್‌ರ ಮುಂದಿನಿಂದ ಶರತ್‌ಗೌಡ ಬೈಕ್‌ನಲ್ಲಿ ತೆರಳುತ್ತಿದ್ದಾಗ ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಹತ್ತಿರ ಹಂಪ್ ಇರುವುದು ಗಮನಕ್ಕೆ ಬಾರದೆ ಬೈಕ್ ನಿಯಂತ್ರಣ ತಪ್ಪಿ ಅವಘಡಕ್ಕೀಡಾಗಿದೆ.

ಇದರಿಂದ ಟೋಲ್‌ಗೇಟ್ ಲೇನಿನ ಎಡಬದಿಯ ತಡೆಗೋಡೆಗೆ ಬೈಕ್ ಢಿಕ್ಕಿಯಾಗಿದ್ದು, ಇದರಿಂದ ಶರತ್‌ಗೌಡರ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಬೀದಿದೀಪ ಇರಲಿಲ್ಲ: ಟೋಲ್‌ಗೇಟ್ ಬಳಿಯಿರುವ ಬೀದಿದೀಪ ಇಲ್ಲದ ಕಾರಣ ಬೈಕ್ ಸವಾರನಿಗೆ ಹಂಪ್ ಇರುವುದು ಕಂಡಿರಲಿಲ್ಲ. ವೇಗವಾಗಿ ಬಂದ ಬೈಕ್ ಸವಾರನ ನಿಯಂತ್ರಣ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ.
ಈ ಕುರಿತು ಸುರತ್ಕಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News