ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಬೆಲೆ ತಾರತಮ್ಯ; ಆರೋಪ
ಮಂಗಳೂರು, ಮೇ 10: ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಬೆಲೆ ಒಂದು ರೀತಿ ಇದ್ದರೆ, ಬಲ್ಮಠದ ಬಂಕ್‌ವೊಂದರಲ್ಲಿ ಮತ್ತೊಂದು ಬೆಲೆ ಇರುತ್ತದೆ. ಹೆಚ್ಚುವರಿ ದರ ವಿಧಿಸುವುದರ ಮೂಲಕ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಬಲ್ಮಠದ ಆಟೊರಿಕ್ಷಾ ಚಾಲಕರು ಪೆಟ್ರೋಲ್ ಬಂಕ್ ಎದುರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಮಂಗಳೂರು ರಿಕ್ಷಾ ಘಟಕದ ಗೌರವ ಸಲಹೆಗಾರ ಅರುಣ್‌ಕುಮಾರ್, ಮಂಗಳೂರಿನಲ್ಲಿರುವ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿ ಲೀಟರ್ ಆಟೊ ಎಲ್ ಪಿಜಿಗೆ 42.50 ರೂ. ದರವಿದ್ದರೆ, ಆಟೋರಿಕ್ಷಾ ಚಾಲಕರು ಮತ್ತು ಮಾಲಕರ ಮೈಕ್ರೋ ಸೊಸೈಟಿಯಿಂದ ನಡೆಸಲಾಗುತ್ತಿರುವ ಬಂಕ್‌ನಲ್ಲಿ 43.19 ರೂ.ನಂತೆ ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ. ಪ್ರತಿ ಲೀಟರ್‌ಗೆ ಹೆಚ್ಚವರಿ ಹಣ ಪಡೆಯುತ್ತಿರುವ ಬಗ್ಗೆ ಪ್ರಶ್ನಿಸಿದರೆ ಸಿಬ್ಬಂದಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದರು.
ಮಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಬೆಲೆಯು ಏಕರೂಪದಲ್ಲಿರಬೇಕು. ಬಂಕ್‌ಗೆ ಸಂಬಂಧಿಸಿದವರು ಮನಸೋ ಇಚ್ಛೆ ಬೆಲೆ ಹೆಚ್ಚಳ ಮಾಡುವಂತಾದರೆ, ರಿಕ್ಷಾ ಚಾಲಕರು ಕೂಡ ಪ್ರಯಾಣಿಕರಿಂದ ಹೆಚ್ಚುವರಿ ಬಾಡಿಗೆ ವಸೂಲಿ ಮಾಡಬಹುದಾಗಿದೆ. ಬಂಕ್‌ನವರಿಗೆ ಒಂದು ಕಾನೂನು, ನಮಗೊಂದು ಕಾನೂನು ಎಂದರೆ ಹೇಗಾಗುತ್ತದೆ ? ಇದು ಯಾವ ನ್ಯಾಯ ? ಆಟೊ ಚಾಲಕರಿಗೆ ಕೂಡಲೇ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಲೀಟರ್‌ಗೆ 69 ಪೈಸೆ ಹೆಚ್ಚುವರಿ ಹಣ ವಸೂಲಿ ಮಾಡಿದರೆ 10 ಲೀಟರ್‌ಗೆ 6.90 ರೂ. ಪೋಲಾಗುತ್ತದೆ. ಮೈಕ್ರೋ ಸೊಸೈಟಿಯು ಚಾಲಕರಿಂದ ಹಾಡುಹಗಲೇ ದರೋಡೆ ಮಾಡುತ್ತಿದೆ. ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯೊಬ್ಬರಿಗೆ ಸೇರಿದ ಬಂಕ್‌ನಲ್ಲಿಯೇ ಇಂತಹ ಅವ್ಯವಹಾರ ನಡೆಯುತ್ತಿದ್ದು, ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಂಗಳೂರು ರಿಕ್ಷಾ ಘಟಕದ ಅಧ್ಯಕ್ಷ ಸಂತೋಷ್‌ಕುಮಾರ್, ಉಪಾಧ್ಯಕ್ಷ ರೋಶನ್, ಜೆರಾಲ್ಡ್ ಡಿಕುನ್ಹ, ಉಮೇಶ್, ವಸಂತ್, ಆನಂದ್, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.