ಊರಿನ ಮುಸ್ಲಿಮರಿಗಾಗಿ ಇಫ್ತಾರ್ ಔತಣಕೂಟ ಏರ್ಪಡಿಸಿದ ಹಿಂದೂ ಮದುಮಗ

Update: 2019-05-11 06:56 GMT

ಬಂಟ್ವಾಳ, ಮೇ 11: ಹಿಂದೂ ಯುವಕನೋರ್ವ ತನ್ನ ಮದುವೆಯ ಔತಣಕೂಟದ ಅಂಗವಾಗಿ ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕಿಲ ಎಂಬಲ್ಲಿ ನಡೆದಿದೆ.

ಕೋಡಪದವಿನ ಕುಕ್ಕಿಲದ ನಿವಾಸಿ, ನವವಿವಾಹಿತ ಧನಂಜಯ್ ಎಂಬವರು ಶುಕ್ರವಾರ ಇಫ್ತಾರ್ ಕೂಟವನ್ನು ಆಯೋಜಿದ್ದರು. ಈ ಸಂದರ್ಭದಲ್ಲಿ ಕೋಡಪದವು ಹಾಗೂ ಕುಕ್ಕಿಲ ಜಮಾಅತ್‌ನ ಸುಮಾರು 150 ಮಂದಿ ಕುಕ್ಕಿಲ ಮಸೀದಿಯಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿ, ಉಪವಾಸ ತೊರೆದು ಸಾಕ್ಷಿಯಾದರು.

ಕೋಡಪದವಿನ ಕುಕ್ಕಿಲದ ನಿವಾಸಿ ಜತ್ತನ್ನ (ಜತ್ತು ಮೇಸ್ತ್ರೀ) ಅವರ ಪುತ್ರ ಧನಂಜಯ್ ರಿಗೆ ಪೆರ್ಲದ ನಿವಾಸಿ ಮಾಲತಿ ಎಂಬವರ ಜೊತೆ ಮೇ 8ರಂದು ವಿಟ್ಲ ಶ್ರೀರಾಮ ಮಂದಿರಲ್ಲಿ ಮದುವೆ ನಡೆದಿತ್ತು. ತನ್ನ ಮದುವೆಗೆ ಊರಿನ ಎಲ್ಲರನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭ ಊರಿನ ಮುಸ್ಲಿಮರು ಮದುವೆಗೆ ಬಂದು ಶುಭ ಹಾರೈಸಿ ತೆರಳಿದ್ದು, ರಮಝಾನ್ ಉಪವಾಸದ ಕಾರಣ ಮದುವೆಯ ಔತನಕೂಟದಲ್ಲಿ ಅವರು ಭಾಗವಹಿಸಿರಲಿಲ್ಲ. ಈ ನಿಟ್ಟಿನಲ್ಲಿ ಕುಕ್ಕಿಲದ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದೆವು ಎಂದು ನವವಿವಾಹಿತ ಧನಂಜಯ್ ಅವರು "ವಾರ್ತಾಭಾರತಿ"ಗೆ ತಿಳಿಸಿದ್ದಾರೆ.

"ಸೌಹಾರ್ದತೆಗೆ ಬೇಕು ಮೂಲ ಮನಸು, ಜನರು ಮೆಚ್ಚುತ್ತಾರೆ ಜಾತಿ-ಬೇಧವಿಲ್ಲದ ಮನಸು" ಎಂಬ ಶೀರ್ಷಿಕೆಯೊಂದಿಗೆ ಧನಂಜಯ್ ಅವರ ವೈವಾಹಿಕ ಜೀವನಕ್ಕೆ ಶುಭ ಹಾರೈಕೆ ಹಾಗೂ ಜನರ ಪ್ರಶಂಸೆಗೆ ಪಾತ್ರವಾದ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಧನಂಜಯ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News