ಮುಚ್ಚುಗಡೆ ಭೀತಿಯಲ್ಲಿ ಪಡುಬೆಟ್ಟು ಸರಕಾರಿ ಶಾಲೆ
ಹಿರಿಯಡ್ಕ, ಜೂ.4: ಕಳೆದ 64 ವರ್ಷಗಳಿಂದ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿ ಕೊಟ್ಟ ಪಡುಬೆಟ್ಟು ಜಿಪಂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೀಗ ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಬಲಿಯಾಗಿದೆ. ಒಬ್ಬರು ಶಿಕ್ಷಕರು ಹಾಗೂ ಇಬ್ಬರು ಮಕ್ಕಳಿರುವ ಈ ವಿದ್ಯಾ ದೇಗುಲ ಸದ್ಯದಲ್ಲೇ ಬಾಗಿಲು ಮುಚ್ಚಲಿದೆ.
ಹಿರಿಯಡ್ಕ ಸಮೀಪದ ಕೊಡಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿರುವ ಪಡುಬೆಟ್ಟು ಶಾಲೆಗೆ(ಆಗಿನ ಶ್ರೀ ಸ್ವಾಮಿ ನಿತ್ಯಾನಂದ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ) ಪೆರ್ಣಂಕಿಲದ ಪಟೇಲರಾಗಿದ್ದ ಗೋವಿಂದರಾಜ ಹೆಗ್ಡೆ 1955ರ ಸೆ.2ರಂದು ಶಿಲಾನ್ಯಾಸ ನೆರವೇರಿಸಿದ್ದರು. ಕಟ್ಟಡ ನಿರ್ಮಾಣಗೊಂಡ ಬಳಿಕ 1957ರ ಎ.21ರಂದು ಮಣಿಪಾಲದ ಟಿ.ಎ.ಪೈ ಈ ಶಾಲೆಯನ್ನು ಉದ್ಘಾಟಿಸಿದ್ದರು. ಅಲ್ಲಿಂದ ಈವರೆಗೆ ಈ ಶಾಲೆಯು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಈ ಹಿಂದೆ ಈಗ ಇರುವ ಶಾಲೆಯ ಸಮೀಪದ ಸರಕಾರಿ ಜಾಗದಲ್ಲಿರುವ ಶ್ರೀಸ್ವಾಮಿ ನಿತ್ಯಾನಂದ ಖಾಸಗಿ ಹಿರಿಯ ಪ್ರಾಥಮಿಕ ಶಾಲೆೆಯನ್ನು ಸರಕಾರ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. 2003-04ರಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಸುಮಾರು 3.60 ಲಕ್ಷ ರೂ. ವೆಚ್ಚದಲ್ಲಿ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿತ್ತು. ಪ್ರಸ್ತುತ ಈ ಶಾಲೆ ಇದೇ ಕಟ್ಟಡದಲ್ಲೇ ನಡೆಯುತ್ತಿದೆ.
3 ವರ್ಷದಿಂದ ಮಕ್ಕಳೇ ಇಲ್ಲ: ಎಲ್ಲೆಡೆ ವ್ಯಾಪಕವಾದ ಆಂಗ್ಲ ಮಾಧ್ಯಮ ಪ್ರಭಾವದ ಬಿಸಿ ಪಡುಬೆಟ್ಟು ಗ್ರಾಮಕ್ಕೂ ತಟ್ಟಿದೆ. ಇದರ ಪರಿಣಾಮ ಪಡುಬೆಟ್ಟು ಸರಕಾರಿ ಶಾಲೆಯಲ್ಲಿ ಕ್ರಮೇಣ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತ ಬಂತು. ಕಳೆದ ಮೂರು ಶೈಕ್ಷಣಿಕ ವರ್ಷಗಳಿಂದ ಈ ಶಾಲೆಗೆ ಒಂದೇ ಒಂದು ಮಕ್ಕಳ ಸೇರ್ಪಡೆಯಾಗಿಲ್ಲ.
ಒಂದರಿಂದ ಐದನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 2017ರಲ್ಲಿ ಒಂದನೇ ತರಗತಿಗೆ ಒಬ್ಬ ವಿದ್ಯಾರ್ಥಿ ಸೇರ್ಪಡೆಗೊಂಡಿದ್ದನು. ಆಗ ಶಾಲೆಯಲ್ಲಿ ಒಟ್ಟು ಆರು ಮಕ್ಕಳಿದ್ದರು. ಐದನೇ ತರಗತಿಯಲ್ಲಿದ್ದ ಮೂವರು ಮಕ್ಕಳು ಉತ್ತೀರ್ಣರಾಗಿ ಹೋದ ಬಳಿಕ ಇಲ್ಲಿ ನಾಲ್ಕು ಮಕ್ಕಳು ಉಳಿದುಕೊಂಡರು. 2018ರಲ್ಲಿ ನಾಲ್ಕು ಮಕ್ಕಳ ಪೈಕಿ ಐದನೇ ತರಗತಿಯಲ್ಲಿದ್ದ ಇಬ್ಬರು ಮಕ್ಕಳು ತೇರ್ಗಡೆ ಹೊಂದಿದ್ದು, ಸದ್ಯ 2019ನೇ ಶೈಕ್ಷಣಿಕ ವರ್ಷದ ಸಾಲಿನಲ್ಲಿ ಈ ಶಾಲೆ ಯಲ್ಲಿ ಕೇವಲ ಇಬ್ಬರು ಮಕ್ಕಳು ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬ ಎರಡನೇ ಹಾಗೂ ಮತ್ತೋರ್ವ ಮೂರನೇ ತರಗತಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಒಬ್ಬರೇ ಶಿಕ್ಷಕಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶಾಲೆ ಉಳಿಸಲು ಪ್ರಯತ್ನ: ಶಾಲೆಯಲ್ಲಿ ಕೇವಲ ಇಬ್ಬರೇ ಮಕ್ಕಳಿರುವುದ ರಿಂದ ಶಿಕ್ಷಣ ಇಲಾಖೆಯು ಈ ಶಾಲೆಯನ್ನು ಮುಚ್ಚಲು ಮುಂದಾಗಿದೆ. ಇಬ್ಬರು ಮಕ್ಕಳಲ್ಲಿ ಸ್ಪರ್ಧಾತ್ಮಕತೆಯ ಕೊರತೆ ಉಂಟಾಗಬಹುದೆಂಬ ಉದ್ದೇಶದಿಂದ ಇಲಾಖೆಯು ಈ ಮಕ್ಕಳನ್ನು ಸುಮಾರು ಐದಾರು ಕಿ.ಮೀ. ದೂರದ ಪೆರ್ಣಂಕಿಲ ಸರಕಾರಿ ಶಾಲೆಗೆ ವರ್ಗಾಯಿಸಲು ಚಿಂತನೆ ನಡೆಸಿದೆ.
ಈ ಮಧ್ಯೆ ಕೊಡಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಈ ಶಾಲೆ ಉಳಿಸಲು ಅವಿರತ ಶ್ರಮಿಸುತ್ತಿದ್ದಾರೆ. ಈ ಶಾಲೆಗೆ ಗ್ರಾಪಂ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಉತ್ಸುಕವಾಗಿದೆ. ಆದರೆ, ಪೋಷಕರು ಈ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಶಾಲಾರಂಭವಾದ ಮೇ 29ರಂದು ಶಿಕ್ಷಣ ಇಲಾಖೆ ಹಾಗೂ ಶಾಲಾಭಿವೃದ್ಧಿ ಸಮಿತಿ ಸಭೆ ನಡೆಸಿ ಈ ಕುರಿತು ಸಮಾಲೋಚನೆ ನಡೆಸಿದೆ. ಹಿರಿಯಡ್ಕ ಶಿಕ್ಷಣ ಸಂಯೋಜಕ ಚಂದ್ರ ನಾಯ್ಕಿ ಶಾಲೆಗೆ ಭೇಟಿ ನೀಡಿ, ಗ್ರಾಪಂ ಉಪಾಧ್ಯಕ್ಷ ಹಾಗೂ ಎಸ್‌ಡಿಎಂಸಿ ಸದಸ್ಯರೊಂದಿಗೆ ಸಭೆ ನಡೆಸಿದರು. ಅದೇ ರೀತಿ ಜೂ.3ರಂದು ಸ್ಥಳೀಯ ಪೋಷಕರ ಸಭೆ ಕರೆದರೂ ಅದಕ್ಕೆ ಸರಿಯಾದ ಸ್ಪಂದನೆ ದೊರೆತಿಲ್ಲ.
ಆಂಗ್ಲ ಮಾಧ್ಯಮ ಆರಂಭಿಸಲು ಬೇಡಿಕೆ
ಈ ಪರಿಸರದ ಮಕ್ಕಳು ಏಳೆಂಟು ಕಿ.ಮೀ. ದೂರದಲ್ಲಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಿದ್ದು, ಈ ಶಾಲೆಯನ್ನು ಸರಕಾರ ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಿದರೆ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡು ಶಾಲೆಯ ಉಳಿಯಬಹುದು ಎಂಬ ಆಶಾಭಾವನೆ ಗಣೇಶ್ ಶೆಟ್ಟಿ ಅವರದ್ದು. ‘ಈಗಾಗಲೇ ಉಡುಪಿ ಕ್ಷೇತ್ರದಲ್ಲಿ ನಾಲ್ಕು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಅನುಮತಿ ದೊರೆತಿದ್ದು, ಈ ವರ್ಷ ಈ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಅವಕಾಶ ಇಲ್ಲ’ ಎನ್ನುತ್ತಾರೆ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ.
ಶಾಲೆಯ ಸಮೀಪದ ಸರಕಾರಿ ಜಾಗದಲ್ಲಿ ಕೊಡಿಬೆಟ್ಟು ಗ್ರಾಪಂ ವತಿಯಿಂದ 40 ಕುಟುಂಬಗಳಿಗೆ ಮನೆ ನಿವೇಶನಗಳನ್ನು ನೀಡಲಾಗಿದ್ದು, ಒಂದೊಮ್ಮೆ ಇಲ್ಲಿ ಆಂಗ್ಲ ಮಾಧ್ಯಮ ಆರಂಭವಾದರೆ ಕಾಲನಿಯಲ್ಲಿ ಮನೆ ಕಟ್ಟುವವರು ತಮ್ಮ ಮಕ್ಕಳನ್ನು ಸಮೀಪದ ಶಾಲೆಗೆ ಸೇರಿಸಬಹುದು ಎಂದು ಕೊಡಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಗಣೇಶ್ ಶೆಟ್ಟಿ ತಿಳಿಸಿದ್ದಾರೆ.
ಒಂದು ಶಾಲೆಯಲ್ಲಿ ಕೇವಲ ಇಬ್ಬರು ಮಕ್ಕಳಿರುವುದರಿಂದ ಅದನ್ನು ಮುಂದುವರಿಸಲು ಸಾಧ್ಯವಿಲ್ಲ. ಪಡುಬೆಟ್ಟು ಶಾಲೆ ಉಳಿಸುವ ಸಂಬಂಧ ಪೋಷಕರ ಮನವೊಲಿಸುವ ಕುರಿತು ಸಭೆ ಕರೆಯಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿಸಲು ಸಾಧ್ಯವಾಗದಿದ್ದರೆ ಇಲ್ಲಿನ ಇಬ್ಬರು ಮಕ್ಕಳನ್ನು ಪೆರ್ಣಂಕಿಲ ಶಾಲೆಗೆ ವರ್ಗಾಯಿಸಲು ಆದೇಶ ನೀಡಲಾಗುವುದು. ಅದೇ ರೀತಿ ಶಿಕ್ಷಕಿಯನ್ನು ಹೆಚ್ಚುವರಿಯಾಗಿ ಬೇರೆ ಶಾಲೆಗೆ ವರ್ಗಾಯಿಸಲಾಗುವುದು. ಈ ವರ್ಷ ಬಂದ್ ಮಾಡಿ ಮುಂದಿನ ವರ್ಷ ಆಂಗ್ಲ ಮಾಧ್ಯಮದೊಂದಿಗೆ ಶಾಲೆಯನ್ನು ಪುನಾರಂಭಿಸಲು ಅವಕಾಶ ಇದೆ.
-ಮಂಜುಳಾ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ, ಉಡುಪಿ
ಶಾಲೆ ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದರೆ, ಪೋಷಕರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಈ ವರ್ಷ ಶಾಲೆಯನ್ನು ಬಂದ್ ಮಾಡಿ ಮುಂದಿನ ವರ್ಷ ಆಂಗ್ಲ ಮಾಧ್ಯಮ ಶಾಲೆಯಾಗಿ ಪುನಾರಂಭಿಸಲು ಪ್ರಯತ್ನ ಮಾಡುತ್ತೇವೆ. ಇದಕ್ಕೆ ಶಿಕ್ಷಣ ಇಲಾಖೆ ಅವಕಾಶ ನೀಡಿದರೆ ಶಾಲೆಯನ್ನು ಉಳಿಸಬಹುದಾಗಿದೆ.
-ಗಣೇಶ್ ಶೆಟ್ಟಿ, ಉಪಾಧ್ಯಕ್ಷರು, ಕೋಡಿಬೆಟ್ಟು ಗ್ರಾಪಂ