ಮಾಳದಲ್ಲಿ ಮಲಬಾರ್ ಟ್ರೀ ಟೋಡ್ ಕಪ್ಪೆ ಪತ್ತೆ

Update: 2019-07-03 06:58 GMT

ಚಿತ್ರ: ಮನು ಬಿ.ನಕ್ಕತ್ತಾಯ

ಉಡುಪಿ, ಜು.3: ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಎಂಡೆಮಿಕ್(ಸ್ಥಳೀಯ) ಮತ್ತು ಅಳಿವಿನಂಚಿನಲ್ಲಿರುವ ಕಪ್ಪೆ ಪ್ರಬೇಧ ‘ಮಲ ಬಾರ್ ಟ್ರೀ ಟೋಡ್’ ಇತ್ತೀಚೆಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಣ್ಣ ಪಾಪು ಮನೆ ಪರಿಸರದಲ್ಲಿ ಮೂರು ದಿನಗಳ ಕಾಲ ನಡೆದ ‘ದಿ ಫ್ರಾಗ್ ವಾಕ್’ ವೇಳೆಯಲ್ಲಿ ಪತ್ತೆಯಾಗಿದೆ. ಮಣ್ಣಪಾಪು ಮನೆ ವತಿಯಿಂದ ಈ ಪರಿಸರದ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಬೆಂಗಳೂರು ಸೃಷ್ಠಿ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಡಿಸೈನ್ ಆ್ಯಂಡ್ ಟೆಕ್ನಾಲಜಿಯ ಕಪ್ಪೆ ಸಂಶೋಧಕ ಮತ್ತು ಅಧ್ಯಾಪಕ ಡಾ.ಗುರುರಾಜ ಕೆ.ವಿ. ನೇತೃತ್ವದಲ್ಲಿ ಒಟ್ಟು 8 ಮಂದಿ ಕಪ್ಪೆಗಳ ಅಧ್ಯಯನ ನಡೆಸಿದ್ದು, ಈ ವೇಳೆ ಈ ‘ಮಲಬಾರ್ ಟ್ರೀ ಟೋಡ್’ ಸಹಿತ ಒಟ್ಟು 14 ಪ್ರಭೇದಗಳ ಕಪ್ಪೆಗಳು ಪತ್ತೆಯಾಗಿದ್ದವು. ಈ ಮೂಲಕ ಈ ಪ್ರದೇಶವು ಕಪ್ಪೆಗಳಿಗೆ ಸೂಕ್ತವಾದ ಆವಾಸ ಸ್ಥಾನ ಎಂಬುದಾಗಿ ಕಂಡುಕೊಳ್ಳಲಾಗಿದೆ.

2003-04ರವರೆಗೆ ಅತ್ಯಂತ ಅಪರೂಪ ಎನಿಸಿದ್ದ ‘ಮಲಬಾರ್ ಟ್ರೀ ಟೋಡ್’ ಕಪ್ಪೆ ಪ್ರಬೇಧವು ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳ ಎರಡು ಮೂರು ಕಡೆಗಳಲ್ಲಿ ಮಾತ್ರ ಕಂಡು ಬಂದಿತ್ತು. ಅಲ್ಲಿಯವರೆಗೆ ಕರ್ನಾಟಕದ ಯಾವ ಭಾಗದಲ್ಲೂ ಈ ಕಪ್ಪೆ ಕಂಡುಬಂದಿರುವ ಬಗ್ಗೆ ವರದಿಯಾಗಿರಲಿಲ್ಲ. ಆದರೆ ಅದರ ನಂತರ ನಡೆದ ಶೋಧ ಕಾರ್ಯದಲ್ಲಿ ಕರ್ನಾಟಕದ ಹಲವು ಕಡೆಗಳಲ್ಲಿ ಈ ಕಪ್ಪೆ ಕಾಣಸಿಕ್ಕಿತ್ತು. ಮರದಲ್ಲಿ ವಾಸ ಮಾಡುವ ಅತ್ಯಂತ ವಿಶಿಷ್ಟ ಜೀವನ ಶೈಲಿ ಮತ್ತು ಈವರೆಗೆ ಕೇವಲ ಮೂರು ವಾರಗಳ ಕಾಲ ಮಾತ್ರ ಕಾಣಸಿಕ್ಕಿರುವ ಈ ಪ್ರಭೇದದ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿವೆ. 2005ರಲ್ಲಿ ವಿಜ್ಞಾನಿ ಡಾ.ಗುರು ರಾಜ ಕೆ.ವಿ. ಈ ಕಪ್ಪೆಗಳ ಕೂಗು ಮತ್ತು 2007ರಲ್ಲಿ ಪುಣೆಯ ವಿಜ್ಞಾನಿ ಡಾ. ದಿನೇಶ್ ನೇತೃತ್ವದ ತಂಡ ಮೊಟ್ಟೆಯ ಬಗ್ಗೆ ಅಧ್ಯಯನ ನಡೆಸಿತ್ತು.

ಗುಂಪಾಗಿ ಕೂಗುವ ಕಪ್ಪೆ: 
‘ಮಲಬಾರ್ ಟ್ರೀ ಟೋಡ್’ ಪ್ರಭೇದದ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಯನ್ನು ಆಕರ್ಷಿಸಿ ಕೂಡುವುದಕ್ಕಾಗಿ ಒಟ್ಟಿಗೆ ಸೇರಿ ಕೂಗುತ್ತವೆ. ಇದನ್ನು ಕೋರಸ್ ಕಾಲ್(ಸಮೂಹ ಕೂಗು) ಎಂದು ಕರೆಯಲಾಗುತ್ತದೆ. ಒಂದು ಗಂಡು ಕಪ್ಪೆ ಕೂಗಲು ಪ್ರಾರಂಭಿಸಿದರೆ ಸುತ್ತಮುತ್ತಲು ಇರುವ ಸುಮಾರು ಐದಾರು ಗಂಡು ಕಪ್ಪೆಗಳು ಕೂಡ ಸಮೂಹವಾಗಿ ಕೂಗಲು ಪ್ರಾರಂಭಿಸುತ್ತವೆ. ಇದರಲ್ಲಿ ಗಟ್ಟಿಯಾಗಿ ಕೂಗುವ ಮತ್ತು ಬಲಿಷ್ಠವಾಗಿರುವ ಕಪ್ಪೆಯೊಂದಿಗೆ ಹೆಣ್ಣು ಕಪ್ಪೆ ಕೂಡಿಕೊಳ್ಳುತ್ತದೆ. ನಂತರ ಹೆಣ್ಣು ಕಪ್ಪೆ ಮರದಿಂದ ಕೆಳಗೆ ಇಳಿದು ನೀರಿನಲ್ಲಿ ಮೊಟ್ಟೆ ಇಡುತ್ತದೆ. ಕೆಲವು ಬಾರಿ ಮರದ ಪೊಟರೆಯೊಳಗೆ ನಿಂತ ನೀರಲ್ಲೂ ಈ ಕಪ್ಪೆ ಮೊಟ್ಟೆ ಇಡುತ್ತದೆ. ಈ ಕಪ್ಪೆ ಮಳೆಗಾಲದ ಆರಂಭದಲ್ಲೇ ಕೂಡಿಕೊಂಡು ಮೊಟ್ಟೆಗಳನ್ನು ಇಡುತ್ತದೆ. ಮಳೆಗಾಲದ ಮೂರು ವಾರಗಳ ಬಳಿಕ ಅಂದರೆ ಜೂನ್ ಅಂತ್ಯದಲ್ಲಿ ಈ ಕಪ್ಪೆ ಕಾಣಲು ಸಿಗುವುದಿಲ್ಲ. ಮೊಟ್ಟೆ ಇಟ್ಟ ಬಳಿಕ ನಾಪತ್ತೆಯಾಗುವ ಈ ಕಪ್ಪೆ, ಆ ನಂತರ ಯಾರ ಕಣ್ಣಿಗೂ ಈವರೆಗೆ ಕಾಣಿಸಿಲ್ಲ. ಮೊಟ್ಟೆ ಇಟ್ಟ ಬಳಿಕ ಈ ಕಪ್ಪೆ ಮತ್ತೆ ವಾಪಸು ಮರದ ಮೇಲೆ ಹೋಗುತ್ತದೆಯೇ ಅಥವಾ ಬೇರೆ ಎಲ್ಲಿಯಾದರೂ ಬಚ್ಚಿಟ್ಟುಕೊಳ್ಳು ತ್ತದೆಯೇ ಎಂಬುದು ಈವರೆಗೆ ತಿಳಿದುಬಂದಿಲ್ಲ. ಆ ಕುರಿತು ಅಧ್ಯಯನ ನಡೆಯಬೇಕಾಗಿದೆ ಎನ್ನುತ್ತಾರೆ ಡಾ.ಗುರುರಾಜ.

ಈ ಕಪ್ಪೆ ಕಂದು ಬಣ್ಣವನ್ನು ಹೊಂದಿದ್ದು, ಕಣ್ಣು ಬಂಗಾರದಂತೆ ಹೊಳೆಯು ತ್ತದೆ. ಕೈಯಲ್ಲಿರುವ ಬೆರಳ ತುದಿಯಲ್ಲಿ ಮರ ಹತ್ತಲು ಸಹಾಯವಾಗುವ ಚಪ್ಪಟೆ ಆಕಾರದಲ್ಲಿ ಡಿಸ್ಕ್ ಗಳಿರುತ್ತದೆ. ಸಾಮಾನ್ಯವಾಗಿರುವ ಕಪ್ಪೆಗಳ ಬೆರಳಲ್ಲಿ ಈ ರೀತಿ ಇರುವುದಿಲ್ಲ. ಈ ಕಪ್ಪೆ ಮಿಡತೆ ರೀತಿಯಲ್ಲಿ ಕೂಗುತ್ತ ಶಬ್ದ ಮಾಡು ತ್ತದೆ. ಈ ಪ್ರಬೇಧದಲ್ಲಿ ಗಂಡು ಕಪ್ಪೆ ಮಾತ್ರ ಕೂಗುತ್ತದೆ. ಆಕಾರದಲ್ಲಿ ಹೆಣ್ಣು ಗಂಡಿಗಿಂತ ದೊಡ್ಡದಾಗಿರುತ್ತದೆ.


‘ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್’ ಅಭಿಯಾನ
ಅಪರೂಪವಾಗಿದ್ದ ಮಲಬಾರ್ ಟ್ರೀ ಟೋಡ್ ಕಪ್ಪೆ ಪ್ರಭೇದಕ್ಕೆ ಸಂಬಂಧಿಸಿದಂತೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಕಪ್ಪೆಗಳ ಕುರಿತು ಅಧ್ಯಯನ ನಡೆಸುತ್ತಿರುವ ವಿಜ್ಞಾನಿ ಡಾ.ಗುರುರಾಜ ಕೆ.ವಿ. ನೇತೃತ್ವದ ತಂಡ 2014ರಿಂದ ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್ ಎಂಬ ಅಭಿಯಾನವನ್ನು ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್ ಮೂಲಕ ಆರಂಭಿಸಿದೆ.

ಈ ಕಪ್ಪೆ ಅಳಿವಿನಂಚಿನಲ್ಲಿರುವ ಪ್ರಭೇದವೇ ಮತ್ತು ಈ ಕಪ್ಪೆ ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಕಂಡುಬರುತ್ತವೆ ಎಂಬುದರ ಬಗ್ಗೆ ಅಧ್ಯಯನ ನಡೆಸುವುದು ಈ ಅಭಿಯಾನದ ಉದ್ದೇಶವಾಗಿದೆ. ಜನರು ಎಲ್ಲಿಯಾದರೂ ಈ ಕಪ್ಪೆಯನ್ನು ನೋಡಿದರೆ ತಕ್ಷಣ ಫೋಟೊ ತೆಗೆದು ಅದನ್ನು ಕಳುಹಿಸಿ ಕೊಡುವಂತೆ ಈ ಅಭಿಯಾನದ ಮೂಲಕ ಸೂಚಿಸಲಾಗಿದೆ. ಈಗಲೂ ಈ ಅಭಿಯಾನ ಮುಂದುವರೆದಿದೆ.

ಹೀಗೆ 2019ರವರೆಗೆ ಕರ್ನಾಟಕ ರಾಜ್ಯ ಸೇರಿದಂತೆ ಪಶ್ಚಿಮ ಘಟ್ಟಗಳ ಸುಮಾರು 45 ಪ್ರದೇಶಗಳಲ್ಲಿ ಈ ಕಪ್ಪೆ ಪತ್ತೆಯಾಗಿರುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ. ಅದರಲ್ಲಿ ಮಾಳದ ಮಣ್ಣಪಾಪು ಮನೆ ಪ್ರದೇಶ ಕೂಡ ಒಂದು. ಮೊದಲು ಅಪರೂಪದ ಪ್ರಬೇಧ ಎಂಬುದಾಗಿ ತಿಳಿದುಕೊಂಡಿದ್ದ ಈ ಕಪ್ಪೆ ಸಾಕಷ್ಟು ಪ್ರದೇಶಗಳಲ್ಲಿ ಇವೆ ಎಂಬುದು ಇದೀಗ ಗೊತ್ತಾಗಿದೆ ಎಂದು ಡಾ.ಗುರುರಾಜ ಕೆ.ವಿ. ತಿಳಿಸಿದ್ದಾರೆ.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News