ಮಂಜಲ್‌ಪಲ್ಕೆ: ಮದ್ರಸಾ ಉಸ್ತಾದರ ಕೃಷಿಕ್ರಾಂತಿ

Update: 2019-07-14 15:58 GMT

ಪುಂಜಾಲಕಟ್ಟೆ, ಜು.12: ಅಲ್ಲಿ ಮದ್ರಸ ವಿದ್ಯಾರ್ಥಿಗಳಿಗೆ ಧಾರ್ಮಿಕ ವಿದ್ಯಾಭ್ಯಾಸದ ಜೊತೆಗೆ ಪರಿಸರ, ಕೃಷಿ, ಸಾಮಾನ್ಯ ಜ್ಞಾನದ ಬಗೆಗೂ ಮಾಹಿತಿ ಸಿಗುತ್ತವೆ. ಸಣ್ಣ ಪ್ರಾಯದವರಿಂದ ಹಿಡಿದು ಹಿರಿಯರ ವರೆಗೆ ಸವ ವಿದ್ಯಾರ್ಥಿಗಳಿಗೂ ಕೃಷಿ ಚಟುವಟಿಕೆಗಳ ಅರಿವು ಮತ್ತು ಆಸಕ್ತಿ ಮೂಡಿಸಿದ ಕೀರ್ತಿ ಮದ್ರಸಾ ಅಧ್ಯಾಪಕ ಮುಹಮ್ಮದ್ ಶರೀಫ್ ಸಅದಿ ಅವರಿಗೆ ಸಲ್ಲುತ್ತದೆ.

ಪುಂಜಾಲಕಟ್ಟೆ ಸಮೀಪದ ಮಂಜಲ್‌ಪಲ್ಕೆ ಎಂಬಲ್ಲಿ ರಹ್ಮಾನಿಯಾ ಜುಮಾ ಮಸೀದಿ ಮತ್ತು ರಹ್ಮಾನಿಯಾ ಮದ್ರಸಾ ಇದ್ದು, ಕೇವಲ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿರುವ ತರಕಾರಿ, ಹೂ ಗಿಡಗಳು ನೋಡುಗರ ಕಣ್ಣಿಗೆ ಇಂಪು ನೀಡುತ್ತದೆ. ವಿದ್ಯಾರ್ಥಿಗಳು ಬಿಡುವಿನ ವೇಳೆ ಗಿಡಗಳಿಗೆ ನೀರೆರೆಯುತ್ತಾ ಮದ್ರಸಾ ತರಗತಿಗಳಿಗೆ ಹಾಜರಾಗುತ್ತಾರೆ.

ಪ್ರವಾದಿಯವರು ಪರಿಸರ ಮತ್ತು ಕೃಷಿಯ ಬಗ್ಗೆ ಹೆಚ್ಚು ಆಸಕ್ತಿಯಿದ್ದವರಾಗಿದ್ದು, ಇಸ್ಲಾಮ್ ಕೃಷಿ ಮತ್ತು ಪರಿಸರ ರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಈ ವಿಚಾರವೇ ಕೃಷಿಯತ್ತ ನನಗೆ ಆಸಕ್ತಿ ಮೂಡಿಸಿದೆ ಎಂದು ಶರೀಫ್ ಸಅದಿ ವಿವರಿಸುತ್ತಾರೆ.

ಬೆಳೆಗಳು: ಬೆಂಡೆಕಾಯಿ, ಸೌತೆ, ಬಸಳೆ, ಹೀರೆಕಾಯಿ, ಮರಗೆಣಸು, ಕಲ್ಲಂಗಡಿ, ಪಪ್ಪಾಯಿ ಇನ್ನಿತರ ಬೆಳೆಗಳು ಯಾವುದೇ ರೋಗಕ್ಕೆ ತುತ್ತಾಗದಂತೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ ವರ್ಷ ಈ ಎಲ್ಲ ತರಕಾರಿಗಳನ್ನು ಬೆಳೆಯಲು ನೀರಿನ ಸಮಸ್ಯೆ ಇರಲಿಲ್ಲ. ಈ ಬಾರಿ ನೀರಿನ ಸಮಸ್ಯೆ ಎದುರಾಗಿದ್ದು, ಕೆಲವೊಂದು ಬೆಳೆಗಳನ್ನು ಕೈಬಿಡಬೇಕಾಯಿತು. ಆದರೆ ಇದೀಗ ದಾನಿಯೋರ್ವರು ಬೋರ್‌ವೆಲ್ ಕೊರೆಸಿದ್ದರಿಂದ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಮುಂದಿನ ದಿನಗಳಲ್ಲಿ ತರಕಾರಿ ಸೇರಿದಂತೆ ಇನ್ನಿತರ ಫಲ ನೀಡುವ ಗಿಡಗಳನ್ನು ಬೆಳೆಯುವ ಯೋಜನೆ ಇದೆ ಎಂದು ಶರೀಫ್ ಸಅದಿ ಹೇಳುತ್ತಾರೆ.

ಪೇಪರ್ ಲೋಟದಲ್ಲಿ ಬೀಜ ಬಿತ್ತನೆ: ಮಸೀದಿ, ಮದ್ರಸಾದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಹಾ, ತಂಪು ಪಾನೀಯಕ್ಕೆ ಬಳಸುವ ಲೋಟವನ್ನು ಎಲ್ಲೆಂದರಲ್ಲಿ ಬಿಸಾಡದೆ ಸಂಸ್ಕರಿಸಿಟ್ಟು, ಅದರಲ್ಲಿ ವಿವಿಧ ಬಗೆಯ ತರಕಾರಿಗಳ ಬೀಜ ಬಿತ್ತನೆ ಮಾಡಲಾಗುತ್ತಿದೆ.

ಪ್ರಕೃತಿ ಮಡಿಲಲ್ಲಿ ಕ್ಲಾಸ್: ನಾಲ್ಕು ಗೋಡೆಗಳ ಮಧ್ಯೆ ದಿನಂಪ್ರತಿ ತರಗತಿ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ನೀರಸ ಉಂಟಾಗುವುದು ಸಹಜ. ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಮದ್ರಸಾ ತರಗತಿ ಮತ್ತು ಸಾಮಾನ್ಯ ಜ್ಞಾನವನ್ನು ಶರೀಫ್ ಉಸ್ತಾದ್ ಪ್ರಕೃತಿ ಮಡಿಲಲ್ಲಿ ಧಾರೆಯೆರೆಯುತ್ತಾರೆ.

ವಾಟ್ಸ್‌ಆ್ಯಪ್ ಮೂಲಕ ಹರಾಜು

ಮದ್ರಸಾ ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಸ್ಥಳೀಯರ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿದ್ದು, ಬೆಳೆಗಳನ್ನು ಈ ಗ್ರೂಪ್ ಮೂಲಕ ಹರಾಜು ಮಾಡಲಾಗುತ್ತದೆ. ಹರಾಜಿನಲ್ಲಿ ಬಂದ ಹಣವನ್ನು ಮದ್ರಸಾದ ಅಭಿವೃದ್ಧಿ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತದೆ.

Writer - ಅಕ್ಬರ್ ಅಲಿ, ಕಾವಳಕಟ್ಟೆ

contributor

Editor - ಅಕ್ಬರ್ ಅಲಿ, ಕಾವಳಕಟ್ಟೆ

contributor

Similar News