ಉಡುಪಿ ನಗರಸಭೆಯಿಂದ ಸಿವಿಕ್ ಬೈಲಾ ಜಾರಿಗೆ ಸಿದ್ಧತೆ

Update: 2019-07-25 08:33 GMT

ಉಡುಪಿ, ಜು.25: ಸಾಂಕ್ರಾಮಿಕ ರೋಗ ಹರಡದಂತೆ ಜವಾಬ್ದಾರಿ ವಹಿಸಿ ಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಆ ಜವಾಬ್ದಾರಿ ಮರೆ ಯುವ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳುವ ‘ಸಿವಿಕ್ ಬೈಲಾ’ ಜಾರಿಗೆ ತರಲು ಉಡುಪಿ ನಗರಸಭೆ ಸಿದ್ಧತೆ ನಡೆಸುತ್ತಿದೆ.

ಈ ಬೈಲಾದಂತೆ ನಗರಸಭೆ ವ್ಯಾಪ್ತಿಯ ಮನೆಯ ಆವರಣಗಳಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳು ಕಂಡುಬಂದರೆ ಆ ಮನೆಯವರಿಗೆ ಮೊದಲ ಹಂತದಲ್ಲಿ ಎಚ್ಚರಿಕೆ ನೀಡಬಹುದಾಗಿದೆ. ಮತ್ತೆ ಅದೇ ತಪ್ಪು ಮಾಡಿದರೆ ಸ್ಥಳದಲ್ಲೇ ದಂಡ ವಿಧಿಸುವಂತಹ ಕಾನೂನು ಇದಾಗಿದೆ. ಈ ಬೈಲೋ ಕುರಿತ ಡ್ರಾಫ್ಟ್‌ನ್ನು ಆರೋಗ್ಯ ಇಲಾಖೆ 1 ತಿಂಗಳ ಹಿಂದೆ ತಯಾರಿಸಿ ನಗರಸಭೆಗೆ ಸಲ್ಲಿಸಿದೆ. ಅಲ್ಲದೆ ಮೇ ತಿಂಗಳ ಅಂತ್ಯದಲ್ಲಿ ನಡೆದ ಸಭೆಯಲ್ಲೂ ಕೂಡ ಜಿಲ್ಲಾಧಿಕಾರಿಗಳು ಈ ಬೈಲಾ ಜಾರಿಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ನಗರಸಭೆ ಪ್ರಸ್ತಾವ ಸಲ್ಲಿಸಲು ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ.

81 ಡೆಂಗ್ ಪ್ರಕರಣ: 

ಮಂಗಳೂರಿನಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಮಾರಕ ಡೆಂಗ್ ಜ್ವರ ಸದ್ಯ ಉಡುಪಿ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಈ ವರ್ಷದ ಜನವರಿ ತಿಂಗಳಿನಿಂದ ಜು.15ರವರೆಗೆ ಒಟ್ಟು 81 ಡೆಂಗ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಸಮಯಕ್ಕೆ ಕಳೆದ ವರ್ಷ ಅಂದರೆ 2018ರ ಜನವರಿಯಿಂದ ಜುಲೈ ವರೆಗೆ 124 ಪ್ರಕರಣಗಳು ಕಂಡುಬಂದಿದ್ದವು. 2018ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 278 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದವು. 2016ರ ನಂತರ ಈ ರೋಗದಿಂದ ಜಿಲ್ಲೆಯಲ್ಲಿ ಒಂದೇ ಒಂದು ಸಾವಿನ ಪ್ರಕರಣ ಸಂಭವಿಸಿಲ್ಲ. ಈ ವರ್ಷ ಪತ್ತೆಯಾದ 81 ಪ್ರಕರಣಗಳ ಪೈಕಿ 30 ಪ್ರಕರಣಗಳು ಬ್ರಹ್ಮಾವರದ ವಾರಂಬಳ್ಳಿ ಗ್ರಾಮವೊಂದರಲ್ಲೇ ಕಂಡುಬಂದಿವೆ. ಇಲ್ಲಿನ ರೋಗ ಪೀಡಿತರು ಮಣಿಪಾಲ ಹಾಗೂ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದಾರೆ. ಉಡುಪಿ ನಗರಭೆ ವ್ಯಾಪ್ತಿಯ 35 ವಾರ್ಡ್‌ಗಳ ಪೈಕಿ ಕೇವಲ 11 ಡೆಂಗ್ ಪ್ರಕರಣಗಳು ವರದಿಯಾಗಿವೆ. ಕಾಯಿಲೆ ಪೀಡಿತರು ಗಂಭೀರ ಸ್ಥಿತಿಯಲ್ಲಿರುವ ಯಾವುದೇ ಪ್ರಕರಣಗಳು ಜಿಲ್ಲೆಯಲ್ಲಿ ಇಲ್ಲ ಎಂದು ಉಡುಪಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಎಲ್ಲೆಡೆ ಡೆಂಗ್ ಕಟ್ಟೆಚ್ಚರ:

ಅತ್ಯಂತ ಹೆಚ್ಚು ಡೆಂಗ್ ಜ್ವರ ಕಾಣಿಸಿಕೊಂಡಿ ರುವ ವಾರಂಬಳ್ಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇಲ್ಲಿನ ವಸತಿ ಪ್ರದೇಶಗಳಲ್ಲಿ ಸಾಕಷ್ಟು ನೀರು ನಿಲ್ಲಿಸುವ ಪರಿಣಾಮ ಸೊಳ್ಳೆಗಳು ಉತ್ಪತ್ತಿಯಾಗು ತ್ತಿವೆ. ಈ ಪ್ರದೇಶದಲ್ಲಿ ಫಾಗಿಂಗ್ ಮಾಡಲಾಗಿದ್ದು, ಸೊಳ್ಳೆ ಉತ್ಪತ್ತಿ ಸ್ಥಳ ಪತ್ತೆ ಹಚ್ಚಿ ನಾಶ ಪಡಿಸುವ ಕಾರ್ಯ ನಡೆಸಲಾಗಿದೆ. ಈ ಕಾಯಿಲೆಗಳು ಬಾರದಂತೆ ತಡೆಯಲು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವುದೇ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮಿಂದಿಗೆ ಆಶಾ ಕಾರ್ಯಕರ್ತರು ಕೂಡ ಕೈಜೋಡಿಸುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚು ವರಿಯಾಗಿ 35 ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು, ಇವರು ಸೊಳ್ಳೆ ಉತ್ಪತ್ತಿಯ ತಾಣ ನಾಶದ ಜೊತೆ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿ ಫಾಗಿಂಗ್ ಕಾರ್ಯಗಳನ್ನು ಅಗತ್ಯ ಇರುವ ಕಡೆಗಳಲ್ಲಿ ನಡೆಸಲಾಗುತ್ತಿದೆ ಎನ್ನುತ್ತಾರೆ ಡಾ.ಪ್ರಶಾಂತ್ ಭಟ್.

ಈ ಕಾಯಿಲೆ ಪ್ರಕರಣಗಳ ಸಮರ್ಪಕ ನಿರ್ವಹಣೆಗೆ ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ. ಈ ಜ್ವರದ ಪರೀಕ್ಷಾ ಕಿಟ್‌ಗೆ 2050 ರೂ.ಗಿಂತ ಹೆಚ್ಚು ದರ ವಸೂಲಿ ಮಾಡುವಂತಿಲ್ಲ. ಅಂತಹ ಆಸ್ಪತ್ರೆಗಳ ವಿರುದ್ಧ ದಂಡ ವಿಧಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಆದೇಶ ನೀಡಿದೆ.


2022ಕ್ಕೆ ಮಲೇರಿಯಾ ಮುಕ್ತ ಜಿಲ್ಲೆಯ ಗುರಿ
ಉಡುಪಿ ಜಿಲ್ಲಾದ್ಯಂತ ಮಲೇರಿಯಾ ಸಾಕಷ್ಟು ನಿಯಂತ್ರಣದಲ್ಲಿದ್ದು, 2012ರಲ್ಲಿ ವರದಿಯಾಗಿದ್ದ 2022 ಮಲೇರಿಯಾ ಪ್ರಕರಣಗಳು 2018ರಲ್ಲಿ 271 ಪ್ರಕರಣಕ್ಕೆ ಇಳಿಕೆಯಾಗಿದೆ. 2019ರ ಜುಲೈ ತಿಂಗಳವರೆಗೆ ಕೇವಲ 31 ಮಲೇರಿಯಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಸಾವು ಪ್ರಕರಣಗಳು ನಡೆದಿಲ್ಲ.

ಜಿಲ್ಲೆಯಲ್ಲಿ ನಾಲ್ಕಂಕೆಯಲ್ಲಿದ್ದ ಮಲೇರಿಯಾ ಪ್ರಕರಣಗಳು ಕ್ರಮೇಣ ಮೂರು ಅಂಕೆ, ಇದೀಗ ಎರಡಂಕೆಗೆ ಇಳಿಕೆ ಕಂಡಿದೆ. ಈ ವರ್ಷ ಎರಡಂಕೆಯಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಆರೋಗ್ಯ ಇಲಾಖೆಯಿಂದ ನಡೆಯುತ್ತಿದೆ. ಹೀಗೆ ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಶೂನ್ಯ ಮಲೇರಿಯಾ ಪ್ರಕರಣವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಮಲೇರಿಯಾ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸೊಳ್ಳೆ ಉತ್ಪತ್ತಿ ಸ್ಥಳ ಪತ್ತೆ, ಲಾರ್ವ ನಾಶ, ಚಿಕಿತ್ಸೆಯಂತಹ ಕ್ರಮಗಳನ್ನು ನೀಡಲಾಗುತ್ತಿದೆ. ಅದೇ ರೀತಿ ಪ್ರತಿವರ್ಷ ವಲಸೆ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅವರ ಕಟ್ಟಡ ಕಾಮಗಾರಿ ಸ್ಥಳಗಳಲ್ಲಿ ಪರಿ ಶೀಲನೆ ನಡೆಸಲಾಗುತ್ತದೆ. ಹೀಗೆ ಮಲೇರಿಯಾ ಕಡಿಮೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.


ಜಿಲ್ಲಾಧಿಕಾರಿ ಸೂಚನೆಯಂತೆ ಸಿವಿಕ್ ಬೈಲಾ ಸಿದ್ಧಪಡಿಸಲಾಗಿದ್ದು, ಇದನ್ನು ಶೀಘ್ರವೇ ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗುವುದು. ಇನ್ನು ಈ ಬೈಲಾಗೆ ಸರಕಾರ ಅಧಿಸೂಚನೆ ಹೊರಡಿಸಿದರೆ ಜವಾಬ್ದಾರಿ ನಿರ್ವಹಿಸದ ನಾಗರಿಕರ ವಿರುದ್ಧ ದಂಡ ವಿಧಿಸಲು ಸಾಧ್ಯವಾಗುತ್ತದೆ. ಈ ಸಂಬಂಧ ಈಗಾಗಲೇ ನಿಯೋಜಿಸಿರುವ ಸ್ವಯಂ ಸೇವಕರು ಕೂಡ ನಗರಸಭೆಗೆ ವರದಿ ನೀಡಿದರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ.

-ಆನಂದ ಕಲ್ಲೋಲಿಕರ್, ಪೌರಾಯುಕ್ತರು, ನಗರಸಭೆ ಉಡುಪಿ

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News