ಬಿಎಸ್‌ವೈ ಪ್ರಮಾಣ ಸ್ವೀಕಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಚರ್ಚೆ

Update: 2019-07-26 15:52 GMT

ಬೆಂಗಳೂರು, ಜು. 26: ‘ಯಡಿಯೂರಪ್ಪನವರಿಗೆ ಬಹುಮತವಿಲ್ಲದೆ ಇದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಅವಕಾಶ ನೀಡಿದ್ದು ಹೇಗೆ?’ ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಹಲವು ಮುಖಂಡರು ಸುದೀರ್ಘ ಚರ್ಚೆ ನಡೆಸಿದರು.

ಶುಕ್ರವಾರ ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ಮಾಜಿ ಸಚಿವರಾದ ಝಮೀರ್ ಅಹ್ಮದ್‌ಖಾನ್, ಯು.ಟಿ.ಖಾದರ್, ರಾಮಲಿಂಗಾರೆಡ್ಡಿ, ಶಿವರಾಜ ತಂಗಡಗಿ, ಶಾಸಕ ಭೀಮಾನಾಯ್ಕಿ ಸೇರಿದಂತೆ ಇನ್ನಿತರರು ಸಮಾಲೋಚನೆ ನಡೆಸಿದರು.

ಯಡಿಯೂರಪ್ಪರಿಗೆ ಸರಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲವಿಲ್ಲ. ಆದರೂ ಅವರು ಹೇಗೆ ಸರಕಾರ ರಚನೆ ಮಾಡುತ್ತಾರೆ. ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲ ವಜುಭಾಯ್ ವಾಲಾ ಅವರು ಹೇಗೆ ಒಪ್ಪಿಗೆ ನೀಡಿದರು ಎಂಬ ಬಗ್ಗೆ ಮುಖಂಡರು ಕಾನೂನು ತಜ್ಞರ ಸಲಹೆ ಪಡೆದಿದ್ದಾರೆಂದು ಗೊತ್ತಾಗಿದೆ.

ವಿಪಕ್ಷದಲ್ಲಿ ಇರ್ತೀವಿ: ರಾಜ್ಯದಲ್ಲಿ ನೂತನ ಸರಕಾರ ರಚನೆಯಾಗುತ್ತಿದ್ದು, ನಾವು ವಿಪಕ್ಷದಲ್ಲಿ ಇರ್ತೀವಿ. ಇದೊಂದು ರೀತಿಯಲ್ಲಿ ಸೈಕಲ್‌ನ ಚಕ್ರವಿದ್ದಂತೆ ನಾವು ಮುಂದೆ ಅಧಿಕಾರಕ್ಕೆ ಬರಲಿದ್ದೇವೆ. ರಾಜ್ಯದಲ್ಲಿ ಸ್ಥಿರ ಸರಕಾರ ಇರಬೇಕಾದರೆ ಉತ್ತಮ ಆಡಳಿತ ನೀಡಬೇಕು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಅವರು, ರಾಜ್ಯ ರಾಜಕೀಯದ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದು, ನಾಲ್ಕು ಗೋಡೆಗಳ ಮಧ್ಯೆ ನಡೆದ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಬಿಎಸ್‌ವೈ ಬಹುಮತದ ಬಗ್ಗೆ ರಾಜ್ಯಪಾಲರು ಗಮನಿಸಲಿದ್ದಾರೆಂದು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರನ್ನು ಸೆಳೆಯುವ ವಿಚಾರ ಇದೀಗ ಮುಗಿದ ಅಧ್ಯಾಯ. ನಾವು ಇದೀಗ ಯಾರನ್ನು ಸೆಳೆಯುವ ಪ್ರಯತ್ನ ನಡೆಸಿಲ್ಲ. ಆ ಪ್ರಯತ್ನ ನಡೆದಿದೆ ಎಂಬುದು ಸುಳ್ಳು. ನಾವು ಯಾರನ್ನೂ ಸಂಪರ್ಕ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಒತ್ತಡ ಹೇರಿಲ್ಲ: ಶಾಸಕರ ಅನರ್ಹತೆ ಸಂಬಂಧ ಸ್ಪೀಕರ್ ಅವರ ಮೇಲೆ ನಾವು ಯಾವುದೇ ಒತ್ತಡ ಹೇರಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಗೌರವ ಉಳಿಸುವ ನಿಟ್ಟಿನಲ್ಲಿ ಸ್ಪೀಕರ್ ಕ್ರಮ ಕೈಗೊಂಡಿದ್ದಾರೆ. ನಾವು ಸ್ಪೀಕರ್ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದರು.

ಬಿಜೆಪಿಗೆ ಬಹುಮತವಿಲ್ಲ. ಆದರೂ ಅವರು ತರಾತುರಿಯಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಮುಂದಾಗಿದ್ದು, ಈ ಬಗ್ಗೆ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಪಕ್ಷದ ಮುಖಂಡರು ತೀರ್ಮಾನ ಮಾಡಲಿದ್ದಾರೆ. ಮೈತ್ರಿ ಮುಂದುವರಿಕೆ ಬಗ್ಗೆ ವರಿಷ್ಠರು ನಿರ್ಧರಿಸಲಿದ್ದಾರೆಂದು ಖಾದರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News