ಲೈವ್ ಬ್ಯಾಂಡ್ ಮೇಲೆ ಸಿಸಿಬಿ ದಾಳಿ: 104 ಮಹಿಳೆಯರ ರಕ್ಷಣೆ, 52 ಮಂದಿ ಸೆರೆ

Update: 2019-07-26 15:55 GMT

ಬೆಂಗಳೂರು, ಜು.26: ನಿಯಮ ಬಾಹಿರವಾಗಿ ಅಶ್ಲೀಲ ನೃತ್ಯ ನಡೆಸುತ್ತಿದ್ದ ಎರಡು ಡ್ಯಾನ್ಸ್ ಬಾರ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 104 ಮಹಿಳೆಯರನ್ನು ರಕ್ಷಿಸಿ, 52 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್-3 ಬಾರ್ ರೆಸ್ಟೋರೆಂಟ್ ಎಂಬ ಲೈವ್ ಬ್ಯಾಂಡ್‌ನಲ್ಲಿ ಕೆಲ ಮಹಿಳೆಯರನ್ನು ಅಕ್ರಮವಾಗಿಟ್ಟು ಅಶ್ಲೀಲ ನೃತ್ಯ ಮಾಡಿಸುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ 20 ಮಂದಿಯನ್ನು ಬಂಧಿಸಲಾಗಿದ್ದು, ದಾಳಿ ವೇಳೆ ಬಾರ್ ರೆಸ್ಟೋರೆಂಟ್‌ನ ಮಾಲಕರಾದ ಗೋವಿಂದರಾಜು ಮತ್ತು ಮೇಲ್ವಿಚಾರಕರುಗಳಾದ ಪ್ರಶಾಂತ್, ಪ್ರವೀಣ್ ಮತ್ತು ಸುನೀತಾ ಎಂಬುವರು ತಲೆಮರೆಸಿಕೊಂಡಿದ್ದು, ಇವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಮಾಲಕ ಸೆರೆ: ನಗರದ ಪುರಭವನ ಹತ್ತಿರದ ಡ್ಯಾನ್ಸ್ ಬಾರ್ ಒಂದರಲ್ಲಿ ಮಹಿಳೆಯರನ್ನಿಟ್ಟು ಅಶ್ಲೀಲ ನೃತ್ಯ ಮಾಡಿಸುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬಾರ್ ವ್ಯವಸ್ಥಾಪಕ ಸದಾನಂದ ಪೂಜಾರಿ, ಸಿಬ್ಬಂದಿ ಬಾಲಕೃಷ್ಣ ಶೆಟ್ಟಿ ಸೇರಿದಂತೆ 32 ಜರನ್ನು ಬಂಧಿಸಿ, 33 ಮಹಿಳೆಯರನ್ನು ರಕ್ಷಣೆ ಮಾಡಿ, 1.23 ಲಕ್ಷ ರೂ. ನಗದು ಜಪ್ತಿ ಮಾಡಿ, ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News