ಟಿಡಿಆರ್ ಪ್ರಕರಣ: ವಿಶೇಷ ತನಿಖೆಗೆ ಎಸಿಬಿ ಎಸ್ಪಿ ಅಬ್ದುಲ್ ಅಹದ್ ನೇಮಕಗೊಳಿಸಿ ಹೈಕೋರ್ಟ್ ಆದೇಶ

Update: 2019-07-26 15:58 GMT

ಬೆಂಗಳೂರು, ಜು.26: ಬಹುಕೋಟಿ ವಂಚನೆಯ ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್) ಪ್ರಕರಣದ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾಧಿಕಾರಿಯಾಗಿ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಎಸ್ಪಿ ಅಬ್ದುಲ್ ಅಹದ್ ಅವರನ್ನು ನೇಮಕ ಮಾಡಲು ಹೈಕೋರ್ಟ್ ಆದೇಶಿಸಿದೆ. 

ಈ ಕುರಿತಂತೆ ನಾಕೋಡ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಯ ನಿರ್ದೇಶಕ ರತನ್ ಬಾಬೂಲಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿತು.

ಟಿಡಿಆರ್ ವ್ಯವಹಾರದಲ್ಲಿ ಬಿಬಿಎಂಪಿಯ ಕೆಲವು ಅಧಿಕಾರಿಗಳು, ರಿಯಲ್ ಎಸ್ಟೇಟ್‌ನಲ್ಲಿ ಸಕ್ರಿಯವಾಗಿರುವ ಕೆಲವು ರಾಜಕಾರಣಿಗಳು ಮತ್ತು ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದು, ಬೆರಳೆಣಿಕೆಯಷ್ಟು ನಿರ್ಮಾಣ ಸಂಸ್ಥೆಗಳು 4 ರಿಂದ 5 ಲಕ್ಷ ಚದರಡಿವರೆಗೂ ಅಭಿವೃದ್ಧಿ ಹಕ್ಕು ಪತ್ರ(ಡಿಆರ್‌ಸಿ-ಅಭಿವೃದ್ಧಿ ಹಕ್ಕು ಪಡೆದವರಿಗೆ ವಿತರಿಸುವ ಪತ್ರ) ಖರೀದಿಸಿವೆ. ಬಿಬಿಎಂಪಿ ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡ ಹಾಗೂ ನಿವೇಶನಕ್ಕೆ ಪರ್ಯಾಯವಾಗಿ ಟಿಡಿಆರ್ ಹಕ್ಕು ವಿತರಿಸುವ ವ್ಯವಸ್ಥೆ 2005ರಿಂದ ಜಾರಿಗೆ ಬಂದಿದೆ. 2015ರವರೆಗೆ ಟಿಡಿಆರ್ ಹಕ್ಕು ಪಡೆದವರಿಗೆ ಡಿಆರ್‌ಸಿ ಪತ್ರ ವಿತರಿಸುವ ಅಧಿಕಾರ ಬಿಬಿಎಂಪಿ ಕೈಯಲ್ಲಿತ್ತು. ಆನಂತರ ಬಿಡಿಎಗೆ ವರ್ಗಾಯಿಸಲಾಗಿತ್ತು. ಇದೀಗ ಈ ಬಹುಕೋಟಿ ವಂಚನೆಯ ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್) ಪ್ರಕರಣದ ತನಿಖೆ ನಡೆಸಲು ಎಸ್ಪಿ ಅಬ್ದುಲ್ ಅಹದ್ ಅವರನ್ನು ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News