ಪ್ರೇರಕ ಕೃತಿಗಳ ಅಗತ್ಯವಿದೆ: ​ವಿಚಾರವಾದಿ ಡಾ.ಜಿ.ರಾಮಕೃಷ್ಣ

Update: 2019-07-28 13:33 GMT

ಬೆಂಗಳೂರು, ಜು.28: ಇವತ್ತೋ, ನಾಳೆನೋ ಮರೆತು ಹೋಗುವಂತ ಕೃತಿಗಳ ಬದಲಾಗಿ, ಸಮಕಾಲೀನ ಜೀವನಕ್ಕೆ ಪ್ರೇರಣೆಯಾಗುವಂಥಹ ಕೃತಿಗಳು ಪ್ರಸ್ತುತ ಜಗತ್ತಿಗೆ ಅಗತ್ಯವಿದೆ ಎಂದು ವಿಚಾರವಾದಿ ಡಾ.ಜಿ.ರಾಮಕೃಷ್ಣ ಅಭಿಪ್ರಾಯಪಟ್ಟರು.

ರವಿವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ವಿಕಾಸ ಪ್ರಕಾಶನ, ನವ ಕರ್ನಾಟಕ ಪ್ರಕಾಶನದಿಂದ ಆಯೋಜಿಸಿದ್ದ, ಡಾ.ಬಿ.ಆರ್.ಮಂಜುನಾಥ್ ಅವರ ‘ಕಥನ ಕಣಜದ ಗಟ್ಟಿ ಕಾಳು’ ಹಾಗೂ ‘ಎಂಟು ದಿಕ್ಕು ನೂರೆಂಟು ಕಥೆ’ ಕೃತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ಕಾಲಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಪ್ರಸ್ತುತವಾಗುವಂತ ಬರಹಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತವೆ. ಹಾಗಾಗಿ, ಸಮಕಾಲಿನ ಜೀವನಕ್ಕೆ ಪ್ರೇರಣೆಯಾಗುವ ಹಾಗೂ ಓದುಗರಿಗೆ ಅರ್ಥೈಸುವುದಕ್ಕೆ ಬೇಕಾದಂತ ವಿಷಯದ ಕುರಿತಾದ ಕಥೆ, ಚೌಕಟ್ಟು, ಸಂದೇಶ ಒಳಗೊಂಡ ಕೃತಿಗಳು ಬರಬೇಕು ಎಂದರು.

ಜೀವನಾನುಭವ ಅತ್ಯಂತ ಕ್ಲಿಷ್ಟಕರ ಹಾಗೂ ಸಂಕೀರ್ಣವಾಗಿದ್ದು, ಸದಾ ಕಾಲಕ್ಕೂ ಮೌಲಿಕವಾಗಿ ಉಳಿಯುವಂತಹ ಪ್ರಾಮಾಣಿಕತೆ, ಬದ್ಧತೆ ಹಾಗೂ ಆದರ್ಶಗಳನ್ನು ಹೊಂದಿದ ಸಾಹಿತ್ಯ ರಚನೆಯಾಬೇಕಿದೆ ಎಂದು ನುಡಿದರು.

ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಜನಸಾಮಾನ್ಯರಿಗೆ ಎಲ್ಲ ಶ್ರೇಷ್ಠ ಕವಿಗಳ, ಸಾಹಿತಿಗಳ ಮಾಹಿತಿ ದೊರೆಯಬೇಕಿದೆ. ಪತ್ರಿಕೆ ಮೂಲಕ ಜನಸಾಮಾನ್ಯರಿಗೆ ಜಗತ್ಪ್ರಸಿದ್ಧ ಸಾಧಕರ ಸಾಧನೆ ತಲುಪಿದರೆ ಗ್ರಾಮೀಣ ಪ್ರದೇಶ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಜನಸಾಮಾನ್ಯರಿಗೆ ವ್ಯಕ್ತಿ ಆಧಾರಿತ ಕೃತಿಗಳು ತಲುಪಿದರೆ ಶ್ರೇಷ್ಠ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಮಾಧ್ಯಮಗಳಿಗೆ ಸತ್ಯವೇ ಮೂಲಾಧಾರವಾಗಿರುತ್ತದೆ. ಕಾಲದ ಹೊಡೆತದಲ್ಲಿ ಸತ್ಯಾಂಶವನ್ನು ಜನರಿಗೆ ತಲುಪಿಸುವ ಕಾರ್ಯ ಮುಖ್ಯವಾಗಿರುತ್ತದೆ. ವಸ್ತು ವಿಶ್ಲೇಷಣೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳ ಕೇವಲ ವೈಚಾರಿಕ ಮನೋಭಾವವನ್ನು ಮೆಟ್ಟಿ ಹೋರಾಟ ಮಾಡಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಪಲ್ಲವಿ ಇಡೂರು, ಪ್ರೊ.ವಿ.ಎನ್. ಲಕ್ಷ್ಮೀನಾರಾಯಣ, ಬರಹಗಾರ ಡಾ.ಬಿ.ಆರ್.ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News