ಓಜಲ ಸರಕಾರಿ ಶಾಲೆಯನ್ನು ಮುನ್ನಡೆಸುವ ಮಲ್ಲಿಗೆ ಕೃಷಿ!

Update: 2019-07-29 11:15 GMT

 ಬಂಟ್ವಾಳ, ಜು.28: ಮಲ್ಲಿಗೆ ಕೃಷಿಯ ಆದಾಯದಿಂದಲೇ ಸರಕಾರಿ ಶಾಲೆಯೊಂದು ಅತಿಥಿ ಶಿಕ್ಷಕಿಯರಿಗೆ ಗೌರವಧನ ನೀಡುತ್ತಿದ್ದು, ಆದಾಯ ಕಡಿಮೆ ಆದಾಗ ದಾನಿಗಳ ಸಹಕಾರದಿಂದ ಸರಕಾರಿ ಶಾಲೆಯನ್ನು ಉಳಿಸುವ ಕಠಿಣ ಪ್ರಯತ್ನ ನಡೆಯುತ್ತಿವೆ. ಇದು ಬಂಟ್ವಾಳ ತಾಲೂಕಿನ ಕುಳಗ್ರಾಮದ ಓಜಲ ಕಿರಿಯ ಪ್ರಾಥಮಿಕ ಶಾಲೆಯ ಮಲ್ಲಿಗೆ ಕೃಷಿಯ ಯಶೋಗಾಧೆ.

ಮಂದಹಾಸ ಮೂಡಿಸಿದ ಮಲ್ಲಿಗೆ: 1968ರಲ್ಲಿ ಆರಂಭಗೊಂಡ ಓಜಲ ಕಿರಿಯ ಪ್ರಾಥಮಿಕ ಶಾಲೆಗೆ 51 ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ಹೆಗ್ಗಳಿಕೆ ಇದೆ. ಆದರೆ, ಎಲ್ಲ ಸರಕಾರಿ ಶಾಲೆಗಳಂತೆ ಮಕ್ಕಳ ಸಂಖ್ಯೆ ಇಲ್ಲಿಯೂ ಕಡಿಮೆಯಾಗಿ 2007ರಲ್ಲಿ 7 ವಿದ್ಯಾರ್ಥಿಗಳು ಮಾತ್ರ ಬಾಕಿ ಉಳಿದ ಪರಿಣಾಮ ಶಾಲೆ ಮುಚ್ಚುವ ಹಂತಕ್ಕೂ ತಲುಪಿತ್ತು. ಈ ಸಂದರ್ಭ ಶಾಲೆಯನ್ನು ಉಳಿಸಲು ಅಂದಿನ ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರು ಪ್ರಯತ್ನಿಸಿ ಯಶಸ್ಸು ಸಾಧಿಸಿದ್ದರು. ಇದೀಗ ಶಾಲೆಯಲ್ಲಿ 87 ಮಕ್ಕಳು ಕಲಿಯುತ್ತಿದ್ದು, ಶಾಲೆ ಗಮನಾರ್ಹ ಶೈಕ್ಷಣಿಕ ಸಾಧನೆ ಮಾಡುತ್ತಿದೆ.

2014ರಿಂದ ಮಲ್ಲಿಗೆ ಕೃಷಿ ಆರಂಭ: 2014ರಿಂದ ಶಾಲೆಯಲ್ಲಿ ಮಲ್ಲಿಗೆ ಕೃಷಿ ಆರಂಭಿಸಲಾ ಗಿದ್ದು, ಇದೀಗ ಶಾಲೆಯ ಆದಾಯದ ಮೂಲವಾಗಿ ಬೆಳೆಯುತ್ತಿರುವುದು, ಇಲ್ಲಿನ ಎಸ್‌ಡಿಎಂಸಿಯವರ ಮುಗದಲ್ಲೂ ಮಂದಹಾಸ ಮೂಡಿಸಿದೆ. ಈ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಹೊನ್ನಪ್ಪಗೌಡ ಹಾಗೂ ದಯಾನಂದ ಜೊತೆಯಾಗಿ ಶಾಲೆಯಲ್ಲಿ ಮಲ್ಲಿಗೆ ಕೃಷಿ ಆರಂಭಿಸಿದರು. ಆಗಿನ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಭಟ್ ಮಲ್ಲಿಗೆ ಕೃಷಿಗೆ ಸಾಥ್ ನೀಡಿದ್ದರು. ಕಳೆದ ವರ್ಷದವರೆಗೂ ಅಧ್ಯಕ್ಷರಾಗಿದ್ದ ಸುಂದರ ಗೌಡರು ಶಾಲೆಯಲ್ಲಿನ ಹಲವು ಗುಣಾತ್ಮಕ ಬದಲಾವಣೆಗೆ ಕಾರಣಕರ್ತರಾಗಿ ಕೆಲಸಮಾಡಿಸಿದ್ದು, ಮಕ್ಕಳ ಪೋಷಕರೂ ಶಾಲಾ ಕಟ್ಟಡ ರಚನಾ ಕಾರ್ಯದಲ್ಲಿ ಶ್ರಮದಾನ ನಡೆಸುವಂತೆ ಪ್ರೇರೇಪಣೆ ನೀಡಿದ್ದರು.

ಎಲ್‌ಕೆಜಿ ಆರಂಭಿಸುವ ಚಿಂತನೆ: ಶಾಲೆಯಲ್ಲಿ ನಿರ್ಮಾಣಗೊಂಡಿರುವ ಸುವರ್ಣ ವರ್ಷಾಚರಣೆಯ ಕಚೇರಿ ಕಟ್ಟಡ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮಕ್ಕಳ ಪೋಷಕರ ಶ್ರಮದ ಫಲವಾಗಿ ರೂಪುಗೊಂಡಿದೆ. ಮಾತ್ರವಲ್ಲದೆ ನೈಋತ್ಯ ರೈಲ್ವೇ ಮೈಸೂರು ವಿಭಾಗವು ಈ ಶಾಲೆಗೆ 2 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದೆ. ಶಾಲೆಗಾಗಿ ಊರವರು ಒಟ್ಟು ಸೇರಿ ಕೊಳವೆ ಬಾವಿ ನಿರ್ಮಿಸಿ ಕೊಟ್ಟಿದ್ದಾರೆ. ಇಂಗುಗುಂಡಿ ರಚಿಸಿರುವುದರಿಂದ ವರ್ಷವಿಡೀ ಸಮೃದ್ಧ ನೀರು. ಶಾಲೆಗೆ ಪ್ರಸಕ್ತ ಸಾಲಿನಲ್ಲಿ 6ನೇ ತರಗತಿ ಮಂಜೂರಾಗಿದ್ದು, ಗುಣಮಟ್ಟದ ಶಿಕ್ಷಣದ ಕಾರಣ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ವರ್ಷ ಎಲ್‌ಕೆಜಿ ತರಗತಿ ಆರಂಭಿಸುವ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಚಿಂತನೆ ನಡೆಸಿದೆ.

ಗಮನ ಸೆಳೆಯುತ್ತಿರುವ ಮಲ್ಲಿಗೆ ಕೃಷಿ

  ಪ್ರತಿದಿನ ಬೆಳಗ್ಗೆ ಬೇಗನೇ ಶಾಲೆಗೆ ಬರುವ ಶಿಕ್ಷಕಿಯರು ಮಲ್ಲಿಗೆಯನ್ನು ಕೊಯ್ಯುತ್ತಾರೆ. ಕೆಲ ಪೋಷಕರು ಈ ಕಾರ್ಯದಲ್ಲಿ ಸಹಕರಿಸುತ್ತಾರೆ. ಕೊಯ್ದ ಮಲ್ಲಿಗೆ ಮೊಗ್ಗುಗಳನ್ನು ಶಾಲೆಯ ಬಿಸಿಯೂಟ ಅಡುಗೆ ಸಿಬ್ಬಂದಿ ಹರಿಣಾಕ್ಷಿ ಮಾಲೆ ಮಾಡಿದರೆ, ಶಾಲಾಶಿಕ್ಷಕಿಯರು ಶಾಲೆ ಬಿಟ್ಟು ಹೋಗುವ ಸಂದರ್ಭ ಮಲ್ಲಿಗೆಯನ್ನು ಕಬಕದ ಹೂವಿನ ಅಂಗಡಿಗೆ ಮಾರಾಟಕ್ಕೆ ಕೊಡುತ್ತಾರೆ. ಎಸ್‌ಡಿಎಂಸಿ ಅಧ್ಯಕ್ಷರೂ ಈ ಕೆಲಸಕ್ಕೆ ಸಾಥ್ ನೀಡುತ್ತಾರೆ. ರಜಾ ದಿನಗಳಲ್ಲಿ ಎಸ್‌ಡಿಎಂಸಿ, ಪೋಷಕರು ಹಾಗೂ ಬಿಸಿಯೂಟ ಅಡುಗೆ ಸಿಬ್ಬಂದಿ ಮಲ್ಲಿಗೆ ತೋಟದ ಮೇಲುಸ್ತುವಾರಿ ವಹಿಸುತ್ತಾರೆ. ಹೀಗಾಗಿ ಇಲ್ಲಿನ ಮಲ್ಲಿಗೆ ಕೃಷಿ ಎಲ್ಲರ ಗಮನ ಸೆಳೆಯುತ್ತಿದೆ.

ವಾರ್ಷಿಕ 40 ಸಾವಿರ ರೂ. ಆದಾಯ

ಪ್ರಗತಿಪರ ಕೃಷಿಕರಾಗಿರುವ ಹೊನ್ನಪ್ಪ ಗೌಡ ಸದ್ರಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಲೆಯ ಎಲ್ಲ ಆಗುಹೋಗುಗಳಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರಾ ಹಾಗೂ ಶಿಕ್ಷಕ ವೃಂದದ ಜೊತೆ ಸಕ್ರೀಯರಾಗಿದ್ದಾರೆ. 2012ರಲ್ಲಿ ನೆಡಲಾದ 30 ಮಲ್ಲಿಗೆ ಗಿಡ ಪೈಕಿ ಪ್ರಸಕ್ತ 26 ಗಿಡಗಳು ಮಲ್ಲಿಗೆ ಬೆಳೆ ನೀಡುತ್ತಿದ್ದು, ವಾರ್ಷಿಕ 35 ರಿಂದ 40 ಸಾವಿರ ಆದಾಯ ನೀಡುತ್ತಿದೆ.

ಕಳೆದ ವರ್ಷದವರೆಗೆ ಒಬ್ಬರೇ ಗೌರವ ಶಿಕ್ಷಕಿ ಇದ್ದ ಹಿನ್ನೆಲೆಯಲ್ಲಿ, ಅವರ ಗೌರವಧನಕ್ಕೆ ದೊಡ್ಡ ಆದಾಯದ ಮೂಲವಾಗಿತ್ತು. ಆದರೆ ಈ ಬಾರಿ ಒಂದನೇ ತರಗತಿಗೆ 29 ಮಕ್ಕಳು ಸೇರ್ಪಡೆಯಾಗಿರುವುದು ಮತ್ತು 6 ತರಗತಿಗೆ ವಿಸ್ತಾರವಾಗಿರುವುದರಿಂದ ಮಕ್ಕಳ ಸಂಖ್ಯೆಯೂ 87ಕ್ಕೇರಿದೆ. ಈ ಹಿನ್ನೆಲೆಯಲ್ಲಿ ಮತ್ತಿಬ್ಬರು ಗೌರವ ಶಿಕ್ಷಕಿಯರನ್ನು ನೇಮಿಸಲಾಗಿದ್ದು, ಮೂರು ಮಂದಿಯ ಗೌರವ ಧನಕ್ಕೆ ಮಲ್ಲಿಗೆ ಕೃಷಿಯ ಆದಾಯ ದುಬಾರಿ ಆಗಲಿದೆ. ಒಬ್ಬ ಶಿಕ್ಷಕಿಯ ವಾರ್ಷಿಕ ಗೌರವಧನಕ್ಕೆ ಸುಮಾರು 50ಸಾವಿರ ಅಗತ್ಯವಾಗಿದ್ದು, ಶಾಲಾ ನಿರ್ವಹಣೆಗೂ ಆದಾಯದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ದಾನಿಗಳ ನಿರೀಕ್ಷೆಯಲ್ಲಿದೆ.

ಗೌರವ ಶಿಕ್ಷಕಿಯರ ಸಂಭಾವನೆಗೆ ಮಲ್ಲಿಗೆ ಕೃಷಿಯ ಆದಾಯ ನೆರವಾಗುತ್ತಿದೆ. ಕಡಿಮೆ ಆದಾಗ ದಾನಿಗಳ ನೆರವು ಕೇಳುತ್ತೇವೆ. ಕೆಲವೊಮ್ಮೆ ನಾವೂ ಭರಿಸುತ್ತೇವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿ ಬೆಳೆಯುತ್ತೇವೆ. ಊರಿನ ಜನ ಸರ್ವ ಸಹಕಾರ ನೀಡುತ್ತಾರೆ. ಮುಂದಿನ ಶೈಕ್ಷಣಿಕ ವರ್ಷ ಮಕ್ಕಳ ಸಂಖ್ಯೆ ಹೆಚ್ಚುವುದರಿಂದ ನಮಗೊಂದು ಸುಸಜ್ಜಿತ ಕಟ್ಟಡ ಅಗತ್ಯವಿದ್ದು, ದಾನಿಗಳ ನೆರವು ಬೇಕಾಗಿದೆ.

-ವಿಲ್ಮಾ ಸಿಕ್ವೇರಾ,

ಓಜಲ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ

ಈ ವರ್ಷ 33 ಮಕ್ಕಳ ಸೇರ್ಪಡೆಯೊಂದಿಗೆ ಒಟ್ಟು ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್‌ಕೆಜಿ ಯುಕೆಜಿ ಆರಂಭಿಸುವ ಯೋಚನೆಯಿದ್ದು, ಮಕ್ಕಳ ಸಂಖ್ಯೆ ನೂರರ ಗಡಿ ದಾಟುವ ನಿರೀಕ್ಷೆ ಇದೆ. ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷ ಸುಂದರ ಗೌಡ ಹಾಗೂ ಈಗಿನ ಎಲ್ಲ ಸದಸ್ಯರು-ಪೋಷಕರು ಮುಖ್ಯವಾಗಿ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಸಹಕಾರದಿಂದ ಗುಣಾ್ಮಕ ಶಿಕ್ಷಣದತ್ತ ಹೆಜ್ಜೆ ಹಾಕಿದ್ದೇವೆ.

-ಹೊನ್ನಪ್ಪ ಗೌಡ

ಓಜಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು,

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News