ಎಲ್‌ಇಡಿ ಜಾಹೀರಾತು ಫಲಕ ಅಳವಡಿಸಿರುವವರ ವಿರುದ್ಧ ಎಫ್‌ಐಆರ್: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2019-07-30 18:21 GMT

ಬೆಂಗಳೂರು, ಜು.30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಜಾಹೀರಾತು ಬೈಲಾ ಅನುಷ್ಠಾನಗೊಳ್ಳದಿರುವ ಹಿನ್ನೆಲೆಯಲ್ಲಿ ಎಲ್‌ಇಡಿ ಜಾಹೀರಾತು ಫಲಕ ಅಳವಡಿಸಿರುವ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಬಿಬಿಎಂಪಿಯ ಕೆಂಪೇಗೌಡ ಪೌರ ಸಂಭಾಗಣದಲ್ಲಿ ನಡೆದ ಸಾಮಾನ್ಯ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಮಾಲ್, ಅಂಗಡಿಗಳು ಹಾಗೂ ಖಾಸಗಿ ಸ್ಥಳಗಳಲ್ಲಿ ಎಲ್‌ಇಡಿ ಫಲಕ ಹಾಕಲು ಅನುಮತಿ ನೀಡಿಲ್ಲ. ನಿಯಮ ಬಾಹಿರವಾಗಿ ಅಳವಡಿಕೆ ಮಾಡಿಕೊಂಡರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಗರದ 600 ಟ್ರಾಫಿಕ್ ಜಂಕ್ಷನ್‌ಗಳಲ್ಲಿ 1200 ನಾಮಫಲಕ ಅಳವಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 15 ಚದರ ಅಡಿಯಲ್ಲಿ ಬೋರ್ಡ್ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಇದಕ್ಕೆಲ್ಲ 200 ಕೋಟಿ ವೆಚ್ಚವಾಗುತ್ತದೆ. ಎಲ್‌ಇಡಿ ಟೆಂಡರ್‌ಗೆ 4 ಪ್ಯಾಕೇಜ್ ಮಾಡಲಾಗಿದೆ. 1ಎಸ್ಸಿ-ಎಸ್ಟಿಗೆ ಹಾಗೂ 3 ಜನರಲ್‌ಗೆ ಮೀಸಲಿಡಲಾಗಿತ್ತು. ತರಾತುರಿಯಲ್ಲಿ ಯೋಜನೆಗೆ ಅನುವು ಮಾಡಿಕೊಡಲಾಗಿತ್ತು. ಆದರೆ ಇದನ್ನು ಜುಲೈ 28ರಂದು ರದ್ದು ಮಾಡಲಾಗಿದೆ ಎಂದು ವಿವರಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ, 2006ರ ಜಾಹೀರಾತು ಬೈಲಾ ಅಮಾನತುಗೊಂಡಿದೆ. ಹೊಸ ಬೈಲಾಗೆ ನಾವು ಇನ್ನು ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಹೊಸ ಜಾಹೀರಾತು ಬೈಲಾ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಪಾಲಿಕೆಗೆ ಪತ್ರ ಬರೆದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತ, ಹೊಸ ಮಾರ್ಗಸೂಚಿ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುವುದು, ಪಾರದರ್ಶಕವಾಗಿ ಟೆಂಡರ್ ಆಹ್ವಾನಿಸುವಂತೆ ಪತ್ರ ಬರೆದಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ. ಹೊಸ ಜಾಹೀರಾತು ಬೈಲಾ ಮಾಡಲು ಚುನಾವಣಾ ನೀತಿ ಜಾರಿಯಲ್ಲಿತ್ತು. ಹಾಗಾಗಿ ನಾವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದ್ದರಿಂದ ಹಳೆ ಬೈಲಾ ಜಾರಿಯಲ್ಲಿದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲು ಅವಕಾಶ ಇರುವುದರಿಂದ ಅವುಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ಪ್ರತಿ ಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ನಗರದಲ್ಲಿ ಒಂದು ವಾರದಿಂದ ಕಸ ವಿಲೇವಾರಿಯಾಗದೆ ಸಮಸ್ಯೆ ಎದುರಾಗಿದೆ. ಇನ್ನು, ಕಸದ ಟೆಂಡರ್ ಏಕೆ ಕರೆದಿಲ್ಲ. ಕಸದ ಬಗ್ಗೆ ಸಿಎಂ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಮಿಟಗಾನಹಳ್ಳಿಯಲ್ಲಿ ಕಸ ಸುರಿಯಲು ಪ್ಲಾನ್ ಮಾಡಲಾಗಿದೆ. ಟೆಂಡರ್ ಕರೆದು ಅಪ್ಲೋಡ್ ಮಾಡಿಲ್ಲ ಏಕೆ? ಕೆಆರ್‌ಡಿಎಲ್ ಕೊಡಬೇಕು ಎಂಬ ಹುನ್ನಾರ ನಡೆಯುತ್ತಿದೆ. ಕೆಆರ್‌ಡಿಎಲ್‌ನವರು ವೈಜ್ಞಾನಿಕ ರೀತಿಯಲ್ಲಿ ಕಸ ನಿರ್ವಹಣೆ ಮಾಡುತ್ತಾರೆಯೇ. ಬೇರೆ ಕಾಮಗಾರಿಗಳಿಗೆ ಟೆಂಡರ್ ಕರೆದು ವರ್ಕ್ ಆರ್ಡರ್ ನೀಡಿ, ಕಸದ ಟೆಂಡರ್ ಏಕೆ ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮೈಸೂರು ರಸ್ತೆಯಲ್ಲಿ ಈಗಾಗಲೇ ಒಂದು ಸ್ಕೈವಾಕ್ ಇದ್ದರೂ 100 ಮೀಟರ್ ಅಂತರದಲ್ಲೇ ಗುಡ್ಡದ ಹಳ್ಳಿಯ ಸ್ಮಶಾನದ ಬಳಿ ಮತ್ತೊಂದು ಸ್ಕೈವಾಕ್ ನಿರ್ಮಿಸಲಾಗಿದೆ. ಇದೇನೋ ಸ್ಮಶಾನದಲ್ಲಿರುವ ದೆವ್ವಗಳು ಓಡಾಡುವುದಕ್ಕಾ ಎಂದು ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಮೇಯರ್, ಈ ರಸ್ತೆಯಲ್ಲಿ ಇತ್ತೀಚೆಗಷ್ಟೇ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರಿಂದ ಎಲ್ಲರ ಅಭಿಪ್ರಾಯ ಪಡೆದು ಸ್ಕೈವಾಕ್ ನಿರ್ಮಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಒಂಟಿ ಮನೆ ಯೋಜನೆಗೆ ಅನುದಾನ ವಿಳಂಬ

ಪ್ರತಿ ವಾರ್ಡ್‌ಗೆ 10 ಮನೆ, ಎಸ್ಸಿ- ಎಸ್ಟಿಗೆ 5 ಮನೆಗಳನ್ನು ಒಂಟಿ ಮನೆ ಯೋಜನೆಯಲ್ಲಿ ಅನುದಾನ ನೀಡಬೇಕು. ಆದರೆ ಬಿಬಿಎಂಪಿ ಅಧಿಕಾರಿಗಳು ಅನುದಾನ ಇಲ್ಲ ಎಂದು ಹೇಳುತ್ತಾರೆ ಎಂದು ಬಿಬಿಎಂಪಿ ಸದಸ್ಯರು ಆರೋಪ ಮಾಡಿದರು. ಇದಕ್ಕೆ ಆಯುಕ್ತರು ಪ್ರತಿಕ್ರಿಯಿಸಿ, ಈಗಾಗಲೇ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಲ್ಲಿ 400 ಮನೆಗಳನ್ನು ನೀಡಿದ್ದಾರೆ. ಅಲ್ಲದೆ, ಯೋಜನೆಯ ಹಂತಗಳನ್ನು ಆದಷ್ಟು ಸರಳೀಕರಣಗೊಳಿಸಿ ಅನೇಕ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು.

ಹೋಲಿಗೆ ಯಂತ್ರ ಗೃಹೋಪಯೋಗಕ್ಕಲ್ಲ

ಬಡವರಿಗೆ ಗುಣಮಟ್ಟದ ಹೊಲಿಗೆ ಯಂತ್ರಗಳನ್ನು ನೀಡಬೇಕೇ ಹೊರತು ಕಳಪೆ ಹೊಲಿಗೆ ಯಂತ್ರಗಳನ್ನಲ್ಲ. ಪಾಲಿಕೆ ನೀಡಿರುವ ಹೊಲಿಗೆ ಯಂತ್ರಗಳು ಗೃಹೋಪಯೋಗಕ್ಕೆ ಬರುತ್ತದೆ. ಜೋವನೋಪಾಯಕ್ಕೆ ಬರುವುದಿಲ್ಲ. ಉತ್ತಮ ಗುಣಮಟ್ಟದ ಯಂತ್ರಗಳನ್ನು ಪಾಲಿಕೆ ನೀಡಿದರೆ, ಬಡ ಹೆಣ್ಣು ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಬಿಜೆಪಿ ಸದಸ್ಯೆ ಶಾಂತಕುಮಾರಿ ಮನವಿ ಮಾಡಿದರು.

ಇಂದಿರಾ ಕ್ಯಾಂಟೀನ್ ಊಟ ಬೇಡ ಪಂಚತಾತಾ ಹೊಟೇಲ್ ಊಟದ ಬದಲಿಗೆ ಕಳೆದ ಹತ್ತು ತಿಂಗಳಿಂದ ಪಾಲಿಕೆಯ ಎಲ್ಲ ಸದಸ್ಯರಿಗೂ ಇಂದಿರಾ ಕ್ಯಾಟೀನ್ ಊಟವನ್ನೇ ನೀಡಲಾಗುತ್ತಿದೆ. ಆದರೆ ಕೆಲವು ಬಿಜೆಪಿ ಸದಸ್ಯರು ಇಂದಿರಾ ಕ್ಯಾಟೀನ್ ಊಟ ಯಾರು ತಿನ್ನುತ್ತಾರೆ ಎಂದು ಹೇಳಿದರು. ಅದಕ್ಕೆ ಮೇಯರ್ ಪ್ರತಿಕ್ರಿಯಿಸಿ, ಏಕೆ ನೀವು ತಿನ್ನುವುದಿಲ್ಲವಾ? ಇಂದಿರಾ ಕ್ಯಾಂಟೀನ್ ಊಟ ಲಕ್ಷಾಂತರ ಜನರ ಹಸಿವನ್ನು ನೀಗಿಸುತ್ತಿದೆ ಎಂದು ನೆನಪಿಸಿದರು.

ವರ್ಷಕ್ಕೆ 250 ಕೋಟಿ ವೆಚ್ಚ

ಪ್ರತಿ ತಿಂಗಳು ಕಸ ವಿಲೇವಾರಿಗೆ 15 ಕೋಟಿ ರೂ.ಗಿಂತಲೂ ಅಧಿಕ ವೆಚ್ಚವಾಗುತ್ತಿದೆ. ವೈಟ್ ಟಾಫಿಂಗ್‌ಗಾಗಿ 1,192 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಆದರೆ ಕಸ ವಿಲೇವಾರಿಗೆ ಗಮನ ನೀಡಿಲ್ಲ. ಬೆಳ್ಳಳ್ಳಿ ಕ್ವಾರಿ ಮುಚ್ಚುತ್ತದೆ ಎಂಬುದೂ ನಿಮಗೆ ಗೊತ್ತಿದ್ದು, ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ.

-ಪದ್ಮನಾಭರೆಡ್ಡಿ, ಬಿಬಿಎಂಪಿ ಪ್ರತಿ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News