ರಕ್ತ ಚಂದನ ಸಾಗಾಟ ಆರೋಪ: ಇಬ್ಬರ ಬಂಧನ, 2 ಟನ್ ವಸ್ತು ಜಪ್ತಿ

Update: 2019-07-31 18:28 GMT

ಬೆಂಗಳೂರು, ಜು.31: ರಕ್ತಚಂದನ ಸಾಗಾಟ ಆರೋಪದಡಿ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2 ಟನ್ ರಕ್ತಚಂದನ ಮರದ ತುಂಡುಗಳು ಹಾಗೂ ವಾಹನ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೋಟೆ ನಿವಾಸಿ ಶೇಕ್ ಅನೀಸ್ ಹಾಗೂ ಸುಳ್ಯ ತಾಲೂಕಿನ ಕೊಲ್ಲಮಗೂರು ಅಂಚೆಯ ನಿವಾಸಿ ಮುಹಮ್ಮದ್ ಇಕ್ಬಾಲ್ ಎಂಬುವರ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಅಂತರ್‌ರಾಷ್ಟ್ರೀಯ ಕಳ್ಳಸಾಗಣೆ ಜಾಲವೊಂದು ಅಕ್ರಮವಾಗಿ ರಕ್ತ ಚಂದನ ಮರಗಳನ್ನು ಕಡಿಸಿ, ವಿದ್ಯಾರಣ್ಯಪುರದಲ್ಲಿರುವ ಗೋಡನ್‌ಗಳಲ್ಲಿ ದಾಸ್ತಾನು ಮಾಡಿ, ಕ್ರಮೇಣ ಇವುಗಳನ್ನು ಚೆನೈ, ಮುಂಬೈ ಸೇರಿದಂತೆ ದೇಶದ ಇತರೇ ರಾಜ್ಯಗಳಿಗೆ ಕಳ್ಳಸಾಗಣೆ ಹಾಗೂ ದೇಶಗಳಿಗೆ ರಫ್ತು ಮಾಡಲು ಸಂಚು ರೂಪಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆಂಬ ಮಾಹಿತಿ ಸಿಸಿಬಿ ಸಂಗ್ರಹಿಸಿತ್ತು.

ಈ ದಂಧೆಯನ್ನು ಭೇದಿಸಲು ಸಿಸಿಬಿ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡಂತೆ ವಿವಿಧ ವಿಶೇಷ ತಂಡಗಳನ್ನು ರಚಿಸಿ, ಈ ತಂಡಗಳಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದಾಗ, ಇಲ್ಲಿನ ಸಿಂಗಾಪುರ ಲೇಔಟ್ ಬಳಿ ಒಂದು ವಾಹನದಲ್ಲಿ ಅಕ್ರಮವಾಗಿ ರಕ್ತಚಂದನದ ಮರದ ತುಂಡುಗಳನ್ನು ಕಳ್ಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಸಿಸಿಬಿ ಎಸ್.ಗಿರೀಶ್ ತಿಳಿಸಿದ್ದಾರೆ.

ಬಂಧಿತ ಆರೋಪಿ ಶೇಕ್ ಅನೀಸ್‌ನಿಂದ 471 ಕೆಜಿ ರಕ್ತಚಂದನ ಮರದ ತುಂಡುಗಳನ್ನು ಜಪ್ತಿ ಮಾಡಿ, ತೀವ್ರ ವಿಚಾರಣೆ ನಡೆಸಿದಾಗ ಮುಹಮ್ಮದ್ ಇಕ್ಬಾಲ್ ಸಿಕ್ಕಿಬಿದ್ದಿದ್ದು, ಗೋಡನ್‌ಗಳಲ್ಲಿದ್ದ ಬಚ್ಚಿಟ್ಟ ಒಟ್ಟು 1,544 ಕೆಜಿ ತೂಕದ ರಕ್ತಚಂದನ ಮರದ ತುಂಡುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News