ಇಂದಿರಾ ಕ್ಯಾಂಟೀನ್‌ನ ಆರ್ಥಿಕ ಹೊರೆ ಬಿಬಿಎಂಪಿ ಹೆಗಲಿಗೆ

Update: 2019-08-01 16:47 GMT

ಬೆಂಗಳೂರು, ಆ.1: ಬಿಬಿಎಂಪಿ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್ ಯೋಜನೆಯ ಆರ್ಥಿಕ ಹೊರೆ ಪಾಲಿಕೆಯ ಮೇಲೆ ಬಿದ್ದಿದೆ.
ಹಿಂದಿನ ಸರಕಾರ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿ ಮಾಡಿದ್ದರು. ಆ ವೇಳೆ ಈ ಯೋಜನೆಗೆ ಸರಕಾರದಿಂದ ಶೇ.30 ರಷ್ಟು ಹಣ ನೀಡಲಾಗುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿನಿಂದ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ, 30 ಕೋಟಿ ರೂ.ಗಳಷ್ಟು ಹಣವನ್ನು ಬಿಬಿಎಂಪಿ ಅನುದಾನದಿಂದಲೇ ಭರಿಸಬೇಕಾಗಿದೆ.

ಬಿಬಿಎಂಪಿ ಈಗಾಗಲೇ ಆರ್ಥಿಕ ಹೊರೆಯನ್ನು ಎದುರಿಸುತ್ತಿದ್ದು, ಪ್ರಸಕ್ತ ಬಿಬಿಎಂಪಿ 481 ಕೋಟಿ. ರೂ ಸಾಲದಲ್ಲಿದೆ. ಇದೀಗ ಮೊತ್ತೂಂದು ಹೊರೆ ಎದುರಾಗಿದೆ. 2011ರಲ್ಲಿ ಬಿಬಿಎಂಪಿ 1,700 ಕೋಟಿ ರೂ.ಸಾಲ ಮಾಡಿತ್ತು. ಇದರೊಂದಿಗೆ ಹಲವು ಕಟ್ಟಡಗಳನ್ನು ಅಡಮಾನ ಇರಿಸಿತ್ತು. ಸಾಲದ ಹೊರೆಯಿಂದ ಇತ್ತೀಚಿನ ವರ್ಷಗಳಲ್ಲಿ ಸುಧಾರಿಸಿಕೊಂಡಿದ್ದು, ಅಡಮಾನ ಇರಿಸಿದ್ದ ಕೆಲವು ಕಟ್ಟಡಗಳನ್ನು ಬಿಡಿಸಿಕೊಳ್ಳಲಾಗಿದೆ.
ಇದರ ನಡುವೆಯೂ ನಗರದ ಐದಾರು ಪ್ರದೇಶಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಿದೆ. ಇಂತಹ ಸ್ಥಿತಿಯಲ್ಲಿಯೇ ಸರಕಾರ ಶೇ.30 ರಷ್ಟು ಹಣವನ್ನು ನೀಡದಿರುವುದು ಪಾಲಿಕೆಗೆ ಮತ್ತಷ್ಟು ಹೊರೆಯಾಗಲಿದ್ದು, ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿಗೆ 57 ರೂ.ವರೆಗೆ ದರ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಯಿಂದ ದಿನಕ್ಕೆ ಒಂದು ತಿಂಡಿ ಹಾಗೂ ಎರಡು ಊಟಕ್ಕೆ 25 ರೂ. ಸಂಗ್ರಹವಾಗುತ್ತಿದ್ದು, ವ್ಯತ್ಯಾಸ ಮೊತ್ತದ ಪೈಕಿ ಶೇ.70ರಷ್ಟು ಹಣ ಮಹಾನಗರ ಪಾಲಿಕೆಗಳು ತಮ್ಮ ಸ್ವಂತ ಅನುದಾನ ಅಥವಾ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ಪಾವತಿಸಬೇಕು ಹಾಗೂ ಉಳಿದ ಶೇ.30ರಷ್ಟು ಹಣ ಕಾರ್ಮಿಕರ ಇಲಾಖೆ ನೀಡುವುದೆಂದು ಈ ಹಿಂದೆ ತೀರ್ಮಾನಿಸಲಾಗಿತ್ತು.

ಅದರಂತೆ ಬಿಡುಗಡೆಯಾಗಬೇಕಾಗಿರುವ ಶೇ.30ರಷ್ಟು ಹಣ ಎಪ್ರಿಲ್‌ನಿಂದ ಸಂದಾಯವಾಗಿಲ್ಲ. ಕ್ಯಾಂಟೀನ್‌ಗಳ ನಿರ್ವಹಣೆಗೆ ಸಮರ್ಪಕವಾಗಿ ಅನುದಾನ ನೀಡದ ಪರಿಣಾಮ ಪಾಲಿಕೆಗೆ ಹೊರೆ ಬೀಳುತ್ತಿದೆ. ಹಣ ಬಾಕಿ ಇರುವ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ತಿಂಗಳಿಗೆ 10 ಕೋಟಿ ರೂ. ಹಣವನ್ನು ಪಾಲಿಕೆಯ ನಿಧಿಯಿಂದ ಬಳಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News