ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿಗೆ 25 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ ಹೈಕೋರ್ಟ್

Update: 2019-08-02 17:02 GMT

ಬೆಂಗಳೂರು, ಆ.2: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾಗಿದ್ದ ಆರೋಪಿ ಸಲೀಂ(29)ಗೆ ಹೈಕೋರ್ಟ್ 25 ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.

ರಾಮನಗರ 3ನೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆ ಆದೇಶವನ್ನು ಪ್ರಶ್ನಿಸಿ ಸಲೀಂ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಶುಕ್ರವಾರ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿ, 25 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.

2012ರ ಆ.15ರಂದು ತಾವರೆಕೆರೆಯ ಜನತಾ ಕಾಲನಿಯಲ್ಲಿ 5 ವರ್ಷದ ಬಾಲಕಿ ಹೀನಾ ಕೌಸರ್‌ನನ್ನು ಬೀಡಿ ತರಲು ಅಂಗಡಿಗೆ ಕಳಿಸಿದ್ದಾಗ ನೆರೆಮನೆಯ ಸಲೀಂ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ 23ಕ್ಕೂ ಹೆಚ್ಚು ಮಂದಿ ಆರೋಪಿ ವಿರುದ್ಧ ಸಾಕ್ಷ್ಯ ನುಡಿದಿದ್ದರು. ವಿಧಿ ವಿಜ್ಞಾನ ವರದಿ ಕೂಡ ಕೃತ್ಯವನ್ನು ಆರೋಪವನ್ನು ಸಾಬೀತು ಪಡಿಸುವಂತಿತ್ತು. ಅತ್ಯಾಚಾರ ಅಪರಾಧಕ್ಕೆ 10 ವರ್ಷ ಕಾರಾಗೃಹ ಶಿಕ್ಷೆ, 50 ಸಾವಿರ ರೂ.ದಂಡ ಹಾಗೂ ಬಾಲಕಿಯನ್ನು ಕೊಲೆ ಮಾಡಿದ್ದಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಸಲೀಂ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ. ನ್ಯಾಯಪೀಠವು ಆರೋಪಿಗೆ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿ, 25 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ಸರಕಾರದ ಪರವಾಗಿ ಎಸ್‌ಪಿಪಿ ಚಂದ್ರವೌಳಿ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News