ಪುತ್ತೂರು: ಹಾವು ಹಿಡಿಯುವುದರಲ್ಲಿ ಚತುರ ಈ ಹದಿನೆಂಟರ ಯುವಕ
ಪುತ್ತೂರು, ಆ.2: ಹಾವುಗಳನ್ನು ಕಂಡರೆ ಸಾಮಾನ್ಯವಾಗಿ ಎಲ್ಲರೂ ಹೆದರುತ್ತಾರೆ. ಆದರೆ ಈ ಹುಡುಗ ಹಾವುಗಳನ್ನು ಯಾವುದೇ ಭಯವಿಲ್ಲದೆ ಹಿಡಿದು ಕಾಡಿಗೆ ಬಿಟ್ಟು ಬರುತ್ತಾನೆ. ಜನರ ಭಯವನ್ನು ದೂರ ಮಾಡುತ್ತಾನೆ. 18ನೇ ವರ್ಷಕ್ಕೆ ಈಗಾಗಲೇ ಕಾಲಿಡುತ್ತಿರುವ ಈ ಯುವಕ ಹಾವು ಹಿಡಿಯುವುದರಲ್ಲಿ ಚತುರ. ಈತನ ಹೆಸರು ಮುಹಮ್ಮದ್ ಫಾಯಿಝ್
ಪುತ್ತೂರು, ಸಾಮೆತ್ತಡ್ಕ ನಿವಾಸಿ ಟೆಂಪೊ ಚಾಲಕ ಶಬೀರ್ ಮತ್ತು ಹಲೀಮಾಬಿ ದಂಪತಿಯ ಪುತ್ರ ಮುಹಮ್ಮದ್ ಫಾಯಿಝ್ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಹಾವಿನ ಬಗ್ಗೆ ಕುತೂಹಲ ಬೆಳೆಸಿಕೊಂಡು ಬಂದಿದ್ದಾನೆ. ಈ ತನಕ ಸುಮಾರು 150ಕ್ಕೂ ಅಧಿಕ ವಿಷಪೂರಿತ ಹಾಗೂ ವಿಷರಹಿತ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾನೆ. ಹಾವು ಮನೆಗೆ ಅಥವಾ ವಠಾರಕ್ಕೆ ಬಂದಾಗ ಯಾರಾದರೂ ಈತನಿಗೆ ಫೋನ್ ಮಾಡಿದರೆ ತಕ್ಷಣ ತೆರಳಿ ಹಾವನ್ನು ಹಿಡಿದು ಅಪಾಯ ರಹಿತ ಸ್ಥಳದಲ್ಲಿ ಬಿಟ್ಟು ಬರುತ್ತಾನೆ.
ಪ್ರಾಥಮಿಕ ಶಾಲೆಯಲ್ಲಿಯೇ ಹಾವಿನ ಬಗ್ಗೆ ಕುತೂಹಲ:
ಫಾಯಿಝ್, ಸಾಮೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆ ಶಾಲೆಗೆ ಹಾವು ಬಂದಿತ್ತು. ಹಾವನ್ನು ಹಿಡಿಯಲು ಪುತ್ತೂರಿನ ಉರಗ ತಜ್ಞ ರವೀಂದ್ರನಾಥ ಐತಾಳ್‌ರನ್ನು ಕರೆಸಿದ್ದರು. ನನ್ನ ಸಹಪಾಠಿಗಳು ಹೆದರಿದ್ದರೆ ಆಗಲೇ ನಾನು ಈ ಹಾವನ್ನು ಓಡಿಸಲು ಪ್ರಯತ್ನ ನಡೆಸಿದ್ದೆ. ರವೀದ್ರನಾಥ ಐತಾಳರು ಬಂದು ಹಾವನ್ನು ಹಿಡಿದರು. ಬಳಿಕ ಅದನ್ನು ಮುಟ್ಟಲು ಹೇಳಿದರು. ಎಲ್ಲರೂ ಹೆದರಿದ್ದರೂ ನಾನು ಧೈರ್ಯವಾಗಿ ಮುಂದೆ ಬಂದಾಗ ನನ್ನ ಕೈಯಲ್ಲಿ ಕೊಟ್ಟರು. ಮತ್ತು ನಮಗೆ ಹಾವುಗಳ ಬಗ್ಗೆ ಮಾಹಿತಿ ಕೊಟ್ಟರು. ಹಾವುಗಳ ಬಗ್ಗೆ ಧೈರ್ಯ ಮತ್ತು ಆಸಕ್ತಿಗೆ ಅವರೇ ನನಗೆ ಮೊದಲ ಗುರುಗಳು. ಇದೀಗ ಯೂಟ್ಯೂಬ್ ಸಾಮಾಜಿಕ ಜಾಲತಾಣದ ಮೂಲಕ ಹಲವು ವೀಡಿಯೊಗಳನ್ನು ನೋಡಿ ಹಾವು ಹಿಡಿಯುವ ತಂತ್ರಗಳ ಬಗ್ಗೆ ಕಲಿತುಕೊಂಡಿದ್ದೇನೆ. ಕಳೆದ ಒಂದೂವರೆ ವರ್ಷಗಳಿಂದ ನಿರಂತರ ಹಾವು ಹಿಡಿಯುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಾವುಗಳು ಹಸಿವಾದಾಗ ಆಹಾರ ಹುಡುಕಿಕೊಂಡು ಮನೆಗಳಿಗೆ ಅಥವಾ ವಠಾರಗಳಿಗೆ ಬರುತ್ತದೆ. ಅದರ ಹಸಿವು ತಿಳಿಯದ ನಾವು ಅದಕ್ಕೆ ಹೊಡೆದು, ಬಡಿದು ನೋವು ನೀಡಲು ಮುಂದಾಗುತ್ತೇವೆ. ಹಾವುಗಳು ಯಾರಿಗೂ ಸುಮ್ಮನೆ ಕಚ್ಚುವುದಿಲ್ಲ. ಅದಕ್ಕೆ ನೋವಾದಾಗ ಆಥವಾ ಭಯ ಆದಾಗ ಕಚ್ಚುತ್ತದೆ. ಯಾರೂ ಹಾವಿಗೆ ಹೆದರಬೇಕಾ ಗಿಲ್ಲ. ನಾವು ಹೆದರಿದರೆ ಅದೂ ಹೆದರುತ್ತದೆ. ನಾವು ಪ್ರೀತಿಸಿದರೆ ಅದರಿಂದ ಯಾವುದೇ ಅಪಾಯವಿಲ್ಲ ಎನ್ನುತ್ತಾನೆ ಪಾಯಿಝ್. ಈತನಕ ಸುಮಾರು 150ಕ್ಕೂ ಅಧಿಕ ಅಂದರೆ ವಿಷಕಾರಿ ಹಾವುಗಳಾದ ನಾಗರಹಾವು, ಕಟ್ಟ ಪಲಕ್ಕರಿ, ಕೊಳಕು ಮಂಡಲ, ಮರಹಾವು, ವಿಷ ರಹಿತ ಹಾವುಗಳಾದ ಕೇರೆ, ಹೆಬ್ಬಾವು, ಪಗೆಲ ಮುಂತಾದ ಹಾವುಗಳನ್ನು ಹಿಡಿದಿದ್ದೇನೆ. ವಿಷರಹಿತ ಹಾವುಗಳನ್ನು ಹಿಡಿದರೆ ಪುತ್ತೂರಿನ ನರಿಮೊಗರು ಕಾಡಿನಲ್ಲಿ ಬಿಡುತ್ತೇನೆ. ವಿಷಕಾರಕ ಹಾವುಗಳನ್ನು ಸುಬ್ರಹ್ಮಣ್ಯ ರಕ್ಷಿತಾರಣ್ಯದಲ್ಲಿ ಬಿಟ್ಟು ಬರುತ್ತೇನೆ ಎನ್ನುತ್ತಾನೆ. ವಿಟ್ಲದಲ್ಲಿ ಒಂದು ಬಾರಿ ನಾಗರ ಹಾವಿನ ಕಡಿತಕ್ಕೆ ಒಳಗಾಗಿದ್ದೆ. ಈ ಹಾವಿಗೆ ಹೆದರಿದ್ದ ಮನೆ ಮಂದಿ ನಾನು ಅಲ್ಲಿಗೆ ಹೋಗುವ ಮೊದಲೇ ಕೋಪ ಬರಿಸಿದ್ದರು. ಇದರಿಂದಾಗಿ ಹಾವು ನನಗೆ ಕಡಿದಿತ್ತು. ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಮಾಡಿ ಹಾವನ್ನು ಹಿಡಿದುಕೊಂಡು ಬಂದಿದ್ದೆ. ಬಳಿಕ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಮತ್ತು ಗ್ಲುಕೋಸ್ ಪಡೆದುಕೊಂಡಿದ್ದೆ. ಹಾವು ಕಡಿದ ಗಾಯ ಈಗಲೂ ಕಾಲಿನಲ್ಲಿದೆ. ಕರೆದಾಗ ಪುತ್ತೂರು ಮಾತ್ರವಲ್ಲದೆ ವಿಟ್ಲ, ಕಡಬಗಳಿಗೂ ಹೋಗಿ ಹಾವು ಹಿಡಿಯುವ ಕೆಲಸ ಮಾಡಿದ್ದೇನೆ.
ಹಾವು ಹಿಡಿಯುವ ಬಗ್ಗೆ ಪೂರ್ಣ ಅರಿವು ಬೇಕು:
ಹಾವುಗಳನ್ನು ಹಿಡಿಯುವುದು ಸುಲಭದ ಕೆಲಸವಲ್ಲ. ಈ ಬಗ್ಗೆ ಪೂರ್ಣ ಅರಿವು ಅಗತ್ಯವಿದೆ. ಈಗಾಗಲೇ ನಾನು ಸುಮಾರು ಶೇ.60 ಅರಿವು ಪಡೆದುಕೊಂಡಿದ್ದೇನೆ. ಇನ್ನೂ ತಿಳಿಯಬೇಕಾಗಿರುವುದು ಸಾಕಷ್ಟಿದೆ. ಮೊದಲಿಗೆ ತಂದೆ-ತಾಯಿಯ ಒಪ್ಪಿಗೆ ಇರಲಿಲ್ಲ. ಇದೀಗ ಅವರ ಪ್ರೋತ್ಸಾಹ ತುಂಬಾ ಇದೆ. ನನ್ನ ಕುಟುಂಬಸ್ಥರು, ಸ್ನೇಹಿತರು ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾನೆ.
ವೃತ್ತಿಯಲ್ಲಿ ಪೈಂಟರ್:
ದ್ವಿತೀಯ ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿರುವ ಪಾಯಿಝ್ ಬಳಿಕ ಶಿಕ್ಷಣವನ್ನು ಸ್ಥಗಿತಗೊಳಿಸಿ ಪೈಂಟಿಂಗ್ ಮತ್ತು ಫ್ಯಾಬ್ರಿಕೇಶನ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆೆ. ಹಾವು ಹಿಡಿಯುವುದು ನನ್ನ ವೃತ್ತಿಯಲ್ಲ ಹವ್ಯಾಸವಾಗಿ ಬೆಳೆಸಿಕೊಳ್ಳುತ್ತೇನೆ. ಹಾವುಗಳ ಬಗ್ಗೆ ಜನರು ಭಯ ಪಡದಿರುವಂತೆ ಹಾಗೂ ಅವುಗಳಿಗೆ ನೋವು ಮಾಡದಂತೆ ಜನರಿಗೆ ತಿಳಿಸುವ ಕೆಲಸವನ್ನೂ ಮಾಡುತ್ತೇನೆ. ಯಾರು ಕರೆದರೂ ಅಲ್ಲಿಗೆ ಹೋಗಿ ಹಾವುಗಳನ್ನು ಹಿಡಿದು ಅವುಗಳಿಗೆ ಅಪಾಯಕಾರಿಯಲ್ಲದ ಜಾಗದಲ್ಲಿ ಬಿಟ್ಟು ಬರುತ್ತೇನೆ. ಕೆಲವೊಮ್ಮೆ ಈ ನಡುವೆ ಅವುಗಳಿಗೆ ಬೇಕಾದ ಆಹಾರವನ್ನೂ ಒದಗಿಸುತ್ತೇನೆ ಎನ್ನುತಾನೆ.
ಮುಹಮ್ಮದ್ ಫಾಝಿಲ್ ಮೊ.ಸಂ.: 9148521275.
ಮುಹಮ್ಮದ್ ಫಾಯಿಝ್ ನನ್ನ ಬಾಲ್ಯದ ಸ್ನೇಹಿತ. ಹಾವುಗಳ ಬಗ್ಗೆ ಆತನಿಗೆ ಇರುವ ಆಸಕ್ತಿಯ ಬಗ್ಗೆ ಹೆಮ್ಮೆಯಿದೆ. ಮನೆಗಳಿಗೆ ಹಾವು ಬಂದಾಗ ಅಲ್ಲಿಗೆ ಹೋಗಿ ಹಾವುಗಳನ್ನು ಹಿಡಿದು ಹೆದರಿರುವ ಮನೆ ಮಂದಿಗಳಿಗೆ ಧೈರ್ಯ ತುಂಬುವ ಉತ್ತಮ ಕೆಲಸವನ್ನು ಫಾಯಿಝ್ ಮಾಡುತ್ತಾನೆ. ನಾನು ಹಲವು ಕಡೆಗಳಿಗೆ ಈತನೊಂದಿಗೆ ಹೋಗಿ ಹಾವುಗಳಿಗೆ ಯಾವುದೇ ನೋವಾಗದಂತೆ ಹಿಡಿಯುವ ಈತನ ಚಾಕಚಕ್ಯತೆಯನ್ನು ಗಮನಿಸಿದ್ದೇನೆ.
ಶಾಹಿಲ್ ದರ್ಬೆ,
ಫಾಯಿಝ್‌ನ ಮಿತ್ರ.