ಜನಪರ ಜಯಚಾಮರಾಜೇಂದ್ರ ಒಡೆಯರ್ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ: ಡಾ.ಪ್ರಧಾನ ಗುರುದತ್

Update: 2019-08-03 13:26 GMT

ಬೆಂಗಳೂರು, ಆ.3: ಜನಪರ ಕೆಲಸದ ಜೊತೆಗೆ ಸಾಹಿತ್ಯ, ತತ್ವಶಾಸ್ತ್ರ, ಕಲೆಗೆ ಅಪಾರ ಸೇವೆ ಸಲ್ಲಿಸಿದ್ದ ಮೈಸೂರು ಸಂಸ್ಥಾನದ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರ್ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲದಿರುವುದು ದುರದೃಷ್ಟಕರವೆಂದು ಹಿರಿಯ ವಿದ್ವಾಂಸ ಡಾ.ಪ್ರಧಾನ ಗುರುದತ್ ವಿಷಾದಿಸಿದರು.

ಶನಿವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ, ಜಯಚಾಮರಾಜೇಂದ್ರ ಒಡೆಯರ್ಜನ್ಮಶತಾಬ್ದಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಅವರು ಮಾತನಾಡಿದರು.

ಜಯಚಾಮರಾಜೇಂದ್ರ ಒಡೆಯರ್ ಮೈಸೂರು ಸಂಸ್ಥಾನದಲ್ಲಿ ಹತ್ತು ಹಲವು ಜನಪರ ಕೆಲಸ ಮಾಡಿದ್ದರು. ಅವರಿಗೆ ಜನರೊಂದಿಗೆ ಅನ್ಯೋನ್ಯ ಸಂಬಂಧ ಇತ್ತು. ಜನ ಸಮುದಾಯದ ಆರೋಗ್ಯ, ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ಧಿಯ ಕುರಿತು ತಮ್ಮದೇ ಆದ ದೃಷ್ಟಿಕೋನ ಹೊಂದಿದ್ದರು. ಹೀಗಾಗಿ ಹತ್ತಾರು ಕಾಲೇಜು, ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ ಎಂದು ಅವರು ಸ್ಮರಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಸಂಸ್ಕೃತದಲ್ಲಿ 94 ಸಂಗೀತ ಕೃತಿ ರಚಿಸಿದ್ದರು. ಅವರಿಗೆ ಪಾಶ್ಚಾತ್ಯ ಸಂಗೀತದಲ್ಲೂ ಅಪಾರ ಆಸಕ್ತಿಯಿತ್ತು. ದಸರಾ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ನಾಡಿನ ಹಿರಿಯ ವಿದ್ವಾಂಸರನ್ನು ಕರೆದು ಸಂಗೀತ ಕಚೇರಿಯನ್ನು ಆಯೋಜಿಸುತ್ತಿದ್ದರು. ಹಾಗೂ ಸಂಗೀತ ಕಲಿಯುವವರಿಗೆ ವಿಶೇಷ ಆದ್ಯತೆ ನೀಡುತ್ತಿದ್ದರು ಎಂದು ಅವರು ಹೇಳಿದರು.

ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿದ ಮೈಸೂರು ಸಂಸ್ಥಾನದ ಮೊದಲ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಎಂಬುದು ವಿಶೇಷವಾಗಿದೆ. ಬಿಎ ಪದವಿಯಲ್ಲಿ ಮೊದಲ ರ್ಯಾಂಕ್‌ನಲ್ಲಿ ತೇರ್ಗಡೆ ಹೊಂದುವ ಮೂಲಕ ಶಿಕ್ಷಣದ ಮಹತ್ವವನ್ನು ಅರಿತಿದ್ದರು. ಹಾಗೂ ರಾಜ್ಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಕಾಲೇಜುಗಳನ್ನು ಸ್ಥಾಪಿಸಿದ್ದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜನಾಗಿದ್ದರೂ ಜನ ಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬೆರೆಯುತ್ತಿದ್ದರು. ಹೃದಯಸ್ಪರ್ಶಿ ಅರಸನಾಗಿ ಕೊನೆವರೆಗೂ ಬಾಳಿದರು. ಅಂತಃಕರಣದ ವ್ಯಕ್ತಿತ್ವದ ಅವರು ಪ್ರಜಾಮುಖಿ ಆಡಳಿತ ನಡೆಸಿದರು. ಸಿಂಹಾಸನ ತೊರೆದು ಪ್ರಜೆಗಳ ಹೃದಯ ಸಿಂಹಾಸನವೇರಿದರು ಎಂದು ಅವರು ನುಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ಜಯಚಾಮರಾಜೇಂದ್ರ ಒಡೆಯರ್ ಸದಾ ಜನಪರವಾಗಿ ಚಿಂತಿಸಿದವರು. ಅವರ ಚಿಂತನೆಯ ಫಲವಾಗಿ ಹತ್ತು ಹಲವು ಕಾಲೇಜು, ಆಸ್ಪತ್ರೆಗಳು ಬೆಳಕು ಕಂಡವು. ಅವರ ಆದರ್ಶಗಳು ಜನಪ್ರತಿನಿಧಿಗಳಿಗೆ ಮಾದರಿಯೆಂದು ತಿಳಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಆಡಳಿತಾವಧಿಯಲ್ಲಿ ಹಾಸನ, ಅರಸೀಕೆರೆ, ಮಂಡ್ಯ, ತುಮಕೂರು, ಶಿವಮೊಗ್ಗದಲ್ಲಿ ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆದರು. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರನ್ನು ನೇಮಿಸಿದ್ದು, ತಾಲೂಕು ಕೇಂದ್ರಗಳಲ್ಲಿ ಹೆಚ್ಚಿನ ಪ್ರೌಢಶಾಲೆಗಳನ್ನು ತೆರೆದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ನೂರಾರು ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ ಕೀರ್ತಿ ಅವರದ್ದಾಗಿದೆ.

-ಡಾ.ಪ್ರಧಾನ ಗುರುದತ್, ಹಿರಿಯ ವಿದ್ವಾಂಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News