ಪಂಚೇಂದ್ರಿಯಗಳು ಹತೋಟಿಯಲ್ಲಿರದಿದ್ದರೆ ರೋಗ ಖಚಿತ: ಡಾ.ವಿರೇಂದ್ರ ಹೆಗಡೆ

Update: 2019-08-03 16:52 GMT

ಬೆಂಗಳೂರು, ಆ.3: ಪಂಚೇಂದ್ರಿಯಗಳು ಹತೋಟಿಯಲ್ಲಿರದಿದ್ದರೆ ಹಾಗೂ ಆಸೆ ಪೂರೈಸಿಕೊಳ್ಳುವುದಕ್ಕಾಗಿ ವಾಮ ಮಾರ್ಗ ಅನುಸರಿಸಿದರೆ ರೋಗಗಳು ಕಟ್ಟಿಟ್ಟಬುತ್ತಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ತಿಳಿಸಿದ್ದಾರೆ.

ಶನಿವಾರ ರಾಜೀವ್‌ಗಾಂಧಿ ಆರೋಗ್ಯ ವಿವಿಯಲ್ಲಿ ಏರ್ಪಡಿಸಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಮನಸ್ಸು-ದೇಹಕ್ಕೆ ವಿಶ್ರಾಂತಿ ಇಲ್ಲದೆ ದುಡಿಯುವ ಮನಃಸ್ಥಿತಿ ಆರಂಭವಾಗಿದೆ. ಧಾರ್ಮಿಕ ಆಚರಣೆಗಳು ಕಡೆಗಣಿಸಲ್ಪಡುತ್ತಿದೆ ಎಂದು ವಿಷಾದಿಸಿದರು.

ಕಾಲ, ಸಂದರ್ಭ ಯಾವುದೇ ಇರಲಿ ಶರೀರವನ್ನು ಬಳಸಿಕೊಳ್ಳುವಲ್ಲಿ ಸಂಸ್ಕಾರವಿರಬೇಕು. ಆಧುನಿಕ ಜೀವನಶೈಲಿ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಬದುಕಲು ಆಯ್ದುಕೊಳ್ಳುವ ಮಾರ್ಗಗಳು ಸರಿಯಾಗಿರಬೇಕು. ಇದಕ್ಕಾಗಿ ನಾವು ಕಲಿತ ವಿದ್ಯೆ ಹಾಗೂ ನಮ್ಮಲ್ಲಿರುವ ಬುದ್ಧಿಯನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಅವರು ಹೇಳಿದರು.

ಯಾವುದೇ ವೈದ್ಯ ಪದ್ಧತಿ, ಧಾರ್ಮಿಕ ಆಚರಣೆ ಇರಲಿ ನಂಬಿಕೆಯನ್ನಾಧರಿಸಿದೆ. ಧರ್ಮದ ಮೇಲಿನ ನಂಬಿಕೆ ಅನಾರೋಗ್ಯಕ್ಕೆ ಔಷಧಿಯಾಗಬಲ್ಲದು ಎಂದ ಅವರು, ಎಲ್ಲ ಧರ್ಮಗಳಲ್ಲಿ ವ್ಯಕ್ತಿಗಳು ವೈಯಕ್ತಿಕ ಶುದ್ಧತೆ ಕಾಯ್ದುಕೊಳ್ಳಬೇಕು. ಧರ್ಮದ ನಿಯಮಗಳ ಬಳಕೆಗೆ ದೇಹವನ್ನು ಸಾಧನವನ್ನಾಗಿ ಬಳಸಿಕೊಳ್ಳಬೇಕು. ಅಂದಾಗ ಮಾತ್ರ ದೇಹದ ಎಲ್ಲ ನಡವಳಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವೆಂದು ಅವರು ಹೇಳಿದರು.

ವೇದಿಕೆಯಲ್ಲಿ ಕರ್ನಾಟಕ ಹೋಮಿಯೋಪತಿ ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್, ರಾಜೀವ್‌ಗಾಂಧಿ ವಿವಿ ಕುಲಪತಿ ಡಾ.ಎನ್.ಸಚ್ಚಿದಾನಂದ, ಕುಲ ಸಚಿವ ಶಿವಾನಂದ ರಾವತಿ ಮತ್ತಿತರರಿದ್ದರು.

ದೇಶದಲ್ಲಿ 240 ಹೋಮಿಯೋಪತಿ ವೈದ್ಯ ಕಾಲೇಜುಗಳಿವೆ. 30 ಲಕ್ಷ ಹೋಮಿಯೋಪತಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸರಕಾರದ 2020ರ ವ್ಯಕ್ತಿ ನಿರ್ಮಾಣ ಕಾರ್ಯ, ಆರೋಗ್ಯ ಭಾಗ್ಯ ಯೋಜನೆಗಳಲ್ಲಿ ಹೋಮಿಯೋಪತಿ ಹೊರತುಪಡಿಸಿದರೆ ಯಶಸ್ವಿಯಾಗುವುದಿಲ್ಲ. ಎಲ್ಲ ಕಾಯಿಲೆಗಳಿಗೂ ಔಷಧಿಯೊಂದೇ ಪರಿಹಾರವಲ್ಲ.

-ಡಾ.ಬಿ.ಟಿ.ರುದ್ರೇಶ್, ಅಧ್ಯಕ್ಷ, ಕರ್ನಾಟಕ ಹೋಮಿಯೋಪತಿ ಮಂಡಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News