ನವಜಾತ ಹೆಣ್ಣು ಮಗುವಿನ ಕೊಲೆ ಪ್ರಕರಣ: ತಾಯಿ ಬಂಧನ

Update: 2019-08-04 18:09 GMT

ಬೆಂಗಳೂರು, ಆ.4: ನವಜಾತ ಹೆಣ್ಣು ಮಗುವನ್ನು ಕೊಲೆಗೈದ ಪ್ರಕರಣ ಸಂಬಂಧ ಮಗುವಿನ ತಾಯಿಯನ್ನು ಇಲ್ಲಿನ ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಜಗೋಪಾಲನಗರ ನಿವಾಸಿ ಪವಿತ್ರಾ (28) ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.

ಕುಣಿಗಲ್‌ನ ದಿನೇಶ್‌ನನ್ನು ವಿವಾಹವಾಗಿದ್ದ ಪವಿತ್ರಾ ಅವರಿಗೆ ಕಳೆದ ತಿಂಗಳು ಹೆಣ್ಣು ಮಗು ಜನಿಸಿತ್ತು. ಬಾಣಂತಿಯಾಗಿದ್ದ ಈಕೆ 21 ದಿನದ ಶಿಶುನೊಂದಿಗೆ ರಾಜಗೋಪಾಲನಗರದಲ್ಲಿರುವ ತವರು ಮನೆಯಲ್ಲಿದ್ದಳು. ಶಿಶು ಬಹು ಅಂಗಾಂಗ ವೈಫಲ್ಯ, ಉಸಿರಾಟ ಸಮಸ್ಯೆ ಹಾಗೂ ಇನ್ನಿತರ ಅನಾರೋಗ್ಯದಿಂದ ಬಳಲುತ್ತಿತ್ತು. ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ಸರಿ ಹೋಗಿರಲಿಲ್ಲ ಎನ್ನಲಾಗಿದೆ.

ಇದರಿಂದ ಬೇಸತ್ತ ತಾಯಿ ಪವಿತ್ರಾ ಜು.30ರಂದು ಮನೆಯಲ್ಲಿಯೇ ಶಿಶುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ತದನಂತರ, ಮಗುವಿಗೆ ಉಸಿರಾಟದ ತೊಂದರೆ ಹಾಗೂ ವಾಂತಿಯಾಗುತ್ತಿದೆ ಎಂಬ ನೆಪದಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಳು. ಈ ವೇಳೆ ತಪಾಸಣೆ ನಡೆಸಿದ್ದ ವೈದ್ಯರು, ಮಗು ಮಾರ್ಗಮಧ್ಯೆ ಮೃತಪಟ್ಟಿದೆ ಎಂಬುದನ್ನು ಖಚಿತಪಡಿಸಿದ್ದರು.

ಮಗು ಮೃತಪಟ್ಟಿರುವ ವಿಚಾರವನ್ನು ಪವಿತ್ರಾ ಪತಿಗೆ ತಿಳಿಸಿದ್ದಳು. ಆಸ್ಪತ್ರೆಗೆ ಆಗಮಿಸಿದ್ದ ದಿನೇಶ್ ಮಗು ಮೃತಪಟ್ಟಿರುವ ಬಗ್ಗೆ ವೈದ್ಯರನ್ನು ವಿಚಾರಿಸಿದ್ದರು. ಈ ವೇಳೆ ವೈದ್ಯರ ಮೇಲೆ ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಳ್ಳುವಂತೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆಸ್ಪತ್ರೆಗೆ ತೆರಳಿ ಮೃತ ಮಗುವನ್ನು ಮಹಜರು ಮಾಡಿ, ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಮಗುವಿನ ಕುತ್ತಿಗೆಗೆ ಬಿಗಿಯಾದ ವಸ್ತುನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದನ್ನು ವೈದ್ಯರು ದೃಢಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಹಸುಗೂಸನ್ನು ಹತ್ಯೆ ಮಾಡಿ ಸತ್ಯ ಮರೆಮಾಚಿದ್ದ ತಾಯಿ ಪವಿತ್ರಾ ಅನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News