ಬಾಯಿಗೆ ರುಚಿ, ದೇಹಕ್ಕೆ ಹಿತ ನೀಡುವ ಅಣಬೆಗೆ ಮಾರು ಹೋಗುವ ಭಟ್ಕಲಿ ನವಾಯತರು

Update: 2019-08-05 17:19 GMT

ಭಟ್ಕಳ: ಬಾಯಿಗೆ ರುಚಿ ದೇಹಕ್ಕೆ ಹಿತ ನೀಡುವ ಅಣಬೆ ಭರಪೂರ ಪೋಷಕಾಂಶಗಳನ್ನು ಹೊಂದಿದ್ದು ಮಳೆಗಾಲದಲ್ಲಿ ಆರಂಭದಲ್ಲಿ ಕಾಡಿನ ಮದ್ಯೆ ಹುತ್ತಗಳ ಒಡಲಲ್ಲಿ ಬೆಳೆಯುವ ಅಪರೂಪದ ಬೆಳೆಯಾಗಿದ್ದು ಗ್ರಾಮೀಣರಿಗೆ ಭರಪೂರ ಆದಾಯ ತಂದುಕೊಡುತ್ತದೆ.

ಉ.ಕ. ಜಿಲ್ಲೆಯ ಗ್ರಾಮೀಣ ಭಾಗದ ಪ್ರಕೃತಿ ಮಡಿಲಲ್ಲಿ ಹೊಲ, ಗದ್ದೆ, ಹುತ್ತಗಳಡಿ ಬೆಳೆಯುವ ಈ ಅಣಬೆಗಳು ತಮ್ಮೊಳಗೆ ಯಥೇಚ್ಛವಾಗಿ ಪ್ರೋಟಿನ್, ವಿಟಮಿನ್, ಖನಿಜಾಂಶ, ಅಮೈನೋ ಆಮ್ಲ ಮತ್ತು ಆ್ಯಂಟಿ ಅಕ್ಸಿಡೆಂಟ್‍ಗಳನ್ನು ಹುದುಗಿಸಿಕೊಂಡಿರುತ್ತವೆ. ಭಟ್ಕಳದಲ್ಲಿ ಅತಿ ಹೆಚ್ಚು ಹೆಚ್ಚು ಮಾರಾಟವಾಗುವ ಹೆಗ್ಗಲಿ (ಅಣಬೆ)ಗಳು ಇಲ್ಲಿನ ನವಾಯತ್ ಮುಸ್ಲಿಮರಿಗೆ ಹೆಚ್ಚು ಇಷ್ಟದ ಭೋಜನವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ತಾಲೂಕಿನ ಗ್ರಾಮೀಣ ಪ್ರದೇಶವಾದ ಹಾಡುವಳ್ಳಿ, ಕೋಣಾರ, ಮಾರುಕೇರಿ. ಶಿರಾಲಿ, ಶಿರಾಣಿ, ಕಟಗಾರಕೊಪ್ಪ ಮುಂತಾದ ಕಡೆಗಳಲ್ಲಿ ಅರಣ್ಯದಲ್ಲಿ ಇರುವ ಹುತ್ತದ ಮೇಲೆ ಇಲ್ಲವೇ ಹುಲುಸಾಗಿ ಇರುವ ಮಣ್ಣು ದಿಣ್ಣೆಯ ಮೇಲೆ ಹೆಗ್ಗಲಿ ಬೆಳೆಯುತ್ತಿದ್ದು, ಎರಡು ತಿಂಗಳುಗಳ ಕಾಲ ಮಾತ್ರ ಇದು ದೊರೆಯುತ್ತದೆ. ಗ್ರಾಮೀಣ ಭಾಗದಲ್ಲಿ ಹಲವರು ಹೆಗ್ಗಲಿ ಮಾರಾಟವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವುದುಂಟು.  ಭಟ್ಕಳದಲ್ಲಿ ಸಿಗಲಿರುವ ಅಣಬೆಗೆ ದುಬೈ ತನಕ ಬೇಡಿಕೆಯಿದ್ದು ಇಲ್ಲಿನ ನವಯಾತ್  ಮುಸ್ಲಿಂರಿಗೆ ಇದು ಫೇವರೇಟ್ ಆಗಿದೆ.

ಮಳೆಗಾಲ ಆರಂಭದಲ್ಲಿಯೇ ಕಾಡಿನಲ್ಲಿ ಬೆಳೆಯುವ ಹೆಗ್ಗಲಿ (ಅಣಬೆ)ಗಳನ್ನು ಗ್ರಾಮೀಣ ಭಾಗದ ಜನರು ಬೆಳಗಿನ ಜಾವವೇ ಕಾಡಿಗೆ ಹೋಗಿ ಕಾಡಿನಲ್ಲಿ ಹುತ್ತಗಳಲ್ಲಿ ಹಾಗೂ ಅತ್ಯಂತ ಹುಲುಸಾಗಿರುವ ಪ್ರದೇಶದಲ್ಲಿ ಬೆಳೆದಿರುವ ಅಣಬೆಗಳನ್ನು ಕಿತ್ತು ತರುತ್ತಾರೆ. ಭಟ್ಕಳ ಪೇಟೆಗೆ ಬಂದರೆ ಅಣಬೆಗೆ ಎಲ್ಲಿಲ್ಲದ ಡಿಮಾಂಡ್ ! ಪ್ರತಿ ವರ್ಷವೂ ಹಳೆ ಬಸ್ ನಿಲ್ದಾಣದ ತಹಶೀಲ್ದಾರ ಕಚೇರಿ ಪಕ್ಕದ ರಸ್ತೆಯಲ್ಲಿ ಮಹಿಳೆ ಪುರುಷರೆನ್ನದೇ ಅಣಬೆ ವ್ಯಾಪಾರ ಮಾಡುತ್ತಿದ್ದು, ಕಳೆದ ಬಾರಿ ಅರಣ್ಯ ಇಲಾಖೆಯಿಂದ ಕೆಲವು ಗೊಂದಲದ ನಿರ್ಧಾರದಿಂದಾಗಿ ಅಣಬೆ ವ್ಯಾಪಾರಕ್ಕೆ ಅವಕಾಶ ನೀಡದೇ ಸರಿಯಾದ ಕಾಲದಲ್ಲಿ ಗ್ರಾಹಕರಿಗೆ ಅಣಬೆ ಸಿಗದೇ ಇರುವ ಸ್ಥಿತಿ ಎದುರಾಗಿದ್ದು, ಈ ಬಾರಿ ಅದ್ಯಾವುದೇ ಗೊಂದಲವಿಲ್ಲದೇ ವ್ಯಾಪಾರ ನಡೆಯುತ್ತಿರುವದು ಕಂಡು ಬಂದಿದೆ. ನಗರದ ತಾ. ಪಂ ಎದುರುಗಡೆ, ಹಳೇ ಬಸ್ ನಿಲ್ದಾಣದ ಬಳಿ ಗ್ರಾಮೀಣ ಪ್ರದೇಶದ ಜನರು ಹೆಗ್ಗಲಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾರೆ. ಬೆಳಿಗ್ಗೆ ಬಂದರೆ ಒಮ್ಮೊಮ್ಮೆ ಸಂಜೆಯ ತನಕವೂ ವ್ಯಾಪಾರ ನಡೆದೇ ಇರುತ್ತದೆ. 

ಮೊದ ಮೊದಲು ಬರುತ್ತಿದ್ದ ಅಣಬೆಗೆ 100ಕ್ಕೆ 700 ರೂ. ತನಕವಿದ್ದರೆ ಇಂದು ಸ್ವಲ್ಪ ದರ ಕಡಿಮೆಯಾಗಿದ್ದು ಉತ್ತಮ ಜಾತಿಯ ಅಣಬೆಗೆ 500 ರೂ. ಇದ್ದರೆ ಸ್ವಲ್ಪ ಅರಳದೇ ಇರುವ ಅಣಬೆಗೆ 400 ರಿಂದ 500 ರೂ. ಇದೆ. ಇದಕ್ಕೆ ಕಾರಣ ಅನಿವಾಸಿ ಮುಸ್ಲಿಂ ಭಾರತೀಯರು ಭಟ್ಕಳಕ್ಕೆ ಬಂದಿದ್ದು ಅಪರೂಪದ ಹೆಗ್ಗಲಿ ಎಷ್ಠೆ ದರವಿದ್ದರೂ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಗ್ರಾಮೀಣ ಭಾಗದ ತಾಜಾ ಹೆಗ್ಗಲಿಯಿಂದ ಮಾಡಿದ ಪದಾರ್ಥ ಹೆಚ್ಚಿನ ರುಚಿ ನೀಡುತ್ತಿದಾದ್ದರಿಂದ ಇದಕ್ಕೆ ಹೆಚ್ಚು ಹೆಚ್ಚು ಬೇಡಿಕೆಯಿದೆ. ಹೆಗ್ಗಲಿಯಿಂದ ಸಂಬಾರು, ಪಲ್ಯ, ಸುಕ್ಕ, ಚಟ್ನೆ ಮುಂತಾದ ಪದಾರ್ಥಗಳನ್ನು ರುಚಿಕರವಾಗಿ ತಯಾರಿ ಸಬಹುದಾಗಿದೆ ಎನ್ನುವುದು ಗ್ರಾಹಕರ ಅಭಿಪ್ರಾಯವಾಗಿದೆ.

ಅಣಬೆ ಮತ್ತು ಆರೋಗ್ಯ: ರುಚಿಯಲ್ಲಿ ಸಾಟಿಯಿಲ್ಲದ ಅಣಬೆ ಆರೋಗ್ಯಕ್ಕೂ ಕೂಡ ಹಿತ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಅಣಬೆಗಳ ನಿರಂತರ ಸೇವನೆಯಿಂದಾಗಿ ನಿಯಾಸಿನ್, ಸೆಲೆನಿಯಂ ಮತ್ತು ರೈಬೊಫ್ಲಾವಿನನ್ ನಂತಹ ಪೋಷಕಾಂಶಗಳು ದೊರೆಯುತ್ತವೆ. ಜೊತೆಗೆ ಇವು ಪೊಟಾಶಿಯಂ ಮತ್ತು ವಿಟಮಿನ್ ‘ಡಿ’ಗಳನ್ನು ಭಾರಿ ಪ್ರಮಾಣದಲ್ಲಿ ಹೊಂದಿರುತ್ತವೆ.

ಅಣಬೆಗಳಿಂದ ದೊರೆಯುವ ಆರೋಗ್ಯದ ಪ್ರಯೋಜನಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇವು ತಮ್ಮೊಳಗೆ ಆರೋಗ್ಯಕಾರಿ ಅಂಶಗಳನ್ನು ಹುದುಗಿಸಿಕೊಂಡಿವೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಹಾಗಾಗಿ ಇದು ದೇಹಕ್ಕೆ ಅನಾರೋಗ್ಯವನ್ನು ತರುವ ಅಂಶಗಳ ಮೇಲೆ ಹೋರಾಡುತ್ತದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ದೇಹವನ್ನು ಹಲವಾರು ಡಿಸಾರ್ಡರ್‍ಗಳು ಮತ್ತು ಕ್ಯಾನ್ಸರಿನಂತಹ ಮಾರಕ ಕಾಯಿಲೆಗಳಿಂದ ಸಹ ತಡೆಯುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.

Writer - ಎಂ.ಆರ್.ಮಾನ್ವಿ

contributor

Editor - ಎಂ.ಆರ್.ಮಾನ್ವಿ

contributor

Similar News