ಆ.9 ರಂದು ರಾಜ್ಯ ಸಚಿವ ಸಂಪುಟ ರಚನೆ ಸಾಧ್ಯತೆ

Update: 2019-08-06 14:41 GMT

ಬೆಂಗಳೂರು, ಆ.6: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡು ದಿನಗಳ ಹೊಸದಿಲ್ಲಿ ಭೇಟಿ ಕೈಗೊಂಡಿದ್ದು, ಇದೇ ವೇಳೆ ರಾಜ್ಯ ಸಚಿವ ಸಂಪುಟ ರಚನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಬಹುತೇಕ ಆ.9 ರಂದು ನೂತನ ಸಚಿವ ಸಂಪುಟ ರಚನೆಯಾಗುವ ಸಾಧ್ಯತೆಗಳಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಎಸ್.ಸುರೇಶ್ ಕುಮಾರ್, ಉಮೇಶ್ ಕತ್ತಿ, ಬಿ.ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಪಕ್ಷೇತರ ಶಾಸಕ ನಾಗೇಶ್ ಸಂಪುಟ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಯಡಿಯೂರಪ್ಪ ಜು.26 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಜು.29ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ. ಆದರೆ, ಈವರೆಗೆ ಸಚಿವ ಸಂಪುಟ ರಚನೆ ಮಾಡದೇ, ಅಧಿಕಾರಿಗಳೊಂದಿಗೆ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದು ಪ್ರತಿಪಕ್ಷಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಡಿಸಿಎಂ ಸ್ಥಾನಗಳಿಗೆ ಕಡಿವಾಣ?: ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ ಎರಡು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಜಿಸಲು ಒಪ್ಪಿಗೆ ನೀಡಿದ್ದ ಬಿಜೆಪಿ ಹೈಕಮಾಂಡ್, ಇದೀಗ ಮುಖ್ಯಮಂತ್ರಿಗೆ ಪರ್ಯಾಯವಾಗಿ ಬೇರೆ ಶಕ್ತಿ ಕೇಂದ್ರ ಸೃಷ್ಟಿಗೆ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ.

ಹಿರಿಯ ಬಿಜೆಪಿ ಶಾಸಕರು ಸಚಿವ ಸಂಪುಟ ಸೇರುವುದರ ಜೊತೆಗೆ, ಉಪ ಮುಖ್ಯಮಂತ್ರಿಯ ಸ್ಥಾನಮಾನ ಪಡೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಈ ಬಗ್ಗೆ ಯಾವುದೇ ಆಸಕ್ತಿ ಹೊಂದಿರದೆ ಇರುವುದು, ಹಿರಿಯ ಶಾಸಕರ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಮೊದಲ ಹಂತದಲ್ಲಿ 15 ಸಚಿವ ಸ್ಥಾನಗಳನ್ನು ಭರ್ತಿ ಮಾಡಿ, 30 ನಿಗಮ, ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಅನರ್ಹ ಶಾಸಕರಿಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂಕೋರ್ಟ್ ಇತ್ಯರ್ಥಪಡಿಸಿ, ಅನರ್ಹ ಶಾಸಕರ ಪರವಾಗಿ ತೀರ್ಪು ಬಂದರೆ, ಎಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಬಿ.ಸಿ.ಪಾಟೀಲ್‌ಗೆ ಸಚಿವ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News