ಉಡುಪಿ ಜಿಲ್ಲೆಯಲ್ಲಿ 3 ದಿನ ರೆಡ್ ಅಲರ್ಟ್: ಡಿಸಿ ಹೆಪ್ಸಿಬಾ ರಾಣಿ

Update: 2019-08-06 16:11 GMT

ಉಡುಪಿ, ಆ.6: ಕಳೆದ ಎರಡು ಮೂರು ದಿನಗಳಿಂದ ಉಡುಪಿ ಜಿಲ್ಲೆ ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಆ., 7, 8 ಮತ್ತು 9ರಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, 8 ಮತ್ತು 9ರಂದು ಎರಡು ದಿನಗಳ ಕಾಲ ಜಿಲ್ಲೆಯಲ್ಲಿ 20ಸೆ.ಮೀ.ಗಿಂತ ಅಧಿಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. ಈ ಬಗ್ಗೆ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಕೆಲವೊಂದು ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಕಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಅಗತ್ಯ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನೆರೆ ಉಂಟಾಗುವ ತಗ್ಗು ಪ್ರದೇಶಗಳ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡುವ ಜವಾಬ್ದಾರಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಿಕೊಡುವಂತೆ ತಹಶೀಲ್ದಾರ್‌ಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು ಸಂಪರ್ಕ ದಲ್ಲಿದ್ದು, ನೆರೆ, ಕಡಲ್ಕೊರೆತ ಸಹಿತ ಪ್ರಾಕೃತಿಕ ವಿಕೋಪದ ತುರ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದ ಸಲಕರಣೆಗಳನ್ನು ಈಗಾಗಲೇ ಸಿದ್ಧಪಡಿಸಿ ಕೊಂಡು ಇರಿಸಲಾಗಿದೆ. ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಇದ್ದು, ಪ್ರಾಕೃತಿಕ ವಿಕೋಪವನ್ನು ಎದುರಿಸಲು ಸಜ್ಜಾಗಿ ನಿಂತಿದೆ ಎಂದು ಅವರು ಹೇಳಿದರು.

ತಲಾ 10ಲಕ್ಷ ಬಿಡುಗಡೆ: ಮಳೆಯಿಂದ ಉಂಟಾಗುವ ಮನೆ, ಜಾನು ವಾರು ಹಾಗೂ ಜೀವಹಾನಿಗೆ ಸಂಬಂಧಿಸಿ ಪರಿಹಾರ ನೀಡುವ ಬಗ್ಗೆ ಜಿಲ್ಲೆಯ ಏಳು ತಹಶೀಲ್ದಾರ್‌ಗಳಿಗೆ ತಲಾ 10 ಲಕ್ಷ ರೂ. ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಜಿಲ್ಲಾಡಳಿತದಲ್ಲಿ ಯಾವುದೇ ಹಣಕಾಸಿನ ಕೊರತೆ ಇಲ್ಲ. ಮನೆಗಳಿಗೆ ಹಾನಿ ಸಂಭವಿಸಿದ ತಕ್ಷಣ ಅಗತ್ಯ ದಾಖಲೆಗಳೊಂದಿಗೆ ಪರಿಹಾರ ನೀಡುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಈ ಬಾರಿಯ ಮಳೆಯಲ್ಲಿ ಬೈಂದೂರು ಮತ್ತು ಕುಂದಾಪುರ ಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ವಾರಗಳ ಹಿಂದೆ ಸಿಇಓ ಜೊತೆ ಸುಮಾರು 10 ಗ್ರಾಪಂಗಳಿಗೆ ಭೇಟಿ ನೀಡಿ ಮಳೆಹಾನಿ ಕುರಿತು ಪರಿಶೀಲನೆ ಮಾಡಲಾಗಿದೆ ಎಂದರು.

ಎನ್‌ಡಿಆರ್‌ಎಫ್ ಈಗಾಗಲೇ ಸುರತ್ಕಲ್‌ನಲ್ಲಿ ಬೀಡುಬಿಟ್ಟಿದ್ದು, ಯಾವುದೇ ಅಗತ್ಯ ಸಂದರ್ಭದಲ್ಲೂ ಮಾಹಿತಿ ನೀಡಿದರೆ ತಕ್ಷಣವೇ ಅವರು ಧಾವಿಸಿ ಬರಲಿ ದ್ದಾರೆ. ಕಡಲ್ಕೊರೆತ ಸಂಬಂಧ ಕಾಪು ತಾಲೂಕಿನ ಉಚ್ಚಿಲ ಪ್ರದೇಶಗಳಿಗೆ ಭೇಟಿ ನೀಡಲಾಗಿದ್ದು, ಕೆಲವು ಕಡೆಗಳಲ್ಲಿ ಎಡಿಬಿಯಿಂದ ಶಾಶ್ವತ ಪರಿಹಾರ ಕಾಮಗಾರಿ ಗಳು ನಡೆಯುತ್ತಿವೆ. ಸಮಸ್ಯೆಗಳು ಕಂಡುಬಂದಿರುವಲ್ಲಿಗೆ ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಾಂಕ್ರಾಮಿಕ ರೋಗ ಹಾಗೂ ವಿವಿಧ ಕಾಯಿಲೆಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಲಾಗಿದೆ. ಇದಕ್ಕೆ ಬೇಕಾದ ಓಆರ್‌ಎಸ್, ಔಷಧಿ, ಲಸಿಕೆಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧವಾಗಿ ಇರಿಸಿಕೊಳ್ಳಲಾಗಿದೆ. ಇದರ ಜವಬ್ದಾರಿಯನ್ನು ಅಂಗವವಾಡಿ ಹಾಗೂ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ವಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ

ಮಳೆಯ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡ ಲಾಗಿದೆ ಎಂಬುದಾಗಿ ಜಿಲ್ಲಾಡಳಿತದ ಹೆಸರಿನಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಈ ರೀತಿ ಫೋಷಕರು ಹಾಗೂ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಯಾರು ಕೂಡ ಮಾಡಬಾರದು. ರಜೆ ಘೋಷಣೆ ಮಾಡದಿದ್ದರೂ ಕೆಲವು ಕಡೆ ಮಕ್ಕಳು ಶಾಲೆಗೆ ಹೋದ ನಂತರ ರಜೆ ಎಂದು ತಪ್ಪು ಮಾಹಿತಿ ನೀಡಿ, ವಿದ್ಯಾರ್ಥಿಗಳು ವಾಪಾಸ್ಸು ಹೋಗುವಂತೆ ಮಾಡಲಾಗಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಡಿಸಿಯಿಂದ ರಸ್ತೆಗೆ ಬಿದ್ದ ಮರಗಳ ತೆರವು

ಅಜ್ಜರಕಾಡುವಿನಿಂದ ಮಣಿಪಾಲದಲ್ಲಿರುವ ಕಚೇರಿಗೆ ಇಂದು ಬೆಳಗ್ಗೆ ಕಾರಿನಲ್ಲಿ ಹೋಗುತ್ತಿರುವಾಗ ಎರಡು ಕಡೆಗಳಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರಗಳನ್ನು ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತನ್ನ ಚಾಲಕ ಮತ್ತು ಅಂಗರಕ್ಷಕನ ಮೂಲಕ ತೆರವುಗೊಳಿಸುವ ಕಾರ್ಯ ನಡೆಸಿದರು.

ಬನ್ನಂಜೆ ಹಾಗೂ ನಾಯರ್‌ಕೆರೆ ಎಂಬಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗು ತ್ತಿದ್ದ ಮರಗಳನ್ನು ಯಾರು ಕೂಡ ತೆರವುಗೊಳಿಸಲು ಮುಂದಾಗದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ತಕ್ಷಣ ತನ್ನ ಕಾರನ್ನು ನಿಲ್ಲಿಸಿ, ಕಾರು ಚಾಲಕ ಹಾಗೂ ಅಂಗರಕ್ಷಕ ಅವರಿಗೆ ಸೂಚನೆ ನೀಡಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News