ಬಿಬಿಎಂಪಿ ನಾಮ ನಿರ್ದೆಶನ ಸದಸ್ಯರ ನೇಮಕ ರದ್ದು ಪಡಿಸಿದ ಸರಕಾರ

Update: 2019-08-06 18:12 GMT

ಬೆಂಗಳೂರು, ಆ.6: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 20 ಮಂದಿ ನಾಮ ನಿರ್ದೆಶನ ಸದಸ್ಯರ ನೇಮಕವನ್ನು ಬಿಜೆಪಿ ಸರಕಾರ ರದ್ದುಪಡಿಸಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 2016ರ ಮೇ 27 ಹಾಗೂ ಜೂ.10ರಂದು ಈ ಇಪ್ಪತ್ತು ಮಂದಿಯನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ಇವರೆಲ್ಲರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿದ್ದರು. ನಾಮನಿರ್ದೆಶನ ಸದಸ್ಯರು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆಯನ್ನು ನೀಡುವ ಅಧಿಕಾರವನ್ನು ಮಾತ್ರ ಹೊಂದಿದ್ದರು. ಬಿಬಿಎಂಪಿಗೆ ಚುನಾಯಿತರಾಗಿರುವ ಸದಸ್ಯರಂತೆ ಅನುದಾನ ಪಡೆಯಲು ನಿಯಮಾವಳಿಯಲ್ಲಿ ಅವಕಾಶ ಇರಲಿಲ್ಲ.

ಮುಂದಿನ ಸೆಪ್ಟೆಂಬರ್‌ನಲ್ಲಿ ಮೇಯರ್, ಉಪ ಮೇಯರ್ ಚುನಾವಣೆ ನಡೆಯಲಿದ್ದು, ಬಿಜೆಪಿಯು ತನ್ನ ಸಂಖ್ಯಾಬಲ ಆಧರಿಸಿ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ದೃಷ್ಟಿ ಹರಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಆರು ಸದಸ್ಯರು ಅನರ್ಹಗೊಂಡಿರುವುದರಿಂದ ಬಿಜೆಪಿ, ಮೇಯರ್ ಚುನಾವಣೆಯಲ್ಲಿ ಗೆಲ್ಲಲು ತಂತ್ರ ರೂಪಿಸಿದೆ.

ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಪಕ್ಷದ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲು ಬಿಜೆಪಿ ನಾಯಕರು ಯೋಚಿಸಿದ್ದಾರೆ. ಇದರ ಪ್ರಯತ್ನವಾಗಿ ಹಿಂದಿನ ಸರಕಾರದ ಅವಧಿಯಲ್ಲಿ ಮಾಡಲಾಗಿರುವ ನಾಮನಿರ್ದೇಶನ ಸದಸ್ಯರ ನೇಮಕ ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News