ಐಎಂಎ ವಂಚನೆ ಪ್ರಕರಣ; ಮನ್ಸೂರ್ ಖಾನ್ ಫ್ಲ್ಯಾಟ್ ನಲ್ಲಿ 303 ಕೆಜಿ ನಕಲಿ ಚಿನ್ನ ಪತ್ತೆ

Update: 2019-08-08 06:28 GMT

ಬೆಂಗಳೂರು, ಆ.8: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಕೆಜಿಗಟ್ಟಲೆ ನಕಲಿ ಚಿನ್ನದ ಬಿಸ್ಕೆಟ್‌ಗಳನ್ನು ಶೇಖರಿಸಿಕೊಂಡು, ಹೂಡಿಕೆದಾರರಿಗೆ ವಂಚನೆಗೈದಿರುವ ಅಂಶ ಬೆಳಕಿಗೆ ಬಂದಿದೆ.

ಇಲ್ಲಿನ ಶಾಂತಿನಗರದ ಅಲೆಗ್ಸಾಂಡರ್ ರಸ್ತೆಯಲ್ಲಿ ಆರೋಪಿ ಮನ್ಸೂರ್ ಖಾನ್, ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಂದ ಖರೀದಿಸಿದ್ದ ಎನ್ನಲಾದ ಫ್ಲ್ಯಾಟ್‌ಗಳ ಮೇಲೆ ಸಿಟ್ ತನಿಖಾಧಿಕಾರಿಗಳು ದಾಳಿ ನಡೆಸಿದಾಗ, ಬರೋಬ್ಬರಿ 303 ಕೆಜಿ ತೂಕದ 5,880 ನಕಲಿ ಚಿನ್ನದ ಬಿಸ್ಕೆಟ್ ‌ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸ್ವಿಮ್ಮಿಂಗ್ ಪೂಲ್: ಈಗಾಗಲೇ ಸಿಟ್ ತನಿಖಾಧಿಕಾರಿಗಳ ಕಸ್ಟಡಿಯಲ್ಲಿರುವ ಮನ್ಸೂರ್ ಅನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ನಕಲಿ ಚಿನ್ನದ ಬಿಸ್ಕೆಟ್‌ಗಳ ಬಗ್ಗೆ ಮಾಹಿತಿ ನೀಡಿದ್ದ. ಇದರ ಆಧಾರದ ಮೇಲೆ ಅಧಿಕಾರಿಗಳು ಶೋಧ ನಡೆಸಿದಾಗ ತನ್ನ ಒಡೆತನದ ಫ್ಲ್ಯಾಟ್‌ನ ಈಜು ಕೊಳ(ಸ್ವಿಮ್ಮಿಂಗ್‌ಪೂಲ್)ದಲ್ಲಿ ಈ ನಕಲಿ ಚಿನ್ನದ ಬಿಸ್ಕೆಟ್‌ಗಳು ಪತ್ತೆಯಾಗಿವೆ.

1 ಕೋಟಿ ರೂ. ಮೊತ್ತದ ಮೇಲೆ ಹೂಡಿಕೆ ಮಾಡಲು ಮುಂದಾಗುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದ್ದು ಮನ್ಸೂರ್, ಅವರಿಗೆ ನಂಬಿಕೆ   ಮೂಡಿಸಲು ಈ ಫ್ಲ್ಯಾಟ್‌ಗೆ ಕರೆದುಕೊಂಡು ಹೋಗಿ, ನಿಮ್ಮ ಹಣ ನಷ್ಟ ಆಗುವುದಿಲ್ಲ. ಇಷ್ಟು ಮೊತ್ತದ ಚಿನ್ನ ಇದೆ ಎಂದೆಲ್ಲಾ ಹೇಳುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

‘ಜಿಲ್ಲೆಗಳಲ್ಲೂ ಜಪ್ತಿ’

ಐಎಂಎ ವಂಚನೆ ಪ್ರಕರಣ ಸಂಬಂಧ ಬೆಂಗಳೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿ ಐದು ಜಿಲ್ಲೆಗಳಲ್ಲಿ 23 ಆಸ್ತಿಗಳನ್ನು ಪತ್ತೆ ಮಾಡಲಾಗಿದ್ದು, ಇದರ ಮೌಲ್ಯ 300 ಕೋಟಿ ರೂ.ಇದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News