ಹಾಜಿ ಅಬ್ದುಲ್ಲಾರ ಆದರ್ಶವನ್ನು ಮುಂದುವರಿಸಬೇಕಾಗಿದೆ: ಡಾ.ಪಿ.ವಿ.ಭಂಡಾರಿ

Update: 2019-08-13 04:59 GMT

ಬ್ರಹ್ಮಾವರ, ಆ.12: ಕಡಲತಡಿಯ ಕರ್ಣ, ಉಡುಪಿಯ ಅಕ್ಬರ ಎಂದೆಲ್ಲಾ ಜನರಿಂದ ಕರೆಸಿಕೊಂಡ ಹಾಜಿ ಅಬ್ದುಲ್ಲಾ ಅವರು ಕೋಮು ಸೌಹಾರ್ದ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸೇವೆ ಹಾಗೂ ದಾನಗಳ ಮೂಲಕ ದೊಡ್ಡ ಆದರ್ಶವೊಂದನ್ನು ನಮ್ಮ ಮುಂದೆ ಇರಿಸಿದ್ದಾರೆ. ಇದನ್ನು ಮುಂದುವರಿಸುವ ಹೊಣೆಗಾರಿಗೆ ಇಂದು ನಮ್ಮ ಮೇಲಿದೆ ಎಂದು ಜಿಲ್ಲೆಯ ಖ್ಯಾತ ಮನೋರೋಗ ತಜ್ಞ ಹಾಗೂ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳು, ಹಾಜಿ ಅಬ್ದುಲ್ಲಾ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಹಾಗೂ ಉಡುಪಿಯ ನಮ್ಮ ಮನೆ ನಮ್ಮ ಮರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಸ್ಮರಣಾರ್ಥ ಹಾರಾಡಿಯ ಅಣ್ಣಪ್ಪ ನಗರದಲ್ಲಿರುವ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ಆವರಣದಲ್ಲಿ ಇಂದು ಸಂಜೆ ನಡೆದ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಉಡುಪಿಯ ಕೃಷ್ಣ ಮಠಕ್ಕೆ ವಿವಿಧ ರೂಪಗಳಲ್ಲಿ ದೊಡ್ಡ ಮಟ್ಟದ ದಾನವನ್ನು ನೀಡುತ್ತಿದ್ದ ಹಾಜಿ ಅಬ್ದುಲ್ಲಾ ಅವರು ತನ್ನದೇ ಜಾಗದಲ್ಲಿ ಹಲವು ಶಾಲೆಗಳನ್ನು ಹಾಗೂ ಸುಸಜ್ಜಿತ ಆಸ್ಪತ್ರೆಗಳನ್ನು ಪ್ರಾರಂಭಿಸುವ ಮೂಲಕ ಜಾತಿ-ಮತ-ಧರ್ಮವನ್ನೆಲ್ಲಾ ಮೀರಿ ನಿಂತವರು ಎಂದರು.

ಎರಡು ವರ್ಷಗಳ ಹಿಂದೆ ಹಾಜಿ ಅಬ್ದುಲ್ಲಾ ಅವರು 1930ರ ದಶಕದಲ್ಲಿ ನಿರ್ಮಿಸಿಕೊಟ್ಟ ಅಂದಿನ ಕಾಲದ ಸುಸಜ್ಜಿತವಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟಾಗ ಇಂದಿನ ತಲೆಮಾರು ಹಾಜಿ ಅಬ್ದುಲ್ಲಾ ಉಡುಪಿಗೆ ನೀಡಿದ ಕೊಡುಗೆಯನ್ನು ಅರಿತುಕೊಂಡಿತು. ಅಂಥ ಮಹಾನ್ ವ್ಯಕ್ತಿಯ ಹಾಕಿಕೊಟ್ಟ ಆದರ್ಶ ನಮಗಿಂದು ದಾರಿದೀಪವಾಗಬೇಕಿದೆ ಎಂದರು.

ಹಾಜಿ ಅಬ್ದುಲ್ಲಾ ಅವರ ಹೆಸರಿನಲ್ಲಿ ಅವರ ಕುಟುಂಬಿಕರು ಪ್ರಾರಂಭಿಸಿರುವ ಟ್ರಸ್ಟ್, ಕೋಮು ಸೌಹಾರ್ದಕ್ಕೆ ಪೂರಕವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು, ಅವರ ಸ್ಥಾಪಿಸಿದ ಶಾಲೆಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮಕ್ಕಳಿಗೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ದಾನಿಯ ಹೆಸರನ್ನು ಚಿರಾಯುಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಜಿ ಅಬ್ದುಲ್ಲಾರನ್ನು ಪರಿಚಯಿಸುವ ಕೃತಿಗಳನ್ನು ಬರೆದಿರುವ ವಿಮರ್ಶಕ, ಲೇಖಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಿ, ಅಗರ್ಭ ಶ್ರೀಮಂತರಾಗಿದ್ದ ಹಾಜಿ ಅಬ್ದುಲ್ಲಾರನ್ನು ಅಂದು ಬ್ರಿಟಿಷ್ ಸರಕಾರವೂ ಓಲೈಸುತ್ತಿತ್ತು. ಆದರೆ ಹಾಜಿ ಅಬ್ದುಲ್ಲಾ ಅವರು ಸ್ವಾತಂತ್ರ ಹೋರಾಟಕ್ಕೆ ಬಹಿರಂಗ ಬೆಂಬಲವನ್ನು ನೀಡಿದ್ದಲ್ಲದೇ, ಮಹಾತ್ಮ ಗಾಂಧೀಜಿ ಅವರು ಎರಡು ಬಾರಿ ಕರಾವಳಿ ಪ್ರವಾಸಕ್ಕೆ ಆಗಮಿಸಿದಾಗ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು ಮಾತ್ರವಲ್ಲದೇ ಅವರ ನಿಧಿ ಸಂಗ್ರಹಕ್ಕೆ ದೊಡ್ಡ ಮೊತ್ತದ ದಾನ ನೀಡಿ ಗಮನ ಸೆಳೆದಿದ್ದರು ಎಂದರು.

ಹಾಜಿ ಅಬ್ದುಲ್ಲಾ ಟ್ರಸ್ಟ್‌ನ ಮುಖ್ಯಸ್ಥರು, ಅವರ ಕುಟುಂಬಿಕರೂ ಆಗಿರುವ ಸೈಯದ್ ಸಿರಾಜ್ ಅಹ್ಮದ್ ಅವರು ಮಾತನಾಡಿ, ಈಗ ಹಾಜಿ ಅಬ್ದುಲ್ಲಾ ಮ್ಯೂಸಿಯಂ ಆಗಿರುವ ಅವರ ಮನೆ ಶಿಥಿಲಗೊಂಡಿದ್ದು, ಅದರ ಪುನಶ್ಚೇತನಕ್ಕೆ ಅವರೇ ಸ್ಥಾಪಿಸಿದ ಕಾರ್ಪೋರೇಷನ್ ಬ್ಯಾಂಕ್ 10 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ ಎಂದರು.

ಹಾಜಿ ಅಬ್ದುಲ್ಲಾ ಅವರು ಸ್ಥಾಪಿಸಿದ, ಬಡಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸದಂತೆ, ಅವರು ಆಸ್ಪತ್ರೆಯನ್ನು ಅಂದಿನ ಮದರಾಸು ಸರಕಾರಕ್ಕೆ ಬಿಟ್ಟುಕೊಡುವಾಗ ಬಡಜನತೆಗೆ ಉಚಿತ ಆರೋಗ್ಯ ಲಭಿಸುವಂತೆ ವಿಧಿಸಿದ್ದ ಶರ್ತಗಳನ್ನು ಪಾಲಿಸುವಂತೆ ತಾವು ನಡೆಸುತ್ತಿರುವ ಕಾನೂನು ಹೋರಾಟ ಮುಂದುವರಿಸುವುದಾಗಿ ಪ್ರಕಟಿಸಿದರು.

ಹಾಜಿ ಅಬ್ದುಲ್ಲಾ ಕುಟುಂಬದ ಸದಸ್ಯ, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಮನೆ ನಮ್ಮ ಮರ ಸಂಘಟನೆಯ ಅವಿನಾಶ್ ಕಾಮತ್ ಅತಿಥಿಗಳನ್ನು ಸ್ವಾಗತಿಸಿ, ಹಸಿರು ಉಳಿಸಿ, ನಾಡನ್ನು ರಕ್ಷಿಸುವ ತಮ್ಮ ಸಂಘಟನೆಯ ಪ್ರಯತ್ನಗಳನ್ನು ವಿವರಿಸಿದರು. ಯೋಗೇಶ್ ಶೇಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News