ಬಹುಸಂಸ್ಕೃತಿಯ ಭಾರತ ಕಟ್ಟಲು ಕೈ ಜೋಡಿಸಿ: ದಿನೇಶ್ ಗುಂಡೂರಾವ್

Update: 2019-08-15 15:26 GMT

ಬೆಂಗಳೂರು, ಆ.15: ಸುಭದ್ರ, ಸಶಕ್ತ, ಬಹುಸಂಸ್ಕೃತಿಯ ಭಾರತವನ್ನು ಕಟ್ಟಲು ಎಲ್ಲರೂ ಕೈ ಜೋಡಿಸಬೇಕು. ಅದರಲ್ಲಿ ಎಲ್ಲ ಬಗೆಯ ಸಿದ್ಧಾಂತಗಳು ಹಾಗೂ ಅಭಿಪ್ರಾಯಗಳಿಗೆ ಗೌರವ ಸಿಗುವಂತಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಆವರಣದಲ್ಲಿ 73ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇವತ್ತು ಸುಳ್ಳಿನ ಆಧಾರದಲ್ಲಿ ಕಲುಷಿತ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ, ಸಮಾನತೆ, ಭ್ರಾತೃತ್ವ, ಜಾತ್ಯತೀತತೆ, ಉದಾರವಾದ ಚಿಂತನೆಗಳೇ ನಮ್ಮ ಮೂಲ ಸಿದ್ಧಾಂತಗಳು. ಶಾಂತಿ, ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರಗಳಿಸಿದ ಏಕೈಕ ದೇಶ ಭಾರತ ಎಂದು ಅವರು ಬಣ್ಣಿಸಿದರು.

ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿದೆ. ಈಗಾಗಲೇ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ. ಇನ್ನೂ ಹೆಚ್ಚಿನ ಪ್ರಮಾಣದ ನೆರವು ನೀಡೋಣ, ನೆರೆ ಪೀಡಿತರ ಪರವಾಗಿ ನಿಲ್ಲೋಣ. ಕೇಂದ್ರ, ರಾಜ್ಯ ಸರಕಾರಗಳು ನೆರೆಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದರು.

ಅನುದಾನ ಕಡಿತ ಮಾಡುವುದು ಸರಿಯಲ್ಲ: ಅನ್ನಭಾಗ್ಯ, ಸಾಲ ಮನ್ನಾ, ಕ್ಷೀರ ಭಾಗ್ಯ, ರೈತರಿಗೆ ಬಡ್ಡಿ ರಹಿತ ಸಾಲ ಯೋಜನೆಗಳನ್ನು ನಮ್ಮ ಸರಕಾರದ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಈ ಯೋಜನೆಗಳಿಗೆ ಅನುದಾನ ಕಡಿತ ಮಾಡುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮೆಜೆಸ್ಟಿಕ್ ಬಳಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆ ವಿಸ್ತರಣೆಗಾಗಿ ಕಾಂಗ್ರೆಸ್ ಹಾಗೂ ಮೈತ್ರಿ ಸರಕಾರದ ಯೋಜನೆಗಳ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕಡಿತ ಮಾಡಲು ಮುಂದಾಗಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ರೈತರ ಕಲ್ಯಾಣಕ್ಕೆ ಪೂರಕವಾದ ಯೋಜನೆಗಳಿಗೆ ನಾವು ಅಡ್ಡಿ ಪಡಿಸುವುದಿಲ್ಲ. ನಮ್ಮ ಸರಕಾರದ ಅವಧಿಯಲ್ಲಿಯೂ ರೈತರಿಗೆ ಉಪಯುಕ್ತವಾಗುವಂತಹ ಯೋಜನೆಗಳನ್ನೆ ಜಾರಿಗೆ ತಂದಿದ್ದೇವೆ. ನಮ್ಮ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಅವರು ಹೇಳಿದರು.

ರಾಜ್ಯದ 22 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ, ಈವರೆಗೆ ರಾಜ್ಯಕ್ಕೆ ಬಿಡಿಗಾಸನ್ನು ನೀಡದ ಕೇಂದ್ರ ಸರಕಾರ ನಿದ್ದೆ ಮಾಡುತ್ತಿದೆ. ರಾಜ್ಯದ ಬಗ್ಗೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News