ವಿದ್ಯಾರ್ಥಿ, ಶಿಕ್ಷಕರ ರಜಾ ಅವಧಿ ವೈಜ್ಞಾನಿಕವಾಗಿ ನಿಗದಿಯಾಗಲಿ: ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ

Update: 2019-08-17 16:52 GMT

ಬೆಂಗಳೂರು, ಆ.17: ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ರಜಾ ಅವಧಿಯನ್ನು ವೈಜ್ಞಾನಿಕವಾಗಿ ನಿಗದಿಪಡಿಸುವ ನಿಟ್ಟಿನಲ್ಲಿ ಸರಕಾರದೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ಶೈಕ್ಷಣಿಕ ಅವಧಿ ಹಾಗೂ ರಜೆ ಒಂದು ಚರ್ಚೆ’ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಶಾಲೆಯ ಹೊರತಾಗಿ ಬಿಡುವಿನ ಅಗತ್ಯವಿದೆ. ಹಾಗೂ ಶಿಕ್ಷಕರ ಪರಿಣಾಮಕಾರಿ ಬೋಧನೆಗೂ ಸೂಕ್ತ ರೀತಿಯಲ್ಲಿ ವಿಶ್ರಾಂತಿ ಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಹಾಗೂ ಮನೋ ವೈಜ್ಞಾನಿಕರ ಸೂಕ್ತ ಸಲಹೆಗಳನ್ನು ಪಡೆದುಕೊಂಡು ರಜಾ ಅವಧಿಯನ್ನು ನಿಗದಿಪಡಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ರಜೆಯಲ್ಲಿ ಕಡಿತಗೊಳ್ಳಬಾರದು. ಹಾಗೆಯೆ ಶಿಕ್ಷಕರ ರಜೆಯನ್ನು ಕಡಿತಗೊಳಿಸುತ್ತಿರುವ ಶಿಕ್ಷಣ ಇಲಾಖೆಯ ಕ್ರಮ ಸೂಕ್ತವಲ್ಲ. ಶಿಕ್ಷಕರು ಶಾಲೆಯಲ್ಲಿ 8 ಗಂಟೆ ಕಾರ್ಯನಿರ್ವಹಿಸುತ್ತಾರೆ. ಆದರೆ, ಅವರು ಶಾಲೆಗೆ ಹೋಗಿ, ಬರುವ ಪ್ರಯಾಣದ ಅವಧಿಯನ್ನು ಯಾರು ಪರಿಗಣಿಸುತ್ತಿಲ್ಲ. ಸದ್ಯದ ಮಟ್ಟಿಗೆ ಹೇಳುವುದಾದರೆ ಶಿಕ್ಷಕರು ಸಾಕಷ್ಟು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಾಸ್ತವ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.

ಹಿರಿಯ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಇವತ್ತಿನ ಆಧುನಿಕ ಶಿಕ್ಷಣ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸವನ್ನು ಮರೆತು, ಕೇವಲ ಪರೀಕ್ಷೆಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಹಾಗೆಯೆ ಕೇವಲ ವಿಜ್ಞಾನ ವಿಷಯಕ್ಕೆ ಮಾತ್ರ ಒತ್ತು ಕೊಟ್ಟು ಮಾನವಿಕ ವಿಷಯಗಳನ್ನು ಕಡೆಗಣಿಸಲಾಗುತ್ತಿದೆ. ಈ ಬೆಳವಣಿಗೆ ಶಿಕ್ಷಣ ಕ್ಷೇತ್ರವನ್ನು ಅಧಃಪತನಕ್ಕೆ ತಳ್ಳುತ್ತದೆ ಎಂದು ತಿಳಿಸಿದರು.

ರಾಜ್ಯ ಸರಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ನೀತಿಗಳನ್ನು ರೂಪಿಸಬೇಕು. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿ ವಿದ್ಯಾರ್ಥಿ ಹಾಗೂ ಶಿಕ್ಷಕರು ವಿನಾಕಾರಣ ಒತ್ತಡಕ್ಕೆ ಒಳಗಾಗಿದ್ದಾರೆ. ಹೀಗಾಗಿ ಶಿಕ್ಷಣದ ನೀತಿಯನ್ನು ವೈಜ್ಞಾನಿಕವಾಗಿ, ಮನಃಶಾಸ್ತ್ರೀಯ ಹಿನ್ನೆಲೆಯಲ್ಲಿ ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಹಿರಿಯ ಮನೋ ವಿಜ್ಞಾನಿ ರಾಜೇಂದ್ರ ಮಾತನಾಡಿ, ಮಗುವಿನ ಬೆಳವಣಿಗೆ ದೈಹಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ, ಭಾಷೆ, ಬುದ್ಧಿ, ಲೈಂಗಿಕವಾಗಿ ಹಾಗೂ ನೈತಿಕವಾಗಿ ವಿಕಾಸವಾಗುತ್ತದೆ. ಇವೆಲ್ಲವೂ ಸಮಪ್ರಮಾಣದಲ್ಲಿ ವಿಕಾಸವಾದಾಗ ಮಾತ್ರ ಮಕ್ಕಳು ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯ. ಆದರೆ, ಈಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಆಸ್ಪದವಿಲ್ಲವೆಂದು ತಿಳಿಸಿದರು.

ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಗೆ ಮಾತ್ರ ತಯಾರಿ ಮಾಡುತ್ತಾರೆ. ಇದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಒತ್ತಡ ಹಾಕುತ್ತಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳನ್ನು ದಡ್ಡ ಎನ್ನುವ ರೀತಿಯಲ್ಲಿ ಬಿಂಬಿಸುವಂತಹ ವಾತಾವರಣ ಶಿಕ್ಷಣ ವ್ಯವಸ್ಥೆ ನಿರ್ಮಾಣಗೊಂಡಿರುವುದು ಸರಿಯಲ್ಲವೆಂದು ಅವರು ಹೇಳಿದರು.

ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಮಾತ್ರ ಅಭಿವೃದ್ಧಿಗೊಂಡರೆ ಸಾಲದು, ಸಾಮಾಜಿಕವಾಗಿ, ಭಾವನಾತ್ಮಕವಾಗಿ ಬೆಳೆಯುವುದೇ ಮುಖ್ಯ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ತನ್ನ ಸುತ್ತಮುತ್ತಲಿ ಸಮಾಜದಲ್ಲಿ ಬೆಳೆಯಲು ಸಾಕಷ್ಟು ಸಮಯಾವಕಾಶ ದೊರಕಿಸಿಕೊಡುವುದು ಅಗತ್ಯವೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಹಿರಿಯ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ್, ಹನುಮಂತ ನಿರಾಣಿ, ಎಂ.ಟಿ.ರೇಜು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News