ಸಮರೋಪಾದಿಯಲ್ಲಿ ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ

Update: 2019-08-22 18:26 GMT

ಬೆಳ್ತಂಗಡಿ: ಕಳೆದ ಒಂದು ತಿಂಗಳಿನಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ಭೂಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಮಳೆ ಕಡಿಮೆಯಾಗುತ್ತದ್ದಂತೆಯೇ ಸುಮಾರು ಹತ್ತಕ್ಕೂ ಹೆಚ್ಚು ಮಣ್ಣು ತೆಗೆಯುವ ಯಂತ್ರಗಳು ಹಾಗೂ ಹತ್ತಾರು ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಮಣ್ಣು ತಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೆಲವೆಡೆ ಬಂಡೆಕಲ್ಲುಗಳು ಉರುಳಿ ಬಿದ್ದಿದ್ದು ಅವುಗಳನ್ನು ಒಡೆಯುವ ಕಾರ್ಯ ಮಾಡಲಾಗುತ್ತಿದೆ.

ಹಿಂದೆ ಪ್ರಕೃತಿಯ ಸೊಬಗನ್ನು ನೀಡುವ ಜಲಪಾತಗಳಿಗೆ ಪ್ರಖ್ಯಾತವಾಗಿದ್ದ ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಿದರೆ ಇದೀಗ ಎಲ್ಲಿ ನೋಡಿದರಲ್ಲಿ ಬೂಕುಸಿತದ ಭೀಕರ ದೃಶ್ಯಗಳೇ ಕಣಲು ಸಿಗುತ್ತಿದೆ. ಘಾಟಿಯಲ್ಲಿ ಇದೀಗ ಕುಸಿದಿರುವುದು ಎಲ್ಲಿ ಎಂದು ಗುರುತಿಸುವುದಕ್ಕಿಂತಲೂ ಎಲ್ಲಿ ಕುಸಿದಿದಲ್ಲ ಎಂದು ಹೇಳುವುದೇ ಸುಲಭವಾಗಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ಒಂದನೇ ತಿರುವಿನಿಂದ ಆರಂಭಿಸಿ ಕೊಟ್ಟಿಗೆಹಾರದಲ್ಲಿ ಮಲಯಮಾರುತದ ವರೆಗೂ ಎಲ್ಲೆಡೆ ಕುಸಿತಗಳಾಗಿವೆ. ಸಾಮಾನ್ಯವಾಗಿ ಘಾಟಿಯಲ್ಲಿ ಹತ್ತನೇ ತಿರುವಿನಿಂದ ಕೆಳಗೆ ಭೂಕುಸಿತಗಳಾಗುತ್ತಿದ್ದವು ಆದರೆ ಈ ಬಾರಿ ಕೆಳಗಡೆ ಆಗಿರುವುದಕ್ಕಿಂತಲೂ ಹೆಚ್ಚಾಗಿ ಮೇಲ್ಭಾಗದಲ್ಲಿ ಭು ಕುಸಿತಗಳಾಗಿವೆ. ಕೆಲ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿದ್ದು ರಸ್ತೆಯ ಬಹುಭಾಗವನ್ನೇ ಕಸಿದುಕೊಂಡಿವೆ.

ಬೆಟ್ಟದ ಮೇಲಿನ ಜಲಪಾತಗಳು ಕೆಲವು ಕಣ್ಮರೆಯಾಗಿವೆ. ಅಣ್ಣಪ್ಪಬೆಟ್ಟದಿಂದ ಮಲೆಯ ಮಾರುತದ ವರೆಗಿನ ಪ್ರದೇಶಗಳಲ್ಲಿ ಶೇ 90 ಭಾಗದಲ್ಲಿಯೂ ರಸ್ತೆಯ ಮೇಲೆ ಮಣ್ಣು ಕುಸಿದು ಬಿದ್ದಿದೆ ಕಿರು ಸೇತುವೆಗಳು ಬಿರುಕು ಬಿಟ್ಟಿವೆ, ಮೋರಿಗಳು ನೀರುಪಾಲಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ತಡೆಗೋಡೆಗಳಿಗೆ ಹಾನಿಯಾಗಿರುವುದು ಕಂಡು ಬರುತ್ತಿದೆ. ಸುಮಾರು ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಸಣ್ಣ ನೀರಿನ ಹರಿವಿದ್ದ ಜಾಗದಲ್ಲಿ ದೊಡ್ಡ ಹಳ್ಳಗಳೇ ಸೃಷ್ಟಿಯಾಗಿವೆ. ಲೆಕ್ಕ ಮಾಡಲು ಸಾಧ್ಯವಿಲ್ಲದಷ್ಟು ಸಣ್ಣ ಮಟ್ಟದ ಭೂ ಕುಸಿತಗಳಾಗಿರುವುದು ಘಾಟಿಯಲ್ಲಿ ಸಂಚರಿಸಿದರೆ ಕಂಡು ಬರುತ್ತದೆ.

ಇದೀಗ ಸಮರೋಪಾದಿಯಲ್ಲಿ ರಸ್ತೆಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ತಡೆಗೋಡೆಗಳು ಕುಸಿದು ಹೋಗಿರುವ ಪ್ರದೇಶಗಳಲ್ಲಿ ಮೇಲಿನಿಂದ ಕುಸಿದು ಬಿದ್ದಿರುವ ಮಣ್ಣನ್ನೇ ತಡೆಗೋಡೆಯಂತೆ ಇಡಲಾಗಿದೆ. ಇದು ಈ ಮಳೆಯಲ್ಲಿ ಎಷ್ಟು ದಿನ ಉಳಿಯಲು ಸಾಧ್ಯ ಎಂದು ಕಾದು ನೋಡಬೇಕಾಗಿದೆ.

ಸುಮಾರು ಐದಕ್ಕೂ ಹೆಚ್ಚು ಕಡೆ ರಸ್ತೆ ಕೊಚ್ಚಿಹೋಗಿದ್ದು ಅಪಾಯಕಾರಿ ಸ್ಥಿತಿಯಿದೆ. ಇಲ್ಲಿ ಉಳಿದಿರುವ ರಸ್ತೆಯ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ತಡೆಗೋಡೆಯನ್ನು ಕಟ್ಟಲಾಗಿದೆ. ರಸ್ತೆಯ ಕೆಳ ಭಾಗದಲ್ಲಿ ಭಾರೀ ಪ್ರಪಾತಗಳೇ ಇದೆ. ರಸ್ತೆಯನ್ನು ಭಧ್ರಪಡಿಸುವ ಯಾವುದೇ ಕಾರ್ಯಗಳನ್ನು ಈ ವರೆಗೆ ಮಾಡಲಾಗಿಲ್ಲ. ಕೆಲವೆಡೆ ಕೇವಲ ಒಂದು ವಾಹನ ಕಷ್ಟಪಟ್ಟು ಹೋಗಲು ಮಾತ್ರ ಅವಕಾಶವಿದ್ದು ದೊಡ್ಡ ವಾಹನಗಳ ಸಂಚಾರ ಅಸಾಧ್ಯವಾಗಿದೆ. ಕಟ್ಟಿರುವ ತಡೆಗೋಡೆಗಳು ವಾಹನಗಳಿಗೆ ರಸ್ತೆ ಕುಸಿದಿದೆ ಎಂದು ಸೂಚನೆ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ. ಅದರಿಂದ ಬೇರೆ ಯಾವುದೇ ಪ್ರಯೋಜನವಾಗಲಾರದು. ಘಾಟಿಯ ಮೇಲ್ಬಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಪ್ರದೇಶದಲ್ಲಿ ವಾಹನ ಸಂಚಾರ ಈಗಲೂ ಅತ್ಯಂತ ಅಪಾಯಕಾರಿಯಾಗಿಯೇ ಇದೆ. ಹಲವೆಡೆ ಭೂ ಕುಸಿತವಾದೆಡೆಯಲ್ಲಿ ನೀರು ಹರಿಯುತ್ತಿದೆ. ಅಪಾಯಕಾರಿ ಸ್ಥಿತಿಯಲ್ಲಿ ಮರಗಳು ಬಂಡೆಗಳು ಇವೆ. ಅವುಗಳನ್ನು ತೆರವುಗೊಳಿಸಿದರೆ ಮತ್ತಷ್ಟು ಕುಸಿತದ ಭಯವಿದ್ದು ಅದನ್ನು ಹಾಗೆಯೇ ಬಿಡಲಾಗಿದೆ. ಮಳೆ ಜೋರಾಗಿ ಬಂದರೆ ಮತ್ತೆ ಭೂಕುಸಿತದ ಅಪಾಯ ಇದೆ.

ಇದೀಗ ಬಹುತೇಕ ಪ್ರದೇಶಗಳಲ್ಲಿ ಮಣ್ಣ ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಮುಂದಿನ ತಿಂಗಳಿನಿಂದ ಸಣ್ಣ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡುವ ಗುರಿಯೊಂದಿಗೆ ಈ ಕಾರ್ಯವನ್ನು ಮಾಡಲಾಗಿದೆ. ಆದರೆ ಹಿರಿಯ ಅಧಿಕಾರಿಗಳು ಘಾಟಿ ರಸ್ತೆಯ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಚಾಮಾಡಿ ಘಾಟ್ ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರೂಪಿಸಿದ್ದಾರೆ. ಬಹುಕೋಟಿಯ ಈ ಯೋಜನೆಗಳು ಇದೀಗ ಕೇಂದ್ರ ಸರಕಾರದ ಮುಂದಿದ್ದು ಭೂ ಕುಸಿತ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಈ ಯೋಜನೆಗಳಿಗೆ ಇದೀಗ ಹೆಚ್ಚಿನ ಮಹತ್ವ ಸಿಗಲಿದ್ದು ರಸ್ತೆಯನ್ನು ಉಳಿಸಿಕೊಳ್ಳಬೇಕಾದರೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎನ್ನುತ್ತಾರೆ ಸ್ಥಳೀಯ ಜನರು.  

Writer - ಶಿಬಿ ಧರ್ಮಸ್ಥಳ

contributor

Editor - ಶಿಬಿ ಧರ್ಮಸ್ಥಳ

contributor

Similar News