2025ರ ವೇಳೆಗೆ ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ 65 ಲಕ್ಷ ಉದ್ಯೋಗ ಸೃಷ್ಟಿ: ಸಿಎಂ ಯಡಿಯೂರಪ್ಪ

Update: 2019-08-26 13:22 GMT

ಬೆಂಗಳೂರು, ಆ. 26: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂದಿನ ಐದಾರು ವರ್ಷಗಳಲ್ಲಿ ರಾಜ್ಯಾದ್ಯಂತ 65 ಲಕ್ಷ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವಲ್ ಎಕ್ಸ್ ಪೋ-2019 ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರವಾಸೋದ್ಯಮ ವಲಯ ಈಗಾಗಲೇ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಅದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. 2025 ರ ವೇಳೆಗೆ ರಾಜ್ಯದಲ್ಲಿ 65 ಲಕ್ಷದಷ್ಟು ಜನರು ನೇರವಾಗಿ ಹಾಗೂ ಪರೋಕ್ಷವಾಗಿ ಕೆಲಸ ಮಾಡಲು ಆರಂಭಿಸಿರುತ್ತಾರೆ. ಇದು ನಮ್ಮ ಸರಕಾರದ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮ ವಲಯ ರಾಜ್ಯದ ಜಿಡಿಪಿಗೆ ಪ್ರಸ್ತುತ ಶೇ.14.8 ರಷ್ಟು ಕೊಡುಗೆ ನೀಡಿದ್ದು, ಇದನ್ನು ಶೇ. 20ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು 41 ಸ್ಥಳಗಳನ್ನು ಗುರುತಿಸಿ ಆದ್ಯತೆ ಮೇಲೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ ಈಗಾಗಲೇ 20 ಸ್ಥಳಗಳ ಅಭಿವೃದ್ಧಿಯ ಮಾಸ್ಟರ್ ಪ್ಲಾನ್‌ನ್ನು ಅಂತಿಮಗೊಳಿಸಿ ಅನುಷ್ಠಾನಗೊಳಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದ ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಹೆದ್ದಾರಿ ನಿರ್ಮಿಸಲಾಗುವುದು. ಆ ಮೂಲಕ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಗಮನ ನೀಡಲಾಗುತ್ತದೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಕರ್ನಾಟಕವನ್ನು ಒಂದು ಪ್ರವಾಸಿ ಆಕರ್ಷಕ ಕೇಂದ್ರವಾಗಿಸುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ಕರ್ನಾಟಕ ಸದ್ಯದಲ್ಲೇ ಜಾಗತಿಕ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ಸಿಎಂ ನುಡಿದರು.

ವಿಶ್ವದರ್ಜೆಯ ಪ್ರವಾಸಿ ತಾಣವಾಗಲು ಕರ್ನಾಟಕವು ಎಲ್ಲ ರೀತಿಯಲ್ಲಿಯೂ ಸಾಮರ್ಥ್ಯವಿದೆ. ಹೀಗಾಗಿ, ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಲು, ನಮ್ಮ ಪ್ರವಾಸಿ ತಾಣಗಳನ್ನು ವಿಶ್ವಕ್ಕೆ ಪರಿಚಯಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದ ಮೂರು ವಿಶ್ವ ಪಾರಂಪರಿಕ ಸ್ಥಳಗಳನ್ನು ಹೊಂದಿರುವುದು ನಮ್ಮ ಹೆಮ್ಮೆಯಾಗಿದೆ. ಅಲ್ಲದೆ, 320 ಕೀ.ಮೀ. ಉದ್ದದ ಸಹಜ ಕರಾವಳಿ ತೀರವನ್ನು ಹೊಂದಿದೆ. ರಾಜ್ಯದ ಪ್ರವಾಸಿ ತಾಣಗಳು ಆಕರ್ಷಣೀಯವಾಗಿವೆ. ಜತೆಗೆ ಕರ್ನಾಟಕ ತನ್ನದೇ ವಿಶಿಷ್ಟವಾದ ಸಂಸ್ಕೃತಿ ಹೊಂದಿದೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಕೆ.ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಸಾಧನೆ ಮಾತನಾಡಬೇಕು. ಮಾತನಾಡುವುದೇ ಸಾಧನೆಯಲ್ಲ ಎಂಬುದನ್ನು ಗುರುತಿಸಿ ಸರಕಾರ ಜವಾಬ್ದಾರಿ ವಹಿಸಿದೆ. ಅದನ್ನು ಎಲ್ಲರೊಂದಿಗೆ ಸೇರಿ ನಿಭಾಯಿಸಲು ಶ್ರಮಿಸುತ್ತೇನೆ.

-ಡಾ. ಸುಧಾಮೂರ್ತಿ, ಪ್ರವಾಸೋದ್ಯಮ ಕಾರ್ಯ ಪಡೆಯ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News