‘ಶಕುನಿ ಮಾಮಾ’ಗಳಿಂದ ಅನರ್ಹ ಶಾಸಕರು ತ್ರಿಶಂಕು ಸ್ಥಿತಿಗೆ: ವಿ.ಎಸ್.ಉಗ್ರಪ್ಪ

Update: 2019-08-26 14:35 GMT

ಬೆಂಗಳೂರು, ಆ. 26: ಬಿಜೆಪಿಯ ‘ಶಕುನಿ ಮಾಮಾ’ಗಳಿಂದ ಹಿಂದಿನ ಮೈತ್ರಿ ಸರಕಾರ ಪತನವಾಗಿದ್ದು, ಇದೀಗ ಅದೇ ಶಕುನಿ ಮಾಮಾಗಳಿಂದ ಅನರ್ಹ ಶಾಸಕರನ್ನು ತ್ರಿಶಂಕು ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಎಲ್.ಸಂತೋಷ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಮಂದಿ ಶಕುನಿ ಮಾಮಾಗಳಿದ್ದಾರೆಂದು ಟೀಕಿಸಿದರು.

ಬಿ.ಎಲ್.ಸಂತೋಷ್ ಅವರಿಗೆ ನೆಹರೂ ಕೊಡುಗೆ ಬಗ್ಗೆ ಅರಿವಿಲ್ಲ. ಹೀಗಾಗಿ ನೆಹರೂ ಕುರಿತು ಹಗುರವಾಗಿ ಮಾತನಾಡಿದ್ದಾರೆ ಎಂದು ದೂರಿದ ಅವರು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವವರಿಗೆ ಇತಿಹಾಸ ಗೊತ್ತಿರಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಎಷ್ಟು ದಿನ ತೆಗೆದುಕೊಂಡರೋ, ಸಚಿವ ಸಂಪುಟ ರಚನೆಗೆ ಎಷ್ಟು ದಿನಗಳು ಕಳೆದವೋ, ಖಾತೆ ಹಂಚಿಕೆಗೆ ಮತ್ತೊಂದಷ್ಟು ದಿನ. ಇದೀಗ ನಾಲ್ಕೈದು ಮಂದಿ ಉಪಮುಖ್ಯಮಂತ್ರಿಗಳನ್ನು ಮಾಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

ಆಪರೇಷನ್ ಕಮಲದಲ್ಲಿ ನಮ್ಮ ಕೈವಾಡವಿಲ್ಲ ಎಂದಿದ್ದ ಬಿಜೆಪಿಯವರು ಇದೀಗ ಸಂಪುಟದಲ್ಲಿ ಸಚಿವ ಸ್ಥಾನಗಳನ್ನು ಖಾಲಿ ಇಟ್ಟಿದ್ದು ಏಕೆ ಎಂದು ಪ್ರಶ್ನಿಸಿದ ಉಗ್ರಪ್ಪ, ರಾಜ್ಯದಲ್ಲಿ ನೆರೆ ಮತ್ತು ಬರ ಪರಿಸ್ಥಿತಿ ಇದ್ದರೂ ಕೇಂದ್ರ ಸರಕಾರ ಈ ವರೆಗೂ ರಾಜ್ಯಕ್ಕೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಟಾಚಾರಕ್ಕೆ ಅಧ್ಯಯನ: ನೆರೆ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ಆಗಮಿಸಿದೆ. ಆದರೆ, ಕಾಟಾಚಾರಕ್ಕೆ ಅಧ್ಯಯನ ನಡೆಸಲಾಗುತ್ತಿದೆ. ಖಾತೆ ಹಂಚಿಕೆ ಬಿಕ್ಕಟ್ಟಿನಲ್ಲಿರುವ ಸಿಎಂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೂಡಲೇ ಕೇಂದ್ರದಿಂದ ಪರಿಹಾರ ಮೊತ್ತ ಬಿಡುಗಡೆಗೆ ಆಸ್ಥೆ ವಹಿಸಬೇಕು ಎಂದು ಆಗ್ರಹಿಸಿದರು.

‘ಬಡ ಜನರಿಗೆ ಅಗ್ಗದ ದರದಲ್ಲಿ ಊಟ-ಉಪಾಹಾರ ಒದಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದಿರುವ ಸಂಸ್ಥೆ ವಿರುದ್ಧ ತನಿಖೆಗೆ ಆದೇಶಿಸುವ ಮೂಲಕ ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್ ಮುಚ್ಚಲು ಮುಂದಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News