ಹಿರಿಯ ಚಿಂತಕ, ಹೋರಾಟಗಾರ, ರಾಜಕಾರಣಿ ಎ.ಕೆ.ಸುಬ್ಬಯ್ಯ ನಿಧನ

Update: 2019-08-27 12:14 GMT

ಬೆಂಗಳೂರು, ಆ.27: ಹಿರಿಯ ಚಿಂತಕ, ಹೋರಾಟಗಾರ, ವಿಧಾನಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರು ಮಂಗಳವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಬ್ಬಯ್ಯ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

85 ವರ್ಷದ ಎ.ಕೆ. ಸುಬ್ಬಯ್ಯ ಕೆಲವಾರು ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ಈಡಾಗಿದ್ದರು. ನಾಲೈದು ಬಾರಿ ಅವರಿಗೆ ಡಯಾಲಿಸಿಸ್ ಸಹ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದ್ದ ಅವರು, ಸೋಮವಾರ ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಗಿದೆ. ಮಂಗಳವಾರ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೊಡಗಿನವರಾದ ಅಜ್ಜೀಕುಟ್ಟಿರ ಕರಿಯಪ್ಪ ಸುಬ್ಬಯ್ಯ ಅವರು ನಾಲ್ಕು ಬಾರಿ ಪರಿಷತ್ ಸದಸ್ಯರಾಗಿದ್ದರು. ನೇರ, ದಿಟ್ಟ, ನಿಷ್ಠುರ ಮಾತುಗಳಿಗೆ ಹೆಸರಾಗಿದ್ದ ಎ.ಕೆ. ಸುಬ್ಬಯ್ಯ ಒಂದು ಕಾಲದಲ್ಲಿ ಸಂಘ ಪರಿವಾರದ ನಿಷ್ಠಾವಂತ ಮುಖಂಡರಾಗಿದ್ದರು. ಆದರೆ, ಮುಂದಿನ ದಿನಗಳಲ್ಲಿ ಆರೆಸ್ಸೆಸ್ ವಿಚಾರಧಾರೆಯ ವಿರುದ್ಧವೇ ಸಿಡಿದೆದ್ದರು. ಆರೆಸ್ಸೆಸ್ ವಿರುದ್ಧ ನೀಡುತ್ತಿದ್ದ ಹೇಳಿಕೆಗಳಿಂದಲೇ ಅವರು ಖ್ಯಾತಿ ಪಡೆದಿದ್ದರು. ಅನೇಕ ವಿವಾದಾತ್ಮಕ ಹೇಳಿಕೆಗಳನ್ನೂ ನೀಡಿದ್ದರು. ಬಿಜೆಪಿಯ ಮುಂಚೂಣಿ ನಾಯಕರಾಗಿ, ಕರ್ನಾಟಕದ ಬಿಜೆಪಿ ಎಂದರೆ ಸುಬ್ಬಯ್ಯ ಎಂಬಂತಾಗಿ ಇಡೀ ಕರ್ನಾಟಕವನ್ನು ಸುತ್ತಿ, ಯುವಕರನ್ನು ಗುರುತಿಸಿ, ಕಾರ್ಯಕರ್ತರನ್ನು ಸಂಘಟಿಸಿ, ಪಕ್ಷಕ್ಕೊಂದು ಸುಭದ್ರ ನೆಲೆ ಸೃಷ್ಟಿಸಿಕೊಟ್ಟರು. ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗಿ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಛಳಿ ಬಿಡಿಸಿದ್ದರು. ಅವರ ನಾಯಕತ್ವದಲ್ಲೇ 1983ರ ಚುನಾವಣೆಯಲ್ಲಿ ಬಿಜೆಪಿಯು ಕರ್ನಾಟಕದಲ್ಲಿ 12ಕ್ಕೂ ಅಧಿಕ ಸ್ಥಾನ ಗೆಲ್ಲಲು ಸಾಧ್ಯವಾಗಿತ್ತು.

ಮೈಸೂರು, ಕೊಡಗು ಮತ್ತು ಮಂಗಳೂರು ಪದವೀಧರ ಕ್ಷೇತ್ರದಿಂದ 1968 ಹಾಗೂ 74 ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 18 ತಿಂಗಳು ಜೈಲು ವಾಸ ಅನುಭವಿಸಿದ್ದ ಅವರು, 1980ರಲ್ಲಿ ಭಾರತೀಯ ಜನತಾ ಪಕ್ಷದಿಂದ ಮತ್ತೊಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ನೇರ, ನಿಖರ, ನಿಷ್ಠುರ ವ್ಯಕ್ತಿಯಾಗಿದ್ದ ಸುಬ್ಬಯ್ಯ ಅವರು 1983-84ರಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡರು. ಅನಂತರ 1984 ರಲ್ಲಿ ಕನ್ನಡ ನಾಡು ಎಂಬ ಪ್ರಾದೇಶಿಕ ಪಕ್ಷ ಕಟ್ಟಿದರು. ಆರೆಸ್ಸೆಸ್ ಅಂತರಂಗ ಕೃತಿಯ ಮೂಲಕ ಸಂಘ ಪರಿವಾರದ ಬಣ್ಣ ಬಯಲು ಮಾಡಿದ ಕೀರ್ತಿ ಅವರದ್ದು.

ಸುಬ್ಬಯ್ಯ ಅವರು 1988 ರಲ್ಲಿ ಕಾಂಗ್ರೆಸ್ ಸೇರಿ ಮತ್ತೊಂದು ಬಾರಿ ವಿಧಾನ ಪರಿಷತ್ ಸದಸ್ಯರಾದರು. ಒಟ್ಟಾರೆ ನಾಲ್ಕು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದ ಅವರು, ಶಾಸನ ಸಭೆಯನ್ನು, ರಾಜಕಾರಣಿಗಳನ್ನು ಎಚ್ಚರದ ಸ್ಥಿತಿಯಲ್ಲಿಟ್ಟವರು. ಸುಬ್ಬಯ್ಯನವರ ತರ್ಕಬದ್ಧ ವಿಚಾರ ಮಂಡನೆ ಮತ್ತು ಸಂಸದೀಯ ನಡವಳಿಕೆ ಶಾಸನ ಸಭೆಗೇ ಘನತೆ ಗೌರವ ತರುವಂಥದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ.

ಎಲ್ಲ ಪಕ್ಷಗಳನ್ನು ಸುತ್ತು ಬಂದ ಸುಬ್ಬಯ್ಯನವರು, ಬಳಿಕ ರಾಜಕಾರಣದಿಂದ ದೂರ ಸರಿದು, ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಜನಪರ ಹೋರಾಟಗಳೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಜಾತ್ಯತೀತ, ವರ್ಗರಹಿತ ಸಮಾಜ ನಿರ್ಮಾಣದ ಆಶಯಗಳನ್ನಿಟ್ಟುಕೊಂಡಿದ್ದ ಸುಬ್ಬಯ್ಯನವರು ಮಾನವ ಹಕ್ಕುಗಳ ಹೋರಾಟಗಳಿಗೆ ನಿರಂತರ ದನಿಯಾಗಿದ್ದರು.

ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ, ಸರಳವಾಗಿ, ಕೊಡವ ಸಂಪ್ರದಾಯದಂತೆ ಬುಧವಾರ ಸಂಜೆ 4.30 ಸಮಯಕ್ಕೆ ಕೊಡಗಿನ ಅವರ ತೋಟದ ಮನೆಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಎ.ಕೆ.ಸುಬ್ಬಯ್ಯ ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಹಿರಿಯ ಮುತ್ಸದ್ದಿ ರಾಜಕಾರಣಿ, ಹೋರಾಟಗಾರ ಎ.ಕೆ.ಸುಬ್ಬಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ಅತ್ಯಂತ ನಿಷ್ಠುರ ನಾಯಕ ಎ.ಕೆ.ಸುಬ್ಬಯ್ಯ ಅವರು ಅನ್ಯಾಯದ ವಿರುದ್ಧ ಸದಾ ಹೋರಾಡಿದವರು. ನಿಷ್ಠುರ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಭಗವಂತ ಅವರ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸಂತಾಪ

ನೇರ, ದಿಟ್ಟ ಮಾತುಗಳಿಂದ ಸಮಕಾಲೀನ ವಿದ್ಯಮಾನಗಳಿಗೆ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಾ ನಮ್ಮ ಆತ್ಮಸಾಕ್ಷಿಯಂತಿದ್ದ ಹಿರಿಯ ಹೋರಾಟಗಾರ ಎ.ಕೆ.ಸುಬ್ಬಯ್ಯ ಸಾವಿನಿಂದ ವೈಯಕ್ತಿಕವಾಗಿ ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾಡು ಮಾರ್ಗದರ್ಶಕನನ್ನು ಕಳೆದುಕೊಂಡು ಬಡವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಸಂತಾಪ

ಜನಸಂಘದಿಂದ ಬಂದು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹಲವಾರು ಸಮಾಜಮುಖಿ ಹೋರಾಟಗಳಲ್ಲಿ ಭಾಗಿಯಾಗಿರುವ ಎ.ಕೆ.ಸುಬ್ಬಯ್ಯನವರು ಅಗಲಿರುವ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನ್ನ ಜೊತೆ ಸೆರೆಮನೆ ವಾಸವನ್ನು ಅನುಭವಿಸಿದ್ದರು. ನಿಧನರಾದ ಸುಬ್ಬಯ್ಯನವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News