ಜೋಡಿ ಕೊಲೆ ಪ್ರಕರಣ: ಆರೋಪಿಗಳ ಬಂಧನ

Update: 2019-08-27 13:00 GMT

ಬೆಂಗಳೂರು, ಆ.27: ಜೆ.ಪಿ.ನಗರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸುಬ್ರಮಣ್ಯಪುರ ಉಪವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಲಚೇನಹಳ್ಳಿ ನಿವಾಸಿಗಳಾದ ಮಧುಸೂಧನ್ ಯಾನೆ ಮಧು(37), ಲಿಖಿನ್ ಬೋಪಣ್ಣ(26) ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ನರೇಂದ್ರ(35), ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಆ.25ರಂದು ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರುಣ್ ಹಾಗೂ ಮಂಜುನಾಥ್ ಎಂಬುವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನರೇಂದ್ರ, ಮಧು ಮತ್ತು ಸಹಚರರು, ವರುಣ್ ಮತ್ತು ಮಂಜುನಾಥ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಮಧುಸೂಧನ್ ಮತ್ತು ಲಿಖಿನ್ ಬೋಪಣ್ಣ ಕುಖ್ಯಾತ ರೌಡಿ ರಘುವಿನ ಸಹಚರರಾಗಿದ್ದು, ಇವರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣ ಮತ್ತು ಜೆ.ಪಿ.ನಗರ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಹಳೇ ದ್ವೇಷಕ್ಕಾಗಿ ಕೊಲೆ: ರಘುನನ್ನು ಎರಡು ವರ್ಷದ ಹಿಂದೆ ಮಂಜುನಾಥ ಕೊಲೆ ಮಾಡಿದ್ದನು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ರಘುವಿನ ಸಹೋದರ ನರೇಂದ್ರ ತನ್ನ ಸ್ನೇಹಿತರಾದ ಮಧುಸೂಧನ್, ಲಿಖಿನ್ ಬೋಪಣ್ಣ, ಮನು, ವಿನೋದ, ಅಯ್ಯಪ್ಪ, ದೀಪು, ಮಂಜುನಾಥ, ಪವನ್ ಅವರೊಂದಿಗೆ ಸೇರಿಕೊಂಡು ಮಂಜುನಾಥನನ್ನು ಕೊಲೆ ಮಾಡಲು ಹುಡುಕಾಡುತ್ತಿದ್ದರು ಎನ್ನಲಾಗಿದೆ.

ಆ.25ರಂದು ಮಂಜುನಾಥ್ ಇನ್ನೊಬ್ಬ ವ್ಯಕ್ತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವುದನ್ನು ಗಮನಿಸಿ ಆತನನ್ನು ಹಿಂಬಾಲಿಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಗದು ಬಹುಮಾನ ಪ್ರಕರಣವನ್ನು ಭೇದಿಸಿ ದುಷ್ಕರ್ಮಿಗಳನ್ನು ಬಂಧಿಸಿದ ತನಿಖಾಧಿಕಾರಿಗಳ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News