ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶ: ಸಚಿವ ಸಿ.ಟಿ.ರವಿ

Update: 2019-08-29 16:04 GMT

ಬೆಂಗಳೂರು, ಆ.29: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದ್ದು, ಈಗಾಗಲೇ 40 ಪ್ರಮುಖ ಪ್ರವಾಸಿ ವರ್ತುಲಗಳನ್ನು ಗುರುತಿಸಲಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ದೇಶವನ್ನು ‘ಟೂರಿಸ್ಟ್ ಹಬ್’ ಮಾಡಲು ಉದ್ದೇಶಿಸಿದ್ದಾರೆ. ಅದರಂತೆ, ದೇಶಾದ್ಯಂತ ಪ್ರಮುಖವಾಗಿ 17 ಸ್ಥಳಗಳನ್ನು ಗುರುತಿಸಿದ್ದು, ಈ ಪೈಕಿ ನಮ್ಮ ರಾಜ್ಯದ ಹಂಪಿ ಕೂಡ ಒಂದಾಗಿದೆ ಎಂದರು.

ರಾಜ್ಯ ಸರಕಾರದ ವತಿಯಿಂದ ಪ್ರವಾಸಿ ತಾಣಗಳನ್ನು ಯಾವ ರೀತಿಯಲ್ಲಿ ಅಭಿವೃದ್ಧಿಗೊಳಿಸಬಹುದು ಎಂಬುದರ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಖಾಸಗಿಯವರಿಂದ ಬಂಡವಾಳ ಆಕರ್ಷಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಚಿಂತನೆ ನಡೆಸಲಾಗಿದೆ ಎಂದು ರವಿ ಹೇಳಿದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿಯಿರುವ 243 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತಹ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಗೋಲ್ಡನ್ ಚಾರಿಯೇಟ್ ರೈಲು ಯೋಜನೆಯಿಂದಾಗಿ ಇಲಾಖೆಗೆ 41 ಕೋಟಿ ರೂ.ನಷ್ಟವಾಗಿದೆ. ಆದುದರಿಂದ, ಗೋಲ್ಡನ್ ಚಾರಿಯೇಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಜಂಗಲ್ ಲಾಡ್ಜ್‌ಗಳು ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳು ಲಾಭದಲ್ಲಿವೆ. ಯಾತ್ರಿ ನಿವಾಸಗಳ ಬಳಕೆ ಬಗ್ಗೆ ಅಧ್ಯಯನ ವರದಿಯನ್ನು ಕೇಳಲಾಗಿದೆ ಎಂದು ರವಿ ಹೇಳಿದರು.

ಈವರೆಗೆ 2400 ಫಲಾನುಭವಿಗಳಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಟ್ಯಾಕ್ಸಿಗಳನ್ನು ವಿತರಿಸಲಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಬೇಡಿಕೆ ಇಲ್ಲದಿದ್ದರೂ ಟ್ಯಾಕ್ಸಿಗಳನ್ನು ನೀಡಲಾಗಿದೆ. ಇದರಿಂದಾಗಿ, ಫಲಾನುಭವಿಗಳ ಮೇಲೆ ಸಾಲದ ಹೊರೆ ಹೆಚ್ಚುತ್ತಿದೆ. ಈ ಎರಡು ವಿಚಾರದಲ್ಲಿ ಅಧ್ಯಯನ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 25 ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಮಹಾತ್ಮರು ಬದುಕಿದ ರೀತಿಯೇ ಬೇರೆ, ನಾವು ಅದಕ್ಕೆ ಜಾತಿಯ ಲೇಪನ ಹಚ್ಚಿ ಆಚರಣೆ ಮಾಡುತ್ತಿದ್ದೇವೆ. ಜಯಂತಿಗಳ ಆಚರಣೆಯಲ್ಲಿ ಬದಲಾವಣೆ ತರಲು ಸಂಬಂಧಪಟ್ಟ ಸಮುದಾಯದ ಮುಖಂಡರು, ರಾಜಕೀಯ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನಾಡಧ್ವಜವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲು ಅವಕಾಶವಿದೆಯೇ ಹೊರತು ಸಂವಿಧಾನಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಇಡೀ ದೇಶಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜ ಸಂಹಿತೆಯಲ್ಲಿ ಅವಕಾಶವಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸಿ.ಟಿ.ರವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News