ನಾಡಧ್ವಜ ಬೇಡವೆಂಬ ಅಭಿಪ್ರಾಯವನ್ನು ಸಚಿವ ಸಿ.ಟಿ.ರವಿ ಹಿಂಪಡೆಯಲಿ: ಸಿದ್ದರಾಮಯ್ಯ ಒತ್ತಾಯ

Update: 2019-08-30 12:17 GMT

ಬೆಂಗಳೂರು, ಆ.30: ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ. ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ರಾಜ್ಯ ಬಿಜೆಪಿ ಸರಕಾರದ ನಿಲುವು ಸ್ಪಷ್ಟವಾಗಿ ಕನ್ನಡ ವಿರೋಧಿಯಾದುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ನಮಗೊಂದು ನಾಡಗೀತೆಯನ್ನು ಒಪ್ಪಿಕೊಂಡಿಲ್ಲವೇ? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜ ಹಾರಿಸಬೇಕೆಂದು ರಾಷ್ಟ್ರಧ್ವಜ ಸಂಹಿತೆ ಹೇಳಿದೆ. ಅದನ್ನು ಪಾಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಬೇರೇನು ಸಮಸ್ಯೆ ಇದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಹಿರಿಯರಾದ ಡಾ.ಪಾಟೀಲ ಪುಟ್ಟಪ್ಪ ಮತ್ತಿತರ ಕನ್ನಡ ಹೋರಾಟಗಾರರು ನಾಡಧ್ವಜಕ್ಕಾಗಿ ಮನವಿ ಮಾಡಿದ್ದರು. ಆ ಬಗ್ಗೆ ಅಧ್ಯಯನ ನಡೆಸಿದ್ದ ತಜ್ಞರ ಸಮಿತಿ ವಿನ್ಯಾಸಗೊಳಿಸಿದ್ದ ನಾಡಧ್ವಜಕ್ಕೆ ಮನ್ನಣೆ ನೀಡಬೇಕೆಂದು ಕೇಂದ್ರ ಸರಕಾರವನ್ನು ಕೋರಿದ್ದೆವು. ಈಗ ರಾಜ್ಯ ಸರಕಾರವೇ ವಿರೋಧಿಸುತ್ತಿರುವುದು ಖಂಡನೀಯ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವರು ನಾಡಧ್ವಜ ಅಗತ್ಯ ಇಲ್ಲ ಎಂದು ಹೇಳಿ ಕನ್ನಡಿಗರನ್ನು ಕೆರಳಿಸಿರುವುದು ಸರಿ ಅಲ್ಲ. ಮಾಡಬೇಕಾಗಿರುವ ಕೆಲಸ ಬಿಟ್ಟು ಸಚಿವರು ಅನಗತ್ಯವಾಗಿ ವಿವಾದ ಸೃಷ್ಟಿಸಲು ಹೊರಟಂತಿದೆ. ಸಚಿವರು ತಕ್ಷಣ ತಮ್ಮ ಅಭಿಪ್ರಾಯವನ್ನು ಹಿಂದಕ್ಕೆ ಪಡೆದು ನಾಡಧ್ವಜವನ್ನು ಒಪ್ಪಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಾಡಧ್ವಜ ಅಗತ್ಯ ಇಲ್ಲ ಎನ್ನುವ ಸಿ.ಟಿ.ರವಿ ಹೇಳಿಕೆ ಕನ್ನಡಿಗರ ಆತ್ಮಗೌರವಕ್ಕೆ ಮಾಡಿದ ಅಪಮಾನ. ಹಲವು ಕನ್ನಡ ಹೋರಾಟಗಾರರ ಮನವಿಯಂತೆ ಧ್ವಜದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ನಾಡಧ್ವಜ, ನಾಡಗೀತೆಯಂತೆಯೇ ಕನ್ನಡಿಗರ ಅಸ್ಮಿತೆ, ಸ್ವಾಭಿಮಾನದ ಪ್ರತೀಕ. ಯಾರನ್ನೋ ಮೆಚ್ಚಿಸಲು ಕನ್ನಡಿಗರಿಗೆ ದ್ರೋಹ ಬಗೆಯಬೇಡಿ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ನಾಡಧ್ವಜದಿಂದ ದೇಶಕ್ಕೆ ಯಾವ ಧಕ್ಕೆಯೂ ಬರುವುದಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಾವಿರ ವರ್ಷಗಳ ಇತಿಹಾಸಕ್ಕೆ ಇಂಬನ್ನು ನೀಡುವ ಅನನ್ಯ ಗುರುತು ಬೇಕಾಗಿದೆ. ಇದನ್ನು ನಾಡಧ್ವಜ ನೀಡುತ್ತದೆ. ನಮ್ಮದೇ ಆದ ಧ್ವಜವನ್ನು ನಿರಾಕರಿಸುವುದು ರಾಜ್ಯಕ್ಕೆ ಮಾಡುವ ಅವಮಾನ. ಸಿ.ಟಿ.ರವಿ ರಾಜ್ಯದ ಜನರ ಬಳಿ ಕ್ಷಮೆಯಾಚಿಸಬೇಕು.

-ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News