ನಕಲಿ ಮತ್ತು ಪೈರಸಿಯಿಂದ 2022ರ ವೇಳೆಗೆ 5.4 ದಶಲಕ್ಷ ಉದ್ಯೋಗ ನಷ್ಟ: ಉಲ್ಲಾಸ್ ಕಾಮತ್

Update: 2019-08-31 14:47 GMT

ಬೆಂಗಳೂರು, ಆ.31: ನಕಲಿ ಮತ್ತು ಪೈರಸಿಯಿಂದಾಗಿ ಜಾಗತಿಕ ಮಟ್ಟದಲ್ಲಿ 2013 ರಲ್ಲಿ 2 ರಿಂದ 2.6 ದಶಲಕ್ಷ ಉದ್ಯೋಗಗಳು ನಷ್ಟವಾಗಿವೆ ಮತ್ತು 2022ರ ವೇಳೆಗೆ 4.2 ರಿಂದ 5.4 ದಶಲಕ್ಷ ಉದ್ಯೋಗ ನಷ್ಟವಾಗುವ ನಿರೀಕ್ಷೆ ಇದೆ ಎಂದು ಎಫ್‌ಐಸಿಸಿಐ ರಾಜ್ಯ ಮಂಡಳಿ ಅಧ್ಯಕ್ಷ ಉಲ್ಲಾಸ್ ಕಾಮತ್ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಎಫ್‌ಐಸಿಸಿಐ ಕ್ಯಾಸ್ಕೇಡ್(ಕಮಿಟಿ ಎಗೆನೆಸ್ಟ್ ಸ್ಮಗ್ಲಿಂಗ್ ಅಂಡ್ ಕೌಂಟರ್‌ಫಿಟಿಂಗ್ ಆಕ್ಟಿವಿಟೀಸ್ ಡೆಸ್ಟ್ರಾಯಿಂಗ್ ದಿ ಎಕಾನಮಿ) ವತಿಯಿಂದ ಆಯೋಜಿಸಿದ್ದ 'ನಕಲಿ ಮತ್ತು ಕಳ್ಳಸಾಗಣೆ ವಿರುದ್ಧ ಸಂಪರ್ಕ, ಸಂವಹನ ಮತ್ತು ಸಮನ್ವಯ-ಬಲವರ್ಧನೆ' ಕುರಿತಾದ ವಿಚಾರ ಸಂಕಿರಣವನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಮೂಲಕ ಉದ್ಯೋಗ ನಷ್ಟದ ಪ್ರಮಾಣದಲ್ಲಿ ಶೇ.110 ರಷ್ಟು ಹೆಚ್ಚಳವಾಗಲಿದೆ. ನಕಲಿ ಉತ್ಪನ್ನಗಳ ಹಾವಳಿ ಮತ್ತು ಕಳ್ಳಸಾಗಣೆಯಂತಹ ಅಕ್ರಮ ವ್ಯವಹಾರಗಳು ಕೈಗಾರಿಕೆಗಳು, ಗ್ರಾಹಕರು, ಸರಕಾರ ಮತ್ತು ಆರ್ಥಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕತೆಯನ್ನು ಅಭಿವೃದ್ಧಿಪಡಿಸುವಲ್ಲಿ ಕಾನೂನು ಬದ್ಧ ಉದ್ಯಮದ ಹಕ್ಕುಗಳನ್ನು ಕಾಪಾಡುವ ಅಗತ್ಯವನ್ನು ಅರ್ಥಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಉಲ್ಲಾಸ್ ಕಾಮತ್ ಅಭಿಪ್ರಾಯಪಟ್ಟರು.

2015ರ ಎಫ್‌ಐಸಿಸಿಐ ಕ್ಯಾಸ್ಕೇಡ್ ವರದಿ ಪ್ರಕಾರ ಭಾರತ ಸರಕಾರ ಕೇವಲ ಏಳು ಉತ್ಪಾದನಾ ವಲಯಗಳ ಕಳ್ಳ ಮಾರುಕಟ್ಟೆಯ ಚಟುವಟಿಕೆಗಳಿಂದಾಗಿ ವಾರ್ಷಿಕ 39,239 ಕೋಟಿ ರೂ.ನಷ್ಟ ಅನುಭವಿಸುತ್ತಿದೆ ಎಂದು ಅಂದಾಜು ಮಾಡಿದೆ. ಇವುಗಳಲ್ಲಿ ಪ್ರಮುಖವಾಗಿ ತಂಬಾಕು ಉತ್ಪನ್ನಗಳ ನಕಲಿ ಮತ್ತು ಕಳ್ಳಸಾಗಣೆ ಹಾವಳಿಯಿಂದ ಸರಕಾರದ ಬೊಕ್ಕಸಕ್ಕೆ 9,139 ಕೋಟಿ ರೂ.ಗಳ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದರು.

ಅದೇ ರೀತಿ, ಮೊಬೈಲ್ ಫೋನ್‌ಗಳಿಂದ 6,705 ಕೋಟಿ ರೂ.ಮತ್ತು ಮದ್ಯದಿಂದ 6,309 ಕೋಟಿ ರೂ.ಗಳ ನಷ್ಟ ಉಂಟಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿರುವವರಿಗೆ ಹಣ ಬರುತ್ತಿರುವ ಎರಡನೇ ದೊಡ್ಡ ಹಣಕಾಸು ಮೂಲವಾಗಿದೆ ಎಂದು ಉಲ್ಲಾಸ್ ಕಾಮತ್ ತಿಳಿಸಿದರು.

ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶೆ ಪ್ರತಿಭಾ ಎಂ.ಸಿಂಗ್ ಮಾತನಾಡಿ, ಈ ಅಕ್ರಮ ವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಹಕರಲ್ಲಿ ಅದರಲ್ಲೂ ವಿಶೇಷವಾಗಿ ಯುವಜನರಿಗೆ ಶಿಕ್ಷಣ ನೀಡುವುದು, ಜಾಗೃತಿ ಮೂಡಿಸುವುದು ಸೇರಿದಂತೆ ಇನ್ನಿತರೆ ಅಭಿಯಾನಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಲಗೊಳಿಸಬೇಕಾದ ತುರ್ತು ಅಗತ್ಯತೆ ಇದೆ ಮತ್ತು ಈ ನಿಟ್ಟಿನಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಸಹಕಾರವನ್ನೂ ಪಡೆದುಕೊಳ್ಳಬೇಕಾಗಿದೆ ಎಂದು ಅವರು ಕರೆ ನೀಡಿದರು.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಕೆ.ರಮೇಶ್ ಮಾತನಾಡಿ, ನಕಲಿ ಉತ್ಪನ್ನ ಮತ್ತು ಕಳ್ಳಸಾಗಣೆಯಂತಹ ಅಕ್ರಮ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಿ ಉತ್ತಮ ವ್ಯವಹಾರದ ವಾತಾವರಣವನ್ನು ನಿರ್ಮಾಣ ಮಾಡುವ ಅಗತ್ಯವಿದೆ ಎಂದರು.

ನ್ಯಾ.ಮನಮೋಹನ್ ಸರಿನ್, ಜಮ್ಮು ಮತ್ತು ಕಾಶ್ಮೀರ ಹಾಗೂ ದಿಲ್ಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶ ಪಿ.ಸಿ.ಝಾ, ಕಾನೂನು ತಜ್ಞ ಡಾ.ಟಿ.ರಾಮಕೃಷ್ಣ ಮೊದಲಾದವರು ಈ ಅಕ್ರಮ ವ್ಯವಹಾರಗಳನ್ನು ತೊಡೆದುಹಾಕುವ ಅಗತ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News