ಡಿಸಿಎಂ ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2019-09-03 15:56 GMT

ಬೆಂಗಳೂರು, ಸೆ.3: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ಮಾಡಿದರು.

‘ಹಗರಣ ಮತ್ತು ಆಪರೇಷನ್ ಕಮಲ’ ರೂವಾರಿ ಅಶ್ವಥ್ ನಾರಾಯಣ್ ಮಾನವೀಯ ಮೌಲ್ಯಗಳನ್ನು ಮರೆತು ಹೋಗಿದ್ದಾರೆ. ಸ್ವತಃ ವೈದ್ಯರಾಗಿದ್ದರೂ ಜನರ ಮನಸ್ಸಿನ ಭಾವನೆಗಳನ್ನು ಅರಿಯದೇ ವಿಕೃತ ಮನಸ್ಸುಳ್ಳವರಾಗಿದ್ದಾರೆ ಎಂದು ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು.

ಆಪರೇಷನ್ ಕಮಲದ ಮುಖಾಂತರ 17 ಶಾಸಕರು ರಾಜೀನಾಮೆ ನೀಡಿದ್ದಾರೆ. ನೂರಾರು ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ಕಾಮಗಾರಿಯಾಗದೇ ಬಿಲ್ಲು ಸಹ ಪಾವತಿಯಾಗಿದೆ ಮತ್ತು ಹತ್ತು ಸಾವಿರ ಕೋಟಿ ರೂಪಾಯಿ ಟೆಂಡರ್ ಹಗರಣ ಮತ್ತು ಬಿಬಿಎಂಪಿ ಕಡತಗಳಿಗೆ ಬೆಂಕಿ ಹಾಕಿ ಸಾಕ್ಷಿ ನಾಶ ಮಾಡಲಾಗಿದೆ. ಇಂತಹ ಹಗರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಮನೋಹರ್ ಆಗ್ರಹಿಸಿದರು.

ಶಿವಕುಮಾರ್ ಅವರ ತಂದೆಯನ್ನು ನೆನದು ಭಾವನಾತ್ಮಕವಾಗಿ ಕಣ್ಣೀರು ಹಾಕಿದರು. ಆದರೆ, ಅಶ್ವಥ್ ನಾರಾಯಣ್, ಶಿವಕುಮಾರ್ ಬಗ್ಗೆ ಕೀಳುಮಟ್ಟದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರ ಬಗ್ಗೆ ವ್ಯಂಗ್ಯ ಮಾಡುವ ಬದಲು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲಿ ಮತ್ತು ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಲಿ ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಅಶ್ವಥ್ ನಾರಾಯಣ್ ಪ್ರತಿಕೃತಿಯನ್ನು ದಹಿಸಿ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜನಾರ್ದನ್, ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆನಂದ್, ಕೆಪಿಸಿಸಿ ವಕ್ತಾರ ಸಲೀಮ್, ಮುಖಂಡರಾದ ಇ.ಶೇಖರ್ ಆದಿತ್ಯ, ಹೇಮರಾಜು, ರವಿಶೇಖರ್, ನವೀನ್, ಮಹಿಳಾ ಕಾಂಗ್ರೆಸ್ ಆಶಾರಾಜು, ರಚನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News