ರಾಜ್ಯ ರಾಜಕಾರಣದ ಮೇಲೆ ಅಮಿತ್ ಶಾ ಹಸ್ತಕ್ಷೇಪ ಹೆಚ್ಚುತ್ತಿದೆ: ದಿನೇಶ್ ಗುಂಡೂರಾವ್

Update: 2019-09-04 12:33 GMT

ಬೆಂಗಳೂರು, ಸೆ.4: ಶಾಸಕ ಡಿ.ಕೆ.ಶಿವಕುಮಾರ್‌ರನ್ನು ಈಡಿ(ಜಾರಿ ನಿರ್ದೇಶನಾಲಯ) ಬಂಧಿಸಿರುವುದನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ನೇತೃತ್ವದಲ್ಲಿ ನಗರದ ವೌರ್ಯ ಸರ್ಕಲ್, ಬ್ರಿಗೇಡ್ ರಸ್ತೆ, ನವರಂಗ್ ವೃತ್ತ ಸೇರಿದಂತೆ ಹಲವು ಕಡೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಡಿ.ಕೆ.ಶಿವಕುಮಾರ್‌ರವರ ಬಂಧನದ ಹಿಂದೆ ಬಿಜೆಪಿಯ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯ ನೇರ ಹಸ್ತಕ್ಷೇಪವಿದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆ ಮಧ್ಯೆ ಟೈರ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಾಳು ಮಾಡುತ್ತಿದ್ದಾರೆ. ಇದರ ಭಾಗವಾಗಿ ದೇಶದ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್‌ನ್ನು ಹಣಿಯಲು ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇವತ್ತು ಡಿ.ಕೆ.ಶಿವಕುಮಾರ್ ಬಂಧಿಸಿದ್ದಾರೆ. ನಾಳೆ ನಮ್ಮನ್ನು ಬಂಧಿಸಲಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಬಿಡುಗಡೆಯಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲವೆಂದು ಕೈ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳ ವಿಚಾರಣೆಗೆ ಡಿ.ಕೆ.ಶಿವಕುಮಾರ್ ಪೂರಕವಾಗಿ ಸ್ಪಂದಿಸಿದ್ದಾರೆ. ಅಧಿಕಾರಿಗಳ ಪ್ರಶ್ನೆಗಳಿಗೆ ಸಮಚಿತ್ತದಿಂದಲೇ ಉತ್ತರಿಸಿದ್ದಾರೆ. ಇಷ್ಟಾಗಿಯೂ ಅವರನ್ನು ಬಂಧಿಸುವ ಅಗತ್ಯವೇನಿತ್ತು. ಇದೆಲ್ಲವೂ ಅಮಿತ್ ಶಾ ನಿರ್ದೇಶನದ ಮೇರೆಗೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆರೋಪಿಸಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ.ವಾಸುದೇವ ರೆಡ್ಡಿ ನೇತೃತ್ವದಲ್ಲಿ ಬೊಮ್ಮನಹಳ್ಳಿಯಲ್ಲಿ ಹಾಗೂ ಬಿಬಿಎಂಪಿ ಸದಸ್ಯ ಎ.ಆರ್.ಜಾಕೀರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆನಂದರಾವ್ ವೃತ್ತದಲ್ಲಿ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಯಾವ ಅಧಿಕಾರವೂ ಇಲ್ಲ. ಎಲ್ಲವನ್ನು ಬಿಜೆಪಿ ವರಿಷ್ಠ ಅಮಿತ್ ಶಾ ನಿಭಾಯಿಸುತ್ತಿದ್ದಾರೆ. ಕೇವಲ ಅನುಕಂಪ ಗಿಟ್ಟಿಸುವುದಕ್ಕಾಗಿ ಡಿ.ಕೆ.ಶಿವಕುಮಾರ್ ಪರವಾಗಿ ಮಾತನಾಡಲು ಮುಂದಾಗಿದ್ದಾರೆ. ಆದರೆ, ಅವರಿಗೆ ರಾಜ್ಯದ ಮೇಲೆ ಯಾವುದೇ ಹಿಡಿತವಿಲ್ಲ. ದೇಶಾದ್ಯಂತ ಅಮಿತ್ ಶಾರವರ ಸರ್ವಾಧಿಕಾರಿ ಧೋರಣೆ ಮುಂದುವರೆದಿದೆ.

-ದಿನೇಶ್‌ ಗುಂಡೂರಾವ್, ಅಧ್ಯಕ್ಷ, ಕೆಪಿಸಿಸಿ

ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌ನ್ನು ಈಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ನಗರದ ಸುಮ್ಮನಹಳ್ಳಿಯ ಬಳಿ ದುಷ್ಕರ್ಮಿಗಳು ಬಿಎಂಟಿಸಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬಸ್‌ಗೆ ತಗುಲಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಾಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News