ಮಗುವಿನ ಸಾವಿಗೆ ಬಿಬಿಎಂಪಿಯೇ ಹೊಣೆ: ಆಮ್ ಆದ್ಮಿ ಬೆಂಗಳೂರು ಜಿಲ್ಲಾಧ್ಯಕ್ಷ ಮೋಹನ್ ದಾಸರಿ

Update: 2019-09-04 16:29 GMT

ಬೆಂಗಳೂರು, ಸೆ.4: ಗೋರಿಪಾಳ್ಯ ಪಾದರಾಯನಪುರದಲ್ಲಿ ಐದು ವರ್ಷದ ಮುಹಮ್ಮದ್ ಝೈನ್ ಎಂಬ ಬಾಲಕ ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ರೀತಿ ರಾಜಕಾಲುವೆಗೆ ಬಿದ್ದು ಪ್ರಾಣ ಕಳೆದುಕೊಂಡ ಪ್ರಕರಣ ಇದೇ ಮೊದಲೇನೂ ಅಲ್ಲ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಜಿಲ್ಲಾ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ. 

2018ರ ಜನವರಿ ತಿಂಗಳಿನಲ್ಲಿಯೂ ಮೂರು ವರ್ಷದ ಬಾಲಕನೊಬ್ಬ ದೊಡ್ಡಬೊಮ್ಮಸಂದ್ರ ಬಳಿಯ ವಿದ್ಯಾರಣ್ಯಪುರದಲ್ಲಿ ರಾಜಕಾಲುವೆಗೆ ಬಿದ್ದು ಅಸುನೀಗಿದ್ದ ಘಟನೆ ನಡೆದಿತ್ತು. ಆಗಲೇ ಬಿಬಿಎಂಪಿ ಎಚ್ಚೆತ್ತುಕೊಂಡು ಜನವಸತಿ ಪ್ರದೇಶಗಳಲ್ಲಿರುವ ರಾಜಕಾಲುವೆಗಳಿಗೆ ತಡೆಗೋಡೆಗಳನ್ನು ನಿರ್ಮಿಸಬೇಕಿತ್ತು. ಆದರೆ ಬಿಬಿಎಂಪಿಯ ಮೈಗಳ್ಳತನದಿಂದ ಮತ್ತೊಂದು ಮಗು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಾಲಕ ಮುಹಮ್ಮದ್ ಝೈನ್ ಸಾವಿನ ಹೊಣೆಯನ್ನು ಬಿಬಿಎಂಪಿ ಅಧಿಕಾರಿಗಳು ಮತ್ತು ಕಾರ್ಪೋರೇಟರ್‌ಗಳು ಹೊತ್ತುಕೊಳ್ಳಬೇಕು. ಗೋರಿಪಾಳ್ಯ ಸೇರಿದಂತೆ ತಮ್ಮ ವಾರ್ಡ್‌ನ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕೆಲಸ ಮಾಡಿಸುವುದರಲ್ಲಿ ವಿಫಲವಾಗಿರುವ ಜೆ.ಜೆ.ನಗರ ಕಾರ್ಪೋರೇಟರ್ ಸೀಮಾ ಅಲ್ತಾಫ್ ಖಾನ್ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನಾದರೂ ಬಿಬಿಎಂಪಿ ಎಚ್ಚೆತ್ತುಕೊಂಡು ಮುಂದೆ ಇಂತಹ ಘಟನೆಗಳು ನಡೆಯದಂತೆ ಜನವಸತಿ ಪ್ರದೇಶದಲ್ಲಿ ಶೀಘ್ರವೇ ರಾಜಕಾಲುವೆಗಳನ್ನು ದುರಸ್ತಿ ಮಾಡಿ, ಎತ್ತರದ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಮೋಹನ್ ದಾಸರಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News