ದೇಶದಲ್ಲಿ ಏಕಚಕ್ರಾಧಿಪತ್ಯ ಸ್ಥಾಪನೆ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2019-09-05 12:40 GMT

ಬೆಂಗಳೂರು, ಸೆ.5: ದೇಶದಲ್ಲಿ ಅಧಿಕಾರದಲ್ಲಿರುವವರು ಏಕಚಕ್ರಾಧಿಪತ್ಯ ಸ್ಥಾಪಿಸುತ್ತಿರುವ ಸಂದರ್ಭದಲ್ಲಿ ಸಮತಾ ನಾಡನ್ನು ಕಟ್ಟಲು ಜಾತ್ಯತೀತ, ಪ್ರಗತಿಪರರ ಜವಾಬ್ದಾರಿ ಹೆಚ್ಚಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಗರದ ಗೌರಿ ಲಂಕೇಶ್ ಸಮಾಧಿಯ ಬಳಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಬಹುತ್ವಗಳನ್ನು ಅಮಾನ್ಯಗೊಳಿಸುತ್ತಾ ಏಕ ಸಂಸ್ಕೃತಿಯ ಏಕಚಕ್ರಾಧಿಪತ್ಯವನ್ನು ಸ್ಥಾಪಿಸುವ ಸರ್ವಾಧಿಕಾರಿ ಧೋರಣೆಯ ಬೆಳವಣಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವೇಗ ಪಡೆದಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಜಾತ್ಯತೀತತೆಯ ಹತ್ಯೆಯಾಗಿದೆ. ದೇಶದಲ್ಲಿ ಕೋಮುವಾದಿಗಳ ಹಾವಳಿ ಅಧಿಕವಾಗಿದ್ದು, ಪ್ರಗತಿಪರರನ್ನು, ಚಿಂತಕರನ್ನು ಕೊಲ್ಲಲು ಪ್ರೇರೇಪಿಸುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನದ ಆಶಯಗಳ ಉಳಿವಿಗಾಗಿ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಬರಗೂರು ತಿಳಿಸಿದರು.

ಇತ್ತೀಚಿಗೆ ದೇಶದಲ್ಲಾಗುತ್ತಿರುವ ಬೆಳವಣಿಗೆಗಳು ಆತಂಕವನ್ನುಂಟು ಮಾಡುತ್ತಿವೆ. ಈ ಬೆಳವಣಿಗೆಯು ಏಕ ದೇಶದ ಕಡೆಗೆ ಸಾಗುತ್ತಿವೆ. ಒಂದೇ ದೇಶ, ಒಂದೇ ಧರ್ಮ, ಒಂದೇ ಪಡಿತರ ಚೀಟಿ ಎಂಬ ಹೆಸರಿನಲ್ಲಿ ಒಂದೇ ಮಾಡಲು ಹವಹಣಿಸುತ್ತಿದೆ. ಆದರೆ, ಗೌರಿಯ ಆಶಯ ಬಹುತ್ವ ಭಾರತ ನಿರ್ಮಾಣವಾಗಿತ್ತು. ಈ ಕಡೆಗೆ ಪ್ರಭುತ್ವದ ವಿರುದ್ಧವಾಗಿ ನಾವು ವಿರುದ್ಧ ದಿಕ್ಕಿನಲ್ಲಿ ಸಾಗಬೇಕಿದೆ ಎಂದರು. ದೇಶದಲ್ಲಿ ಸಮೂಹ ಸನ್ನಿ ಆವರಿಸಿದೆ. ಇದನ್ನು ಹೊಡೆದು ಓಡಿಸಿ, ಸಮೂಹ ಪ್ರಕ್ರಿಯೆ ಮೂಡಿಸಬೇಕಿದೆ. ಸಮಾನತೆ, ಸೌರ್ಹಾದತೆಯನ್ನು ಕಾಣಬೇಕಿದೆ. ಸಮತಾ ಭಾರತವನ್ನು ಮುಗಿಸಿ ಸ್ವಚ್ಛ ಭಾರತ ಮಾಡಲು ಮುಂದಾಗಿದ್ದಾರೆ. ಜಾತಿವಾದವನ್ನು, ಮೂಲಭೂತ ವಾದವನ್ನು ಕಟುವಾಗಿ ವಿರೋಧಿಸಬೇಕಿದೆ. ಸಾಂಸ್ಕೃತಿಕ ವಿರೋಧದ ಬಗ್ಗೆ ಮರು ಚಿಂತನೆ ಮಾಡಬೇಕಿದೆ ಎಂದು ಬರಗೂರು ನುಡಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ದೇಶದಲ್ಲಿ ಏಕಚಕ್ರಾಧಿಪತ್ಯವಿದೆ. ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದ್ದು, ಬೇರೆಯವರು ಧ್ವನಿ ಎತ್ತಲಾಗದ ಸ್ಥಿತಿಯಿದೆ. ಹೀಗಾಗಿ, ನಾಯಕರೇ ಇಲ್ಲದಂತಹ ಸಂದರ್ಭ ಬಂದಿದೆ. ಪೂರ್ಣ ಬಹುಮತವಿರುವುದರಿಂದ ಇಂದಿನ ಸರಕಾರ ಡಿಕ್ಟೇಟರ್ ಆಗಿ ಕೆಲಸ ಮಾಡುತ್ತಿದ್ದು, ಪ್ರಜಾಪ್ರಭುತ್ವ ಎಂಬುದು ಕಣ್ಮರೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದು ಮಾಡಿತು. ಜನರ ಅಭಿಪ್ರಾಯ ಪಡೆಯದೇ, ಅಲ್ಲಿನ ನಿವಾಸಿಗಳಿಗೆ ವಿಷಯ ತಿಳಿಸದೇ ಏಕಾಏಕಿ ಮಿಲಿಟರಿ ಸಹಾಯದಿಂದ ಒಂದು ರಾಜ್ಯವನ್ನು ವಿಭಜನೆ ಮಾಡಿದರು. ಇಲ್ಲಿ ಪ್ರಜಾಪ್ರಭುತ್ವ ಕೊಲೆಯಾಗಿದೆ. ಹೀಗಾಗಿ, ದೇಶದ ಭವಿಷ್ಯ ಕತ್ತಲೆ ಕೋಣೆಯಲ್ಲಿದ್ದು, ಪ್ರಜಾಪ್ರಭುತ್ವ, ರಾಜ್ಯಾಂಗ ಉಳಿವಿಗಾಗಿ ಎಲ್ಲರೂ ಸಂಘಟಿತರಾಗಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಲ್.ಅಶೋಕ್, ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್, ಗೌರಿ ಟ್ರಸ್ಟ್‌ನ ನಗರಿ ಬಾಬಯ್ಯ, ಜನಶಕ್ತಿಯ ಡಾ.ವಾಸು, ಸಾಹಿತಿ ಯೋಗೇಶ್ ಮಾಸ್ಟರ್ ಹಾಗೂ ಶಿವಸುಂದರ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News