ಗಾಂಧಿಯಂತೆ, ಗೌರಿಗೂ ನ್ಯಾಯ ದೊರೆತಿಲ್ಲ: ಡಾ.ಕನ್ಹಯ್ಯ ಕುಮಾರ್

Update: 2019-09-05 14:48 GMT

ಬೆಂಗಳೂರು, ಸೆ.5: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಂತೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದ್ದು, ಈ ಇಬ್ಬರಿಗೂ ನ್ಯಾಯ ದೊರೆತಿಲ್ಲ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಡಾ.ಕನ್ಹಯ್ಯ ಕುಮಾರ್ ಹೇಳಿದ್ದಾರೆ.

ಗುರುವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಗೌರಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗೌರಿ ನೆನಪು ಹಾಗೂ ಎ.ಕೆ.ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಮತ್ತು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಾಂಧಿ ಅವರನ್ನು ಕೊಲೆಗೈದ ದ್ರೋಹಿ ಗೋಡ್ಸೆಯನ್ನು ಜೈಲಿಗೆ ಕಳುಹಿಸಿದರು. ಇದೀಗ ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ. ಇದರಿಂದ ಹೆಚ್ಚಿನ ಬದಲಾವಣೆ ಆಗಿಲ್ಲ. ಆದರೆ, ಅವರು ಕೊಲೆಗೈದವರ ಸಿದ್ಧಾಂತಗಳನ್ನು ನಾಶ ಮಾಡಿದರೆ, ಮಾತ್ರ ಈ ಇಬ್ಬರ ಸಾವಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ನುಡಿದರು. ಮಹಾತ್ಮ ಗಾಂಧಿಯನ್ನು ಕೊಂದವರನ್ನು ಸಮರ್ಥಿಸುವವರು ಇಂದು ಆಡಳಿತದಲ್ಲಿದ್ದಾರೆ. ಗೋಡ್ಸೆಯ ಭಾವಚಿತ್ರವನ್ನು ಸಂಸತ್ತಿನಲ್ಲಿಡುತ್ತಾರೆ. ಅಲ್ಲದೆ, ಸೇತುವೆಗಳಿಗೆ ಹೆಸರು ನಾಮಕರಣ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿದ್ದೇವೆ ಅಂದರೆ ಯಾರಿಗೆ ನ್ಯಾಯ ಸಿಗುತ್ತಿದೆ ಎಂದು ನಾವು ನೋಡಬೇಕಿದೆ ಎಂದರು.

ಗೌರಿ ಲಂಕೇಶ್ ಅವರು ನನಗೆ ತಾಯಿ ಇದ್ದಂತೆ, ಇಲ್ಲಿ ಬಂದು ನಿಂತಿರುವ ಹಿಂದೆಯೂ ಅವರ ಪಾತ್ರ ಬಹುದೊಡ್ಡದು. ಒಮ್ಮೆ ಅವರು ನನಗೆ ಪತ್ರವೊಂದನ್ನು ಬರೆಯುವ ಮೂಲಕ ನ್ಯಾಯ, ಸಮಾನತೆ ಕಡೆ ಇರುವಂತೆ ಪ್ರೇರೇಪಿಸಿದರು.

ಭಾರತವು ವೈವಿದ್ಯತೆಯಿಂದ ಕೂಡಿದ್ದು, ಜನರ ಮನಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದಾಗಿದೆ. ಆದರೆ, ನಾವು ಜನ ಬೆಂಬಲ ಪಡೆದಾಗಲೇ ಸೈದ್ಧಾಂತಿಕ ಹೋರಾಟ ಕಟ್ಟಲು ಸಾಧ್ಯವಾಗುತ್ತದೆ. ಈ ನಮ್ಮ ಹೋರಾಟ ತಪ್ಪುಗಳನ್ನು ಸರಿಪಡಿಸಲು, ಕೋಮುವಾದದ ವಿರುದ್ಧ ಎಂದ ಅವರು, ಇಂದು ದೇಶದ ಭಾವುಟ ಹಾರಿಸಿದ ಸಿದ್ಧಾಂತವೇ ಬೇರೆ ಆಗಿದೆ. ಅವರು ಸಂವಿಧಾನ ನಾಶ ಮಾಡುವ ಕನಸು ಕಂಡಿದ್ದಾರೆ ಎಂದು ಹೇಳಿದರು.

ನಮ್ಮ ಜನರು ಇಂದು ಒಂದು ಪಕ್ಷಕ್ಕೆ ಬಹುಮತ ನೀಡಿದ್ದರಿಂದ ಅದು ದೊಡ್ಡ ಪಕ್ಷವಾಗಿದೆ. ನಾಳೆ ಅದೇ ಜನ ಮತ್ತೊಂದು ಪಕ್ಷಕ್ಕೆ ಬಹುಮತ ನೀಡಿದರೆ ಅದು ದೊಡ್ಡದಾಗುತ್ತದೆ. ಆದರೆ, ನಾವು ಜನ ಬೆಂಬಲ ಪಡೆದಾಗ ನಾವು ದೊಡ್ಡವರಾಗುತ್ತೇವೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು. ಆಗ ಮಾತ್ರ ಎದುರಾಳಿಗಳನ್ನು ಎದುರಿಸಲು ಸಾಧ್ಯ ಎಂದು ನುಡಿದರು.

ಗೌರಿ ಲಂಕೇಶ್ ಕುರಿತ ಪುಸ್ತಕದ ಬಗ್ಗೆ ಸಾಹಿತಿ ಕೆ.ಶರೀಫಾ ಮಾತನಾಡಿ, ಸಮತೂಕದ ಚಿಂತನೆಗಳು, ಗಂಭೀರವಾದ ವಿಷಯಗಳು ಕೃತಿಯಲ್ಲಿ ಅಡಕವಾಗಿವೆ. ಗೌರಿ ಲಂಕೇಶ್ ನಂಬಿಕೊಂಡು ಬಂದ ತತ್ವ-ಆದರ್ಶಗಳಾದ ಸಮಾನತೆ, ಸೌಹಾರ್ದತೆಯ ಅಂಶಗಳನ್ನು ಇಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.

ಕೃತಿಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಹಾಗೂ ಅವರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ ನಡೆಸಬೇಕಾದ ಹೋರಾಟದ ಕುರಿತು ಬರೆದಿದ್ದಾರೆ. ಸಮ ಸಮಾಜದ ಕನಸಿನ ಆಶಯಗಳನ್ನು ಕೃತಿಯಲ್ಲಿ ವ್ಯಕ್ತವಾಗಿದೆ ಎಂದ ಅವರು, ಗೌರಿ ಲಂಕೇಶ್ ಸಾವಿನ ಬಳಿಕ ಲಿಂಗ, ಜಾತಿ, ಧರ್ಮ, ಪ್ರದೇಶದ ಗಡಿಗಳನ್ನು ಮೀರಿ ಎಲ್ಲರ ಮನೆಯ ಮಗಳಾಗಿ ಬೆಳಗಿದಳು ಎಂದು ನುಡಿದರು.

ಗೌರಿ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಎ.ಕೆ.ಸುಬ್ಬಯ್ಯ ಅವರ ಬದುಕಿನುದ್ದಕ್ಕೂ ನಡೆಸಿದ ಹೋರಾಟದಲ್ಲಿ ಬುದ್ಧನ ತಾತ್ವಿಕತೆ ಬೆಸೆದುಕೊಂಡಿತ್ತು. ಅವರಲ್ಲಿ ಬುದ್ಧನ ಬೆಳಕು ಕಾಣುತ್ತಿತ್ತು. ಸುಬ್ಬಯ್ಯ ಅವರು ಕಾಯಿಲೆಯಿಂದ ಬಳಲುತ್ತಿದ್ದರೂ ಎಂದೂ ಹೋರಾಟ, ಚಳವಳಿಯಿಂದ ಹಿಂದಕ್ಕೆ ಹೆಜ್ಜೆಯಿಡಲಿಲ್ಲ ಎಂದರು.

ಸುಬ್ಬಯ್ಯ ಅವರು ಬರಹಗಾರ, ಹೋರಾಟಗಾರ, ರಾಜಕಾರಣಿ ಹೀಗೆ ಭಿನ್ನವಾದ ನೆಲೆಯಲ್ಲಿ ಹಿಡಿತ ಸಾಧಿಸಿದ್ದರು. ಅಲ್ಲದೆ, ಪರಿಸರವಾದದಲ್ಲಿಯೂ ಪ್ರಖರತೆಯನ್ನು ಬೆಳೆಸಿಕೊಂಡಿದ್ದರು. ಅವರು ಕೊನೆ ಕ್ಷಣದಲ್ಲಿಯೂ ಸ್ವಾಭಿಮಾನ, ಘನತೆ ಮೆರೆದರು. ಅವರ ವಿಚಾರಧಾರೆಗಳು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ಪುತ್ರಿ ಈಶಾ, ಪ್ರಾಧ್ಯಾಪಕ ಹುಲಿಕುಂಟೆ ಮೂರ್ತಿ, ಸುಬ್ಬಯ್ಯ ಅವರ ಪುತ್ರ ಎ.ಎಸ್.ಪೊನ್ನಣ್ಣ ಸೇರಿದಂತೆ ಮತ್ತಿತರರಿದ್ದರು.

ದೇಶದಲ್ಲಿಂದು ಕಾಂಗ್ರೆಸ್-ಬಿಜೆಪಿ ನಡುವಿನ ಹೋರಾಟವಲ್ಲ. ನ್ಯಾಯ-ಅನ್ಯಾಯದ ವಿರುದ್ಧ ಚಳವಳಿಯಾಗಿದೆ. ಅದೇ ವೇಳೆ ಮಾನವೀಯತೆ-ಕ್ರೌರ್ಯದ ನಡುವಿನ ಸಂಘರ್ಷವಾಗಿದೆ. ಗೌರಿ ಲಂಕೇಶ್, ಕಲಬುರ್ಗಿ, ಪನ್ಸಾರೆ ಅವರನ್ನು ಯಾರೂ ಗುರುತಿಸಲಿಲ್ಲ. ಆದರೆ, ಕೊಲೆಯಾದ ಬಳಿಕ ದೇಶವೇ ಅವರನ್ನು ಸ್ಮರಿಸಿತು. ನಮ್ಮ ಸಂಖ್ಯೆ ಚಿಕ್ಕದಾಗಿರಬಹುದು. ಆದರೆ, ನಮ್ಮ ಗುರಿ ದೊಡ್ಡದು.

-ಡಾ.ಕನ್ಹಯ್ಯ ಕುಮಾರ್, ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ

ಎ.ಕೆ.ಸುಬ್ಬಯ್ಯ ಅವರು ಅನ್ಯಾಯವನ್ನು ಕಂಡಾಗ ಅದನ್ನು ಸಹಿಸುತ್ತಿರಲಿಲ್ಲ. ಗೌರಿ ಲಂಕೇಶ್‌ರ ಹತ್ಯೆಯಾದ ಸಂದರ್ಭದಲ್ಲಿ ಅವರು ತೀವ್ರವಾಗಿ ವಿಚಲಿತರಾಗಿದ್ದರು. ಅದೇ ಅವರ ಆರೋಗ್ಯದ ಸಮಸ್ಯೆ ಬಿಗಡಾಯಿಸಲು ಒಂದು ರೀತಿಯಲ್ಲಿ ಕಾರಣವೂ ಆಯಿತು. ಅವರ ವಿಚಾರಗಳನ್ನು ಎಂದಿಗೂ ಸಾಯಲು ಬಿಡಲ್ಲ. ಅವರು ನಂಬಿದ ಸಿದ್ಧಾಂತಗಳನ್ನು ಮುಂದುವರಿಸಲು ನಾನು ಹಾಗೂ ನಮ್ಮ ಕುಟುಂಬ ಎಲ್ಲ ರೀತಿಯಲ್ಲಿಯೂ ಸಹಕರಿಸುತ್ತದೆ.

-ಎ.ಎಸ್.ಪೊನ್ನಣ್ಣ, ಎ.ಕೆ.ಸುಬ್ಬಯ್ಯರ ಪುತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News