ಉದ್ಯೋಗಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿಗೆ ಚಿಂತನೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-09-05 15:51 GMT

ಬೆಂಗಳೂರು, ಸೆ. 5: ‘ಉನ್ನತ ಶಿಕ್ಷಣವನ್ನು ಉತ್ತೇಜಿಸುವ ದೃಷ್ಟಿಯಿಂದ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಉದ್ಯೋಗಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಉನ್ನತ ಶಿಕ್ಷಣ ಇಲಾಖೆ, ಸರಕಾರಿ ಕಾಲೇಜುಗಳ ಪ್ರಾಧ್ಯಾಪಕರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲೇ ಉನ್ನತ ಶಿಕ್ಷಣಕ್ಕೆ ಕರ್ನಾಟಕದಲ್ಲಿ ಶೇ.27.8ರಷ್ಟು ಪ್ರವೇಶಗಳು ದಾಖಲಾಗುತ್ತವೆ.

2040ರ ವೇಳೆಗೆ ಇದರ ಪ್ರಮಾಣ ಶೇ.40ರಷ್ಟು ತಲುಪಬೇಕೆಂಬ ಗುರಿಯನ್ನು ಹೊಂದಲಾಗಿದೆ. ಉನ್ನತ ಶಿಕ್ಷಣಕ್ಕೆ ಇಂದು ಪ್ರವೇಶಾತಿಗಳು ಕಡಿಮೆಯಾಗುತ್ತಿವೆ. ಕರ್ನಾಟಕದಲ್ಲಿ ವಿಫುಲ ಅವಕಾಶಗಳಿರುವುದರಿಂದ ನಾವು ಉನ್ನತ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಹೀಗಾಗಿ ಉದ್ಯೋಗಾಧಾರಿತ ಶಿಕ್ಷಣ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಭರವಸೆ, ಆತ್ಮಸ್ಥೈರ್ಯ ಹೆಚ್ಚಿಸಲು ಉನ್ನತ ಶಿಕ್ಷಣದಿಂದ ಸಾಧ್ಯ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದ ಅವರು, ಉನ್ನತ ಶಿಕ್ಷಣಕ್ಕೆ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ತಿಳಿಸಿದರು.

ಶಿಕ್ಷಕರ ಯಾವುದೇ ಬೇಡಿಕೆಗಳಿದ್ದರೂ ಸರಕಾರ ಸಕಾರಾತ್ಮಕವಾಗಿ ಪರಿಗಣಿಸುತ್ತದೆ. ಅದರ ಬಗ್ಗೆ ಶಿಕ್ಷಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅಭಯ ನೀಡಿದ ಯಡಿಯೂರಪ್ಪ, ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಅದ್ಭುತವಾದ ಜೀವನ ರೂಪಿಸುವ ಕಾರ್ಯ ಶಿಕ್ಷಕರ ಮೇಲಿದೆ. ಜ್ಞಾನ ಮತ್ತು ನೈತಿಕತೆಯನ್ನು ತುಂಬುವ ಕೆಲಸವನ್ನು ಶಿಕ್ಷಕರ ಮಾಡಬೇಕೆಂದು ಸೂಚಿಸಿದರು.

ಭ್ರಷ್ಟಾಚಾರ ಮುಕ್ತ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಸಿಎಂ ಡಾ.ಅಶ್ವಥ್ ನಾರಾಯಣ, ಉನ್ನತ ಶಿಕ್ಷಣ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತ, ಅಧ್ಯಾಪಕರು, ಪ್ರಾಂಶುಪಾಲರ ನೇಮಕಾತಿ, ವರ್ಗಾವಣೆಯಲ್ಲಿ ಪಾರದರ್ಶಕತೆ ತರಲಾಗುವುದು. ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಕುಲಪತಿಗಳ ನೇಮಕಾತಿ ವಿಚಾರದಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಗುರುಗಳಿಗೆ ಗೌರವ ಸಲ್ಲಿಸುವ ಈ ದಿನ ಪವಿತ್ರವಾದ ದಿನ. ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವುದು ಶಿಕ್ಷಕರ ಜವಾಬ್ದಾರಿ. ಅವರ ಮೇಲೆ ಜವಾಬ್ದಾರಿ ಇದ್ದು, ಅದನ್ನು ನಿರ್ವಹಿಸಬೇಕಿದೆ ಎಂದರು.

ವಿಶ್ವ ವಿದ್ಯಾನಿಲಯಗಳು ಕೇವಲ ಪದವಿ ನೀಡಲು ಸೀಮಿತವಾಗದೆ ಪರಿಪೂರ್ಣತೆ ಕೊಡುವ ಕೇಂದ್ರವಾಗಬೇಕು. ಅತಿವೃಷ್ಟಿಗೆ ಒಳಗಾದ ಪ್ರದೇಶಗಳಲ್ಲೂ ಉತ್ತಮ ಶಿಕ್ಷಣ ನೀಡುವ ಬಗ್ಗೆ ಗಮನ ಹರಿಸಬೇಕು ಎಂದು ಡಾ.ಅಶ್ವಥ್ ನಾರಾಯಣ ಇದೇ ವೇಳೆ ಸಲಹೆ ಮಾಡಿದರು.

ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಹಿಂದಿನ ರಾಜ್ಯಪಾಲರ ಅವಧಿಯಲ್ಲಿ ಕುಲಪತಿಗಳ ನೇಮಕಾತಿಗೆ 3 ಕೋಟಿ ರೂ, 2 ಕೋಟಿ ರೂ. ಹಾಗೂ ವರ್ಗಾವಣೆಗೆ ಇಂತಿಷ್ಟು ಎಂದು ಹಣ ನಿಗದಿ ಮಾಡಿದ್ದರು ಎಂದು ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.

ಉಪಕುಲಪತಿಗಳು ನೇಮಕಾತಿ, ವರ್ಗಾವಣೆಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಿದರೆ ಯಾವ ವಿವಿಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಉನ್ನತ ಶಿಕ್ಷಣ ಇಲಾಖೆ ಭ್ರಷ್ಟಾಚಾರ ಮುಕ್ತ ಎಂದು ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.

421 ಸರಕಾರಿ ಕಾಲೇಜುಗಳಲ್ಲಿ 415 ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಆದುದರಿಂದ ಸರಕಾರ ಕೂಡಲೇ ಸರಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಅಧ್ಯಾಪಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಪರಿಷತ್ ಸದಸ್ಯ ಆ.ದೇವೇಗೌಡ, ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಶಿಕ್ಷಣ ಇಲಾಖೆ ಆಯುಕ್ತೆ ಡಾ.ಮಂಜುಳ, ಬೆಂ.ವಿವಿ ಉಪಕುಲಪತಿ ವೇಣುಗೋಪಾಲ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ತಳವಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News