ಪರಿವರ್ತನಾ ಧರ್ಮ

Update: 2019-09-05 18:30 GMT

ಬಸವಣ್ಣನವರು ಬದುಕಿನ ಎಲ್ಲ ರಂಗಗಳಲ್ಲೂ ಪರಿವರ್ತನೆ ಬಯಸಿದರು. ಪರಿವರ್ತನೆ ಎನ್ನುವುದು ಯಾವುದೇ ಒಂದು ಭಾಗದಿಂದ ಆರಂಭವಾಗುವಂಥದ್ದಲ್ಲ. ಮಾನವರು ನೆಮ್ಮದಿ ಮತ್ತು ಮರ್ಯಾದೆಯಿಂದ ಬಾಳುವಂಥ ವಾತಾವರಣ ಸೃಷ್ಟಿಸಲು ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯಾಗಬೇಕಾಗುತ್ತದೆ. ಧರ್ಮ, ದರ್ಶನ, ಸಮಾಜ, ಅರ್ಥವ್ಯವಸ್ಥೆ, ಆಡಳಿತ ಹೀಗೆ ಎಲ್ಲದರಲ್ಲೂ ಅವರು ಬದಲಾವಣೆ ತರಲು ಪ್ರಯತ್ನಿಸಿದರು. ಇಂಥ ಪ್ರಯತ್ನಗಳಿಗಾಗಿ ಜನಸಮುದಾಯ ಹಾತೊರೆಯುತ್ತಿತ್ತು. ನಮ್ಮ ಸಮಾಜದಲ್ಲಿನ ಕಷ್ಟಜೀವಿಗಳು ಶತಮಾನಗಳಿಂದ ಇಂಥ ಬದಲಾವಣೆಗಾಗಿ ಕಾಯುತ್ತಿದ್ದರು.

ಕಳೆದ ಮೂರು ಸಾವಿರ ವರ್ಷಗಳಿಂದ ಲೋಕಾಯತರು, ಜೈನರು ಮತ್ತು ಬೌದ್ಧರು ಈ ತೆರನಾದ ಬದಲಾವಣೆಗೆ ಪ್ರಯತ್ನ ಮಾಡಿದರು. ಆದರೆ ಮನುವಾದಿಗಳು ಲೋಕಾಯತರ ಸಾಹಿತ್ಯವನ್ನು ಸುಟ್ಟು ಅವರ ಕೊಲೆ ಮಾಡಿದರು. ಮಹಾವೀರನ ನಂತರ ಕೆಲವೇ ದಶಕಗಳಲ್ಲಿ ಜೈನಧರ್ಮ ವೈದಿಕ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡಿತು. ನಂತರ ಬಂದ ಬೌದ್ಧಧರ್ಮ ಅವೈದಿಕ ವ್ಯವಸ್ಥೆಯನ್ನು ತರಲು ಪ್ರಯತ್ನಿಸಿತು.

2600 ವರ್ಷಗಳ ಹಿಂದೆ ಭಗವಾನ ಬುದ್ಧ ಇಂಥ ಯೋಚನೆ ಮಾಡಿದ್ದು ಸಾಮಾನ್ಯ ಮಾತಲ್ಲ. ಬಹುಶಃ ಬುದ್ಧನಿಲ್ಲದೆ ಬಸವಣ್ಣ ದೊರಕುವುದು ಕಠಿಣವಾಗಿತ್ತು. ಏಕೆಂದರೆ ಬೌದ್ಧಧರ್ಮ ತ್ರಿಶರಣ ಧರ್ಮವಾಗಿದೆ. ಬಸವಧರ್ಮವೂ ತ್ರಿಶರಣ ಧರ್ಮವಾಗಿದೆ. ಬೌದ್ಧಧರ್ಮ ಬುದ್ಧ (ಅರಿವು), ಧಮ್ಮ (ಧರ್ಮ) ಮತ್ತು ಸಂಘಕ್ಕೆ ಶರಣೆನ್ನುತ್ತದೆ. ಬಸವಧರ್ಮ ಕೂಡ ಗುರು (ಅರಿವು), ಲಿಂಗ (ಧರ್ಮ) ಮತ್ತು ಜಂಗಮ (ಸಂಘ)ಕ್ಕೆ ಶರಣನೆನ್ನುತ್ತದೆ.

ಆದರೆ ಮನುವಾದಿ ಸಮಾಜವು ವರ್ಣಭೇದ, ವರ್ಗಭೇದ, ಜಾತಿಭೇದ ಮತ್ತು ಲಿಂಗಭೇದಗಳಿಂದ ಕೂಡಿದೆ. ಅಷ್ಟೇ ಅಲ್ಲದೆ ವೇಶ್ಯಾವಾಟಿಕೆಯೂ ಆ ಸಮಾಜದ ಒಂದು ಭಾಗವಾಗಿದೆ. ನಮ್ಮ ಮಹಾಕಾವ್ಯಗಳು ಅಷ್ಟಾದಶ ವರ್ಣನೆಗಳಿಂದ ಕೂಡಿವೆ. ಅವುಗಳಲ್ಲಿ ಸೂಳೆಗೇರಿಯ ವರ್ಣನೆಯೂ ಒಂದಾಗಿದೆ! ನವಸಮಾಜದ ನಿರ್ಮಾಪಕರಾದ ಬಸವಣ್ಣನವರು ಮನುವಾದಿ ಸಮಾಜದ ಎಲ್ಲಾ ಅನಿಷ್ಟಗಳ ನಿವಾರಣೆಗೆ ಕ್ರಮಗಳನ್ನು ಕೈಗೊಂಡರು. ಅವುಗಳಲ್ಲಿ ವೇಶ್ಯಾವಾಟಿಕೆಯನ್ನು ನಿರ್ನಾಮ ಮಾಡಿ ವೇಶ್ಯೆಯರನ್ನು ವಿಮೋಚನೆಗೊಳಿಸುವ ಕ್ರಮವೂ ಒಂದಾಗಿತ್ತು.

ಮೈಕೂಲಿ ಮಾಡುತ್ತ ಪಣ್ಯಾಂಗನೆಯರೆನಿಸಿದ ವೇಶ್ಯೆಯರಿಗೂ ಬಸವಣ್ಣನವರು ಆತ್ಮಗೌರವದ ಪಾಠ ಕಲಿಸಿದರು. ಪಣ್ಯಾಂಗನೆಯರು ಇಷ್ಟಲಿಂಗ ದೀಕ್ಷೆ ಪಡೆದು ಪುಣ್ಯಾಂಗನೆಯರಾದರು. ಅಂಥವರಲ್ಲಿ ಸೂಳೆ ಸಂಕವ್ವೆಯಂಥ ಶರಣೆಯರು ವಚನಕಾರ್ತಿಯರೂ ಆದರು. ಮೈಕೂಲಿಯಿಂದಾಗಿ ಅಪಮಾನಕ್ಕೊಳಗಾದವರು ಆತ್ಮಗೌರವದೊಂದಿಗೆ ಕೈಕೂಲಿ ಮಾಡತೊಡಗಿದರು. ವೇಶ್ಯೆಯರ ಮಕ್ಕಳಿಗೂ ಇಷ್ಟಲಿಂಗ ದೀಕ್ಷೆ ಕೊಟ್ಟು ‘‘ದಾಸೀ ಪುತ್ರನಾಗಲಿ, ವೇಶ್ಯಾಪುತ್ರನಾಗಲಿ, ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ’’ ಎಂದು ಸಾರುವುದರ ಮೂಲಕ ವೇಶ್ಯಾಪುತ್ರರಿಗೂ ಸಮಾನತೆಯ ಸ್ಥಾನದಲ್ಲಿ ನಿಲ್ಲಿಸಿದರು. ಇಷ್ಟಲಿಂಗದೀಕ್ಷೆ ಪಡೆದ ರಾಜಪುತ್ರನೂ ಅಷ್ಟೇ, ವೇಶ್ಯಾಪುತ್ರನೂ ಅಷ್ಟೇ ಎಂಬುದನ್ನು ಲೋಕಕ್ಕೆ ಅರುಹಿದರು. ಇಂಥ ಸರ್ವಸಮತ್ವದ ವ್ಯವಸ್ಥೆಯನ್ನು ಇಡೀ ವಿಶ್ವದಲ್ಲೇ ಪ್ರಥಮಬಾರಿಗೆ ತಂದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75