74ರ ಇಳಿವಯಸ್ಸಿನಲ್ಲೂ ಕೃಷಿಯನ್ನೇ ನೆಚ್ಚಿಕೊಂಡ ರೈತ ಸಣ್ಣಪುಟ್ಟೇ ಗೌಡ

Update: 2025-03-03 11:51 IST
74ರ ಇಳಿವಯಸ್ಸಿನಲ್ಲೂ ಕೃಷಿಯನ್ನೇ ನೆಚ್ಚಿಕೊಂಡ ರೈತ ಸಣ್ಣಪುಟ್ಟೇ ಗೌಡ
  • whatsapp icon

ಮಂಡ್ಯ: ಯುವಜನ ಕೃಷಿಯಿಂದ ವಿಮುಖರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ತನ್ನ ಇಳಿವಯಸ್ಸಿನಲ್ಲೂ ಕೃಷಿ ಕಾಯಕವನ್ನು ಮುಂದುವರಿಸಿರುವ ಪಾಂಡವಪುರ ತಾಲೂಕು ರಾಗಿಮುದ್ದನಹಳ್ಳಿ ಗ್ರಾಮದ ಸಣ್ಣಪುಟ್ಟೇಗೌಡ ಅಲಿಯಾಸ್ ಕುಳ್ಳೇಗೌಡ, 74ರ ಇಳಿವಯಸ್ಸಿನಲ್ಲೂ ಯಶಸ್ವಿ ಕೃಷಿಕರಾಗಿ ಮಾದರಿಯಾಗಿದ್ದಾರೆ.

ಉಳುಮೆ, ಇತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಯಂತ್ರಗಳನ್ನು ಬಳಸದೆ ತಮ್ಮ ಪೂರ್ವಿಕರು ಅನುಸರಿಸಿಕೊಂಡು ಬರುತ್ತಿದ್ದ ನಾಟಿ(ಹಳ್ಳಿಕಾರ್) ತಳಿಯ ದನಗಳನ್ನೇ ಬಳಸಿಕೊಂಡು ಯುವಕರೂ ನಾಚುವಂತೆ ಉಳುಮೆ ಮಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ರಾಸಾಯನಿಕ ಅವಲಂಬಿಸಿದೆ ಸಾಂಪ್ರದಾಯಿಕವಾದ ಹಟ್ಟಿ ಗೊಬ್ಬರದ ಬಳಕೆಯಿಂದ ಸಮೃದ್ಧ ಬೆಳೆ ಬರುತ್ತಿದೆ. ಇವರ ಮಿಶ್ರ ಬೇಸಾಯ ಪದ್ಧತಿ ಇವರಿಗೆ ಲಾಭ ತಂದುಕೊಡುತ್ತಿದೆ.

ಯಾವುದೇ ಕಾಲುವೆ, ಕೆರೆಕಟ್ಟೆಗಳ ನೀರಿನ ಮೂಲವಿಲ್ಲದ ಅಷ್ಟೇನೂ ಫಲವತ್ತಲ್ಲದ ತನ್ನ ಮೂರು ಎಕರೆ ಭೂಮಿಯಲ್ಲಿ ಎರಡು ಕೊಳವೆಬಾವಿಗಳ ಮೂಲಕ ನೀರನ್ನು ಪೂರೈಸಿಕೊಳ್ಳುತ್ತಿದ್ದಾರೆ. ಹೆಚ್ಚು ನೀರು ಬೇಡುವ ಕಬ್ಬು, ಭತ್ತದಂತಹದ ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಕಡಿಮೆ ನೀರಿನಲ್ಲೇ ಬೆಳೆಯಬಹುದಾದ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆದು ಕೃಷಿಯನ್ನು ಲಾಭದಾಯಕ ಮಾಡಿಕೊಂಡಿದ್ದಾರೆ.

ದೀರ್ಘಾವಧಿ ಇಳುವರಿ ಕೊಡುವ ತೋಟಗಾರಿಕಾ ಬೆಳೆಗಳಾದ ಅಡಿಕೆ, ದಾಳಿಂಬೆ, ಮಾವು, ಸಪೋಟ, ಸೀಬೆ, ನುಗ್ಗೆಗೆ ಪ್ರಾಶಸ್ತ್ಯ ನೀಡಿದ್ದಾರೆ. ಈ ಬೆಳೆಗಳ ಜತೆಯಲ್ಲಿ ಋತುಮಾನಕ್ಕಾಸರವಾಗಿ ಬೆಳೆಯುತ್ತಿರುವ ಈರುಳ್ಳಿ, ಬೆಳ್ಳುಳ್ಳಿ, ಅವರೆ, ಉದ್ದು, ಕೊತ್ತಂಬರಿ, ಮೂಲಂಗಿ, ಕಿರಕೀರೆ, ದಂಟು, ಚಕ್ಕೋತ, ಸಬ್ಸಿಗೆ, ಮೆಂತ್ಯೆ ಸೊಪ್ಪು ಸೇರಿದಂತೆ ಇತರ ದ್ವಿದಳ ಧಾನ್ಯಗಳ ಬೆಳೆಗಳು ವಾರ, ತಿಂಗಳು, ವರ್ಷಾನುಸಾರ ಕೈತುಂಬಾ ಲಾಭವನ್ನು ತಂದುಕೊಡುತ್ತಿವೆ. ಗ್ರಾಮಕ್ಕೆ ಮೈಸೂರು ಹತ್ತಿರವಿರುವುದರ ಜತೆಗೆ, ಸಾಗಾಟಕ್ಕೆ ವಾಹನಗಳ ಸೌಲಭ್ಯ ಇರುವುದರಿಂದ ಮೈಸೂರಿನ ಎಪಿಎಂಸಿ ಮಾರುಕಟ್ಟೆಗೆ ಸೊಪ್ಪು, ತರಕಾರಿ, ಹಣ್ಣುಗಳನ್ನು ನೇರವಾಗಿ ಸಾಗಿಸಿ ಮಾರಾಟ ಮಾಡುತ್ತಾರೆ. ಸ್ಥಳೀಯವಾಗಿಯೇ ಸಾಕಷ್ಟು ಮಾರಾಟವಾಗುತ್ತದೆ.

ಹಸು, ಮೇಕೆ, ಎಮ್ಮೆಗಳಿಂದ ಗೊಬ್ಬರ: ಎರಡು ನಾಟಿ ಹಸು, ಎಮ್ಮೆ, 10 ಮೇಕೆಗಳನ್ನು ಸಾಕಿಕೊಂಡಿರುವ ಸಣ್ಣಪುಟ್ಟೇಗೌಡ, ಅವುಗಳ ಗೊಬ್ಬರವನ್ನೇ ಬೆಳೆಗಳಿಗೆ ಬಳಕೆ ಮಾಡುತ್ತಾರೆ. ಮೇಕೆ ಇಕ್ಕೆಯ ಗೊಬ್ಬರವನ್ನು ನೇರವಾಗಿ ಬೆಳೆಗಳ ಬುಡಕ್ಕೆ ಹಾಕುತ್ತಾರೆ. ಹಸು, ಎಮ್ಮೆಗಳ ತೊಪ್ಪೆ ಮತ್ತು ಗಂಜಲವನ್ನು ಗುಂಡಿಯಲ್ಲಿ ಕೊಳೆಸಿ ಬೆಳೆಗಳಿಗೆ ನೀರು ಹಾಯಿಸುವಾಗ ಅದರೊಂದಿಗೆ ನೀಡುತ್ತಾರೆ. ಶಿವಮೊಗ್ಗದಿಂದ ಅಡಿಕೆ ಗೋಟುಗಳನ್ನು ತಂದು ಸಸಿಯಾಗಿ ಬೆಳೆಸಿ ಒಂದಕ್ಕೆ 30 ರೂ.ಗಳಂತೆ ಮಾರಾಟ ಮಾಡುತ್ತಿದ್ದಾರೆ. ನೂರು ರೂ.ನಂತೆ ತೆಂಗಿನ ಸಸಿಯನ್ನೂ ಮಾರಾಟ ಮಾಡುತ್ತಿರುವುದು ಲಾಭ ತರುತ್ತಿದೆ. ಇವರ ಸಾಧನೆಯನ್ನು ಗುರುತಿಸಿ ವಿಶ್ವೇಶ್ವರಯ್ಯ ಡೆವಲಪ್‌ಮೆಂಟ್ ಆರ್ಗನೈಝೇಷನ್ ಆ್ಯಂಡ್ ಮೈಕ್ರೋ ಬಿ ಫೌಂಡೇಷನ್ ಎಂಬ ಸಂಸ್ಥೆ ಕೃಷಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಹಿಂದಿನಿಂದಲೂ ಕೃಷಿಯನ್ನು ನಂಬಿಕೊಂಡು ಬಂದಿದ್ದೇವೆ. ನಮ್ಮ ಕುಟುಂಬಕ್ಕೆ ಕೃಷಿಯೇ ಪ್ರಧಾನವಾಗಿದೆ. ನಾವು ರಸಗೊಬ್ಬರ, ಕ್ರಿಮಿನಾಶಕ ಬಳಸುವುದಿಲ್ಲ. ಹಟ್ಟಿ ಗೊಬ್ಬರದಲ್ಲೇ ಸಮೃದ್ಧ ಬೆಳೆ ಬರುತ್ತಿದೆ. ಅಷ್ಟೇನೂ ರೋಗಭಾದೆಯೂ ಬರುತ್ತಿಲ್ಲ. ಶ್ರೀಮಂತರಾಗದಿದ್ದರೂ ಕೃಷಿಯು ನೆಮ್ಮದಿಯ ಬದುಕನ್ನು ಕೊಟ್ಟಿದೆ.

ಸಣ್ಣಪುಟ್ಟೇಗೌಡ, ರೈತ

ನಾನೂ ತಂದೆ ಜತೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ವಯಸ್ಸಾಯಿತು ವಿಶ್ರಾಂತಿ ತೆಗೆದುಕೊಳ್ಳಿ ಎಂದರೂ ಕೇಳುವುದಿಲ್ಲ. ಏನಾದರೊಂದು ಕೃಷಿ ಚಟುವಟಿಕೆ ಮಾಡುವುದರಲ್ಲೇ ಅವರಿಗೆ ನೆಮ್ಮದಿ. ಇದು ನನ್ನ ಕೃಷಿಗೆ ಮತ್ತಷ್ಟು ಪ್ರೇರಣೆ ನೀಡುತ್ತಿದೆ.

ಚಂದ್ರಶೇಖರ್, ಸಣ್ಣಪುಟ್ಟೇಗೌಡರ ಪುತ್ರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News