ಬೆಂಗಳೂರು ಅಭಿವೃದ್ಧಿ: ಸಿಎಂ ಯಡಿಯೂರಪ್ಪರಿಂದ ಸೆ.8ರಂದು ನಗರ ಪರಿವೀಕ್ಷಣೆ

Update: 2019-09-07 16:41 GMT

ಬೆಂಗಳೂರು, ಸೆ. 7: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಕಾಮಗಾರಿಗಳು ಹಾಗೂ ಸಂಚಾರ ದಟ್ಟಣೆ, ಕಸ ವಿಲೇವಾರಿ ಸಮಸ್ಯೆ ಸೇರಿ ನಗರದ ಅಭಿವೃದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ(ಸೆ.8) ನಗರ ಪರಿವೀಕ್ಷಣೆ ನಡೆಸಲಿದ್ದಾರೆ.

ಸೆ.8ರ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ನಗರ ಸಂಚಾರ ನಡೆಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಹೆಬ್ಬಾಳ, ಟಿನ್ ಫ್ಯಾಕ್ಟರಿ, ಬೆಳ್ಳಂದೂರು ಹಾಗೂ ಸಿಲ್ಕ್‌ಬೋರ್ಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಲಿದ್ದಾರೆ.

ನಮ್ಮ ಮೆಟ್ರೋ, ವೈಟ್‌ಟಾಪಿಂಗ್ ಕಾಮಗಾರಿ ಹಾಗೂ ನಗರದ ಕಸದ ಸಮಸ್ಯೆ ಉಲ್ಬಣಗೊಂಡಿದ್ದು ಅದನ್ನು ಖುದ್ದು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದಾರೆ. ನಗರ ಪ್ರದಕ್ಷಿಣೆ ಕುರಿತಂತೆ, ಪ್ರತಿ ರವಿವಾರ ನಗರ ಪ್ರದಕ್ಷಿಣೆ ನಡೆಸಿ, ನಗರದ ಸಮಸ್ಯೆಗಳನ್ನು ಖುದ್ದು ಅರಿಯಲಿದ್ದಾರೆ ಎಂದು ತಿಳಿಸಲಾಗಿದೆ.

ನಗರದ ಸಂಸದರು, ಸಚಿವರೊಂದಿಗೆ ಸಭೆ ನಡೆಸಿರುವ ಸಿಎಂ ಯಡಿಯೂರಪ್ಪ, ಕಸದ ಸಮಸ್ಯೆ ಪರಿಹಾರಕ್ಕೆ ಅಗತ್ಯವಿರುವ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಕಸ ವಿಲೇವಾರಿಗೆ ಘನತ್ಯಾಜ್ಯ ಘಟಕಗಳನ್ನು ನಿರ್ಮಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News