ಬೆಂಗಳೂರು ನಗರ ಪ್ರದಕ್ಷಿಣೆ: ಮುಖ್ಯಮಂತ್ರಿ ಮುಂದೆಯೇ ಮುನಿಸು ?

Update: 2019-09-08 12:42 GMT

ಬೆಂಗಳೂರು, ಸೆ.8: ಉಪಮುಖ್ಯಮಂತ್ರಿ ಸ್ಥಾನ ದೊರೆಯದೆ ಮುನಿಸಿಕೊಂಡಿದ್ದರು ಎನ್ನಲಾಗಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರ ಅಸಮಾಧಾನ ಇನ್ನೂ ಶಮನವಾಗಿಲ್ಲ ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವಿವಾರ ನಗರ ಪ್ರದಕ್ಷಿಣೆ ವೇಳೆ ಮತ್ತೊಮ್ಮೆ ಸಾಬೀತಾಗಿದೆ.

ನಗರದ ಹಲವು ಭಾಗಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರ ಪ್ರದಕ್ಷಿಣೆ ಕೈಗೊಂಡಾಗ, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್ ಪರಸ್ಪರ ಒಂದೇ ಬಸ್‌ನಲ್ಲಿ ಪ್ರಯಾಣಿಸಿ, ಅಕ್ಕಪಕ್ಕ ನಿಂತಿದ್ದರೂ ಮಾತನಾಡಿಸದ ಪ್ರಸಂಗ ನಡೆಯಿತು.

ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಿಂದ ಬೆಳಗ್ಗೆ ಬಿಎಂಟಿಸಿ ಬಸ್‌ಗಳಲ್ಲಿ ನಗರ ಪ್ರದಕ್ಷಿಣೆಗೆ ತೆರಳಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರಾದ, ಅಶೋಕ್, ಅಶ್ವಥ್ ನಾರಾಯಣ್ ಸೇರಿದಂತೆ ಪ್ರಮುಖರಿದ್ದರು. ಆದರೆ, ಒಂದೇ ಬಸ್‌ನ ಅಕ್ಕಪಕ್ಕದ ಸೀಟಿನಲ್ಲಿದ್ದರೂ, ಮಾತನಾಡಲಿಲ್ಲ ಎನ್ನಲಾಗಿದೆ.

ಅಧಿಕಾರಿಗಳ ಮುನಿಸು: ಸ್ಕಿಲ್ ಬೋರ್ಡ್ ಜಂಕ್ಷನ್ ಬಳಿ ಕೆಎಸ್‌ಆರ್‌ಪಿ ಮೈದಾನಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಲ್ಲಿ ಗೌರವ ವಂದನೆ ನೀಡಲಾಯಿತು. ಈ ವೇಳೆ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಕೆಎಸ್‌ಆರ್‌ಪಿ, ಎಡಿಜಿಪಿ ಅಲೋಕ್ ಕುಮಾರ್ ಅಕ್ಕ-ಪಕ್ಕದಲ್ಲೇ ಇದ್ದರೂ ಪರಸ್ಪರ ಮಾತನಾಡಲಿಲ್ಲ ಎಂದು ಹೇಳಲಾಗುತ್ತಿದೆ.

ಸಂಚಾರ ದಟ್ಟಣೆ: ಮುಖ್ಯಮಂತ್ರಿ, ಸಂಪುಟದ ಸಹೋದ್ಯೋಗಿಗಳು ನಗರ ಪ್ರದಕ್ಷಿಣೆ ನಡೆಸಿದ ಹಿನ್ನೆಲೆ ರಜೆ ದಿನ ರವಿವಾರವೂ ನಗರದ ಹಲವು ಕಡೆ ಸಂಚಾರ ದಟ್ಟಣೆ ಹೆಚ್ಚಾಗಿ, ವಾಹನಗಳು ಸಾಲು ಸಾಲಾಗಿ ದೃಶ್ಯಗಳು ಕಂಡುಬಂದವು.

ಬನ್ನೇರುಘಟ್ಟ, ಸಿಲ್ಕ್ ಬೋರ್ಡ್, ಹೊರ ವರ್ತುಲ ರಸ್ತೆ, ಟಿನ್‌ ಫ್ಯಾಕ್ಟರಿ ಸೇರಿದಂತೆ ಮತ್ತಿತರ ಕಡೆ ಕಿ.ಮೀ.ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಮುಖ್ಯಮಂತ್ರಿ ಬಂದು ಸ್ಥಳ ಪರಿಶೀಲನೆ ಮಾಡುವವರೆಗೂ ವಾಹನ ಸಂಚಾರವನ್ನು ತಡೆ ಹಿಡಿದಿದ್ದರಿಂದ ಹಾಗೂ ಅಧಿಕಾರಿಗಳು, ಇತರರು ಹತ್ತಾರು ಕಾರುಗಳಲ್ಲಿ ಬಂದ ಹಿನ್ನಲೆ ದಟ್ಟಣೆ ಹೆಚ್ಚಾಗಿತ್ತು.

ಆಯುಕ್ತ, ಉಪಮೇಯರ್ ನಡುವೆ ಮಾತಿನ ಚಕಮಕಿ

ನಗರ ಪ್ರದಕ್ಷಿಣೆ ವೇಳೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಹಾಗೂ ಉಪಮೇಯರ್ ಭದ್ರೇಗೌಡರ ನಡುವೆ ಮಾತಿನ ಚಕಮಕಿ ನಡೆಯಿತು. ‘ಈ ಕಡೆ ಬಾ’ ಎಂದ ಆಯುಕ್ತರ ಹೇಳಿಕೆಗೆ ಮುನಿಸಿಕೊಂಡ ಉಪಮೇಯರ್ ನಗರ ಪ್ರದಕ್ಷಿಣೆ ಅರ್ಧಕ್ಕೆ ನಿಲ್ಲಿಸಿದರು ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News