32 ಟನ್ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದ ಬಿಬಿಎಂಪಿ

Update: 2019-09-08 14:34 GMT

ಬೆಂಗಳೂರು, ಸೆ.8: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಕಳೆದ 5 ತಿಂಗಳಲ್ಲಿ ನಗರದ ವಿವಿಧ ವ್ಯಾಪಾರಿ ಕೇಂದ್ರಗಳ ಮೇಲೆ ದಾಳಿ ಮಾಡಿ 32 ಟನ್ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದು 86 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಪರಿಸರಕ್ಕೆ ಮಾರಕವಾಗುವ ಮತ್ತು ಒಂದು ಬಾರಿ ಬಳಕೆ ಮಾಡಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ರಾಜ್ಯ ಸರಕಾರ ನಿಷೇಧಿಸಿ ಆದೇಶ ಮಾಡಿದೆ. ಆದರೂ ನಗರದ ಹೋಟೆಲ್, ರೆಸ್ಟೋರೆಂಟ್, ತರಕಾರಿ-ಹಣ್ಣು ಮಳಿಗೆ, ಮೆಡಿಕಲ್ ಶಾಪ್, ಬೀದಿ ಬದಿ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಸ್ಪೂನ್, ಪ್ಲೆಟ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದು, ಕಡಿವಾಣ ಹಾಕುವ ಉದ್ದೇಶದಿಂದ ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ನಡೆಸಿ ಪ್ರಸಕ್ತ ಸಾಲಿನಲ್ಲಿ 32,118 ಕೆ.ಜಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಲ್ಲದೇ, ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆ ಮಾಡಿದಕ್ಕೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಕಳೆದ ಎಪ್ರಿಲ್‌ನಿಂದ ಆಗಸ್ಟ್ ಅಂತ್ಯದ ವರೆಗೆ 86,78,580 ರೂ. ದಂಡ ವಿಧಿಸಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕು ವರ್ಷದಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಎಂಟು ವಲಯದಲ್ಲಿ ದಾಳಿ ನಡೆಸಿ ಈವರೆಗೆ 2.64 ಲಕ್ಷ ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಕ್ಕೆ ಪಡೆದುಕೊಂಡು ವ್ಯಾಪಾರಿಗಳಿಗೆ 3.45 ಕೋಟಿ ರೂ. ದಂಡ ವಿಧಿಸಲಾಗಿದೆ. 2015-16ನೇ ಸಾಲಿನಲ್ಲಿ 16 ಸಾವಿರ ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 29.03 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಇನ್ನು, 2016-17ರಲ್ಲಿ 54 ಸಾವಿರ ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು ವ್ಯಾಪಾರಿಗಳಿಂದ 1 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು. 2017-18ರಲ್ಲಿ 40 ಸಾವಿರ ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 55.93 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 2018-19ರಲ್ಲಿ 1.12 ಲಕ್ಷ ರೂ. ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 73.90 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News